ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಯಲ್ಲಿ ಟೈರ್‌ಗೆ ಬೆಂಕಿ: ‘ಮಾಲಿನ್ಯ’ಕ್ಕೆ ಕೊಡುಗೆ!

Published 24 ನವೆಂಬರ್ 2023, 5:57 IST
Last Updated 24 ನವೆಂಬರ್ 2023, 5:57 IST
ಅಕ್ಷರ ಗಾತ್ರ

ಸುರಪುರ: ನಗರದಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಯಲ್ಲೂ ಹಳೆಯ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಇದು ಪರಿಸರದ ವಿಪರೀತ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಜೊತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಹತ್ತಾರು ಸಂಘಟನೆಗಳಿವೆ. ತಿಂಗಳಿಗೆ ಎರಡ್ಮೂರು ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ನಗರದ ಹೃದಯಭಾಗ ಗಾಂಧಿವೃತ್ತ, ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತ ಸೇರಿದಂತೆ ಇತರ ಜನನಿಬಿಡ ಪ್ರದೇಶದಲ್ಲಿ ಪ್ರತಿಭಟನೆ ನಡೆಸುವ ಸಂಘಟನೆಗಳು ಟೈರ್ ಸುಡುವುದನ್ನು ಮರೆಯುವುದಿಲ್ಲ!

ಟೈರ್ ಸುಟ್ಟಾಗ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗಿ ಅದು ಗಾಳಿಯಲ್ಲಿ ಸೇರಿ ವಾತಾವರಣ ಕಲುಷಿತ ಗೊಳಿಸುತ್ತದೆ. ಗಾಳಿ ಬೀಸಿದಂತೆಲ್ಲ ಕಪ್ಪು ಹೊಗೆ, ದುರ್ವಾಸನೆಯೂ ಮೂಗಿಗೆ ಅಡರುತ್ತದೆ. ಒಂದು ಟೈರ್ ಸುಡಲು ಕನಿಷ್ಠ ಅರ್ಧ ಗಂಟೆ ಹಿಡಿಯುತ್ತದೆ. ಇದರಿಂದ ರಸ್ತೆಯ ಡಂಬಾರ್‌ಗೂ ಹಾನಿಯಾಗಿ ರಸ್ತೆಯೂ ಹಾಳಾಗುತ್ತದೆ. ಟೈರ್‌ ಸುಟ್ಟ ಬಳಿಕ ಪ್ರತಿಭಟನಕಾರರು ಹೊರಟು ಹೋಗುತ್ತಾರೆ. ಆದರೆ, ಟೈರ್ ಬೂದಿ ಮಾತ್ರ ಅಲ್ಲೇ ಉಳಿಯುತ್ತದೆ. ಅದರಮೇಲೆ ವಾಹನಗಳು ಹಾದು ಹೋದರೆ, ದೂರದವರೆಗೂ ಹರಡುತ್ತದೆ.

‘ಟೈರ್‌ಗಳನ್ನು ಸಿಂಥೆಟಿಕ್ ರಬ್ಬರ್, ಸ್ಟೀಲ್, ನೈಲಾನ್, ಸಿಲಿಕಾ, ಪಾಲಿಸ್ಟರ್, ಕಾರ್ಬನ್ ಕಪ್ಪು, ಪೆಟ್ರೋಲಿಯಂ ಮತ್ತಿತರ ಪದಾರ್ಥಗಳಿಂದ ಸಿದ್ಧಪಡಿಸಿರುತ್ತಾರೆ. ಅನುಪಯುಕ್ತ ಟೈರ್‌ಗಳನ್ನು  ಕೈಗಾರಿಕೆಗಳಲ್ಲಿ ನವೀಕರಿಸಿ ಪುನರ್‌ ಬಳಕೆಮಾಡಲಾಗುತ್ತದೆ. ಸಂಪೂರ್ಣ ಅನುಪಯುಕ್ತ ಟೈರ್‌ಗಳನ್ನು ನಿಯಮಗಳ ಪ್ರಕಾರ ಸುರಕ್ಷಿತವಾಗಿ ವಿಲೇವಾರಿ ನಡೆಸಲಾಗುತ್ತದೆ’ ಎಂಬುದು ಪ್ರಜ್ಞಾವಂತ ನಾಗರಿಕರ ಅಂಬೋಣ.

‘ಸುಟ್ಟ ಟೈರ್‌ನಿಂದ ವಿಷಕಾರಿ ರಾಸಾಯನಿಕಗಳು ಬಿಡುಗಡೆ ಆಗುತ್ತವೆ. ಆರೋಗ್ಯಕ್ಕೆ ಹಾನಿಕಾರಕವಾದ ವಿಷ ಅನಿಲಗಳನ್ನು ಹೊರಸೂಸುತ್ತದೆ. ಇದು ಕ್ಯಾನ್ಸರ್‌ಗೂ ಕಾರಣವಾಗುತ್ತದೆ. ಹೀಗಾಗಿ ನಗರದಲ್ಲಿ ಯಾವುದೇ ಪ್ರತಿಭಟನೆ ವೇಳೆ ಟೈರ್ ಸುಡುವುದಕ್ಕೆ ಅವಕಾಶ ನೀಡಬಾರದು. ಈ ಕುರಿತು ಎಲ್ಲ ಸಂಘಟನೆಗಳ ಮುಖಂಡರ ಜೊತೆಗೆ ತಾಲ್ಲೂಕು ಆಡಳಿತ ಸಭೆ ನಡೆಸಬೇಕು. ಕಟ್ಟುನಿಟ್ಟಾಗಿ ಸೂಚನೆ ನೀಡಿ ಟೈರ್ ಸುಡದಂತೆ ನಿಗಾ ವಹಿಸಬೇಕು’ ಎಂಬುದು ನಾಗರಿಕರ ಆಗ್ರಹ.

ಸಾರ್ವಜನಿಕ ಸ್ಥಳದಲ್ಲಿ ಟೈರ್‌ ಸುಡಲು ಅವಕಾಶವಿಲ್ಲ. ಅದು ಶಿಕ್ಷಾರ್ಹ ಅಪರಾಧ. ಈ ನಿಯಮವನ್ನು ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೆ ತರುವ ಅಗತ್ಯವಿದೆ
ಸಿ.ಎನ್.ಭಂಡಾರೆ, ನಿವೃತ್ತ ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT