ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌
Last Updated 28 ಜುಲೈ 2018, 13:58 IST
ಅಕ್ಷರ ಗಾತ್ರ

ಬೀದರ್‌: ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಜಿಲ್ಲೆಯಲ್ಲಿ ಶನಿವಾರ ಸಂಜೆಯ ವರೆಗೆ ಒಪಿಡಿ ಬಂದ್‌ ಮಾಡಿ ಪ್ರತಿಭಟಿಸಿದರು.

ಬೆಳಿಗ್ಗೆ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳಿಗೆ ಸಂಜೆ 6 ಗಂಟೆಯ ನಂತರ ಬಂದು ಚಿಕಿತ್ಸೆ ಪಡೆಯುವಂತೆ ಸೂಚಿಸಿದರು. ಗ್ರಾಮೀಣ ಪ್ರದೇಶದಿಂದ ಬಂದಿದ್ದ ರೋಗಿಗಳು ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು. ನಗರ ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಗಳ ಪ್ರವೇಶ ದ್ವಾರದಲ್ಲಿಯೇ ವೈದ್ಯರ ಮುಷ್ಕರದ ಪ್ರಯುಕ್ತ ಹೊರ ರೋಗಿಗಳ ಸೇವೆ ಲಭ್ಯ ಇಲ್ಲ ಎಂದು ಬಿಳಿ ಹಾಳೆ ಮೇಲೆ ಬರೆದು ಅಂಟಿಸಲಾಗಿತ್ತು.

ಜಿಲ್ಲಾ ಕೇಂದ್ರದಲ್ಲಿಯೇ ರೋಗಿಗಳು ಸ್ವಲ್ಪ ತೊಂದರೆ ಅನುಭವಿಸುವಂತಾಯಿತು. ಬ್ರಿಮ್ಸ್‌ನಲ್ಲಿ ಶುಕ್ರವಾರ ದುರ್ನಡತೆ ಹಾಗೂ ಕರ್ತವ್ಯ ಲೋಪದ ಆರೋಪದ ಮೇಲೆ ಬೇರೆ ಬೇರೆ ವಿಭಾಗಗಳ 19 ಕಿರಿಯ ವೈದ್ಯರನ್ನು  ಸೇವೆಯಿಂದ ವಜಾ ಗೊಳಿಸಲಾಗಿದೆ. ವೈದ್ಯರ  ಸಂಖ್ಯೆ ಕಡಿಮೆ ಇದ್ದ ಕಾರಣ ರೋಗಿಗಳು ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆದರು. ಖಾಸಗಿ ಆಸ್ಪತ್ರೆಗಳಲ್ಲಿ ರಸ್ತೆ ಅಪಘಾತ, ಹೆರಿಗೆ ಮತ್ತಿತರ ತುರ್ತು ಚಿಕಿತ್ಸೆ ನೀಡಲಾಯಿತು.

ಬ್ರಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದ್ದ ಕಾರಣ ಹಾಜರಿದ್ದ ವೈದ್ಯರು ಸ್ವಲ್ಪ ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಾಯಿತು. ನೌಕರರು ರೋಗಿಗಳಿಗೆ ಗಾಲಿ ಕುರ್ಚಿ ಕೊಡಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿತು. ಗರ್ಭಿಣಿಯೊಬ್ಬಳಿಗೆ ಗಾಲಿ ಕುರ್ಚಿ ದೊರೆಯದಿದ್ದಕ್ಕೆ ಪ್ರಯಾಸಪಟ್ಟು ನಡೆದುಕೊಂಡು ಹೋಗುವಂತಾಯಿತು.

ಜಿಲ್ಲೆಯ ಪಟ್ಟಣ, ತಾಲ್ಲೂಕು ಕೇಂದ್ರ ಹಾಗೂ ಹೋಬಳಿಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಸಹಜವಾಗಿತ್ತು. ನರ್ಸಿಂಗ್‌ ಹೋಮ್‌ಗಳಲ್ಲಿ ತುರ್ತು ಚಿಕಿತ್ಸೆ ಹಾಗೂ ಒಳರೋಗಿ ವಿಭಾಗಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

‘ಬೀದರ್‌ ತಾಲ್ಲೂಕಿನ 226 ಖಾಸಗಿ ಆಸ್ಪತ್ರೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 385 ಖಾಸಗಿ ಆಸ್ಪತ್ರೆಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಹೊರ ರೋಗಿಗಳಿಗೆ ಮಾತ್ರ ಸಂಜೆಯ ವರೆಗೆ ಚಿಕಿತ್ಸೆ ನೀಡಿಲ್ಲ. ಒಳ ರೋಗಿಗಳ ವಿಭಾಗದಲ್ಲಿ ಸೇವೆ ಮುಂದುವರಿಸಲಾಗಿದೆ’ ಎಂದು ಐಎಂಎ ಅಧ್ಯಕ್ಷೆ ಡಾ.ಲಲಿತಮ್ಮ ತಿಳಿಸಿದರು.

ತೊಂದರೆಯಾಗಿಲ್ಲ:

‘ಖಾಸಗಿ ವೈದ್ಯರ ಮುಷ್ಕರದ ಪ್ರಯುಕ್ತ ಸರ್ಕಾರಿ ವೈದ್ಯರಿಗೆ ಶನಿವಾರ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಎ.ಜಬ್ಬಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT