ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್| ಆಲಿಕಲ್ಲು ಮಳೆ: ತೋಟಗಾರಿಕೆ ಬೆಳೆ ಹಾನಿ

650 ಹೆಕ್ಟೇರ್‌ ಪ್ರದೇಶದಲ್ಲಿನ ಬಿಳಿ ಜೋಳ, ಕುಸುಬಿ, ಗೋಧಿ ನೀರು ಪಾಲು
Last Updated 19 ಮಾರ್ಚ್ 2023, 16:13 IST
ಅಕ್ಷರ ಗಾತ್ರ

ಬೀದರ್: ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 11.35 ಮಿಲಿ ಮೀಟರ್‌ ಮಳೆಯಾಗಿದೆ. ಕಮಲನಗರ ತಾಲ್ಲೂಕಿನ ದಾಬಕಾದಲ್ಲಿ 42.30 ಮಳೆ ದಾಖಲಾಗಿದೆ. 650 ಹೆಕ್ಟೇರ್‌ ಪ್ರದೇಶದಲ್ಲಿನ ಬಿಳಿ ಜೋಳ, ಕುಸುಬಿ, ಗೋಧಿ ನೀರು ಪಾಲಾಗಿದೆ. 152 ಹೆಕ್ಟೇರ್‌ ಪ್ರದೇಶದಲ್ಲಿನ ಕಲ್ಲಂಗಡಿ, ತರಬೂಜ್, ಮಾವು ಹಾಗೂ ಟೊಮೆಟೊ ಬೆಳೆ ಹಾಳಾಗಿದೆ.

ಬೀದರ್‌ ತಾಲ್ಲೂಕಿನ ಜನವಾಡ ಹೋಬಳಿಗ ಬೆಳೆ ಹಾನಿಯಾದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್‌.ಎಲ್, ಶಾಸಕ ರಹೀಂ ಖಾನ್‌ ಭೇಟಿ ನೀಡಿ ಪರಿಶೀಲಿಸಿದರೆ, ಹುಮನಾಬಾದ್ ತಾಲ್ಲೂಕಿನಲ್ಲಿ ಶಾಸಕ ರಾಜಶೇಖರ ಪಾಟೀಲ ಬೆಳೆ ಹಾನಿ ವೀಕ್ಷಿಸಿದರು.

ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಹಾನಿಯಾಗಿರುವುದು ಕಂಡು ಬಂದಿದೆ. ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ನಂತರ ನಿಖರ ಮಾಹಿತಿ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಜೋಳದ ಬೆಳೆ ಹಾನಿ

ಕಮಲನಗರ: ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೋಳ, ಕುಸುಬೆ, ಗೋಧಿ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದ್ದು, ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.

ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದರು. ಆದರೆ, ಆಲಿಕಲ್ಲು ಮಳೆಯಿಂದಾಗಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಖತಗಾಂವ ಗ್ರಾಮದ ರೈತ ಮಲ್ಲಿಕಾರ್ಜುನ ಬಿರಾದಾರ ಹೇಳಿದರು.

ಬೆಳೆ ಹಾನಿಯಿಂದ ಸಂಕಷ್ಟಕ್ಕಿಡಾದ ರೈತರಿಗೆ ಬೆಳೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ವೈಜಿನಾಥ ವಡ್ಡೆ ಒತ್ತಾಯಿಸಿದ್ದಾರೆ.

ಅಪಾರ ಬೆಳೆ ನಷ್ಟ

ಚಿಟಗುಪ್ಪ: ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಮಾವು, ಗೋಧಿ ಬೆಳೆ ಸೇರಿದಂತೆ ಹಲವಾರು ಬೆಳೆಗಳಿಗೆ ಹಾನಿಯಾಗಿದೆ.

ಪಟ್ಟಣ, ಕುಡಂಬಲ್‌, ಮುತ್ತಂಗಿ, ಬೇಮಳಖೇಡಾ, ಮಂಗಲಗಿ, ಬನ್ನಳ್ಳಿ ಗ್ರಾಮಗಳಲ್ಲಿ ಮಾವು ಬೆಳೆ ಹಾಳಾಗಿದೆ.

ರೈತ ರೇವಣಪ್ಪ ಹೂಗಾರ ಮಾತನಾಡಿ, ‘ಎರಡು ಎಕರೆ ಮಾವಿನ ತೋಟದಲ್ಲಿ ಬೆಳೆದ ಮಾವು, ದ್ರಾಕ್ಷಿ ಮಳೆಯಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದರು.

ತಾಳಮಡಗಿ, ನಿರ್ಣಾ ಗ್ರಾಮಗಳಲ್ಲಿ ಗೋಧಿ ಬೆಳೆ ನೆಲಕಚ್ಚಿದೆ. ಒಂದೆರಡು ದಿನಗಳಲ್ಲಿ ಗೋಧಿ ರಾಶಿ ಮಾಡಬೇಕಿತ್ತು. ಧಿಡೀರನೆ ಆಲಿಕಲ್ಲು ಮಳೆ ಸುರಿದಿದ್ದಕ್ಕೆ ಬೆಳೆ ಹಾಳಾಗಿದೆ ಎಂದು ರೈತ ಶಂಕರೆಪ್ಪ ಹೇಳಿದರು.

ಹೊಲಗದ್ದೆಗಳಲ್ಲಿ ನೀರು ನಿಂತಿರುವುದರಿಂದ ಒಳಗೆ ಹೋಗುವುದಕ್ಕೂ ಆಗುತ್ತಿಲ್ಲ. ಬೆಳೆ ಹಾಳಾಗಿರುವುದನ್ನು ನೋಡಲು ಆಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

250 ಹೆಕ್ಟೇರ್ ಬೆಳೆ ಹಾನಿ

ಭಾಲ್ಕಿ: ತಾಲ್ಲೂಕಿನ ವಿವಿಧೆಡೆ ಕಳೆದ ಎರಡು ದಿನ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತೋಟಗಾರಿಕೆಗೆ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಅಹಮದಾಬಾದ್, ಕದಲಾಬಾದ, ಕುಂಟೆ ಸಿರ್ಸಿ, ಕಲವಾಡಿ, ದಾಡಗಿ, ಕೋನ ಮೇಳಕುಂದಾ, ನಿಟ್ಟೂರು, ಕೂಡ್ಲಿ, ನಾಗರಾಳ ಸೇರಿದಂತೆ ಇತರೆಡೆ ರೈತರು ಬೆಳೆದ ಮಾವು, ಕಲ್ಲಂಗಡಿ, ಖರಬೂಜ, ಟೊಮೆಟೊ, ನುಗ್ಗೆಕಾಯಿ ಸೇರಿದಂತೆ ತರಕಾರಿ ಬೆಳೆಗಳು ಹಾಳಾಗಿವೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ದಿನದಲ್ಲಿ 141 ಹೆಕ್ಟೇರ್ ಬೆಳೆ ಹಾನಿ

ಹುಮನಾಬಾದ್: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದ ಒಟ್ಟು 141 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಮಾರುತಿ ತಿಳಿಸಿದರು.

ಮಾವು 20 ಹೆಕ್ಟೇರ್, ಕಲ್ಲಂಗಡಿ 44 , ಪಪಾಯಿ 40, ಟಮೋಟ 18, ಮೆಣಸೀನಕಾಯಿ ಸೇರಿದಂತೆ ಇತರೆ ತರಕಾರಿ 12 ಹೆಕ್ಟೇರ್ ಎಂದು ಮಾಹಿತಿ ನೀಡಿದರು.

ಬೆಳೆ ಹಾನಿ ಸರ್ವೆ

ಔರಾದ್: ಕಳೆದ ಎರಡು ದಿನಗಳಿಂದ ತಾಲ್ಲೂಕಿನ ವಿವಿಧೆಡೆ ಅಕಾಲಿಕ ಮಳೆಯಿಂದಾಗಿ ಬೆಳೆಹಾನಿ ಸರ್ವೆ ಮಾಡಲಾಗುವುದು ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಈ ಅಕಾಲಿಕ ಮಳೆಯಿಂದ ನಮ್ಮ ತಾಲ್ಲೂಕಿನಲ್ಲಿ ಅಷ್ಟೊಂದು ಹಾನಿಯಾಗಿಲ್ಲ. ಮಾಂಜ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಹಾನಿಯಾದ ಬಗ್ಗೆ ಮಾಹಿತಿ ಬಂದಿದೆ. ಕಂದಾಯ ನಿರೀಕ್ಷಕರಿಂದ ಮಾಹಿತಿ ಕೇಳಿದ್ದೇವೆ. ಆದಷ್ಟು ಬೇಗ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT