ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ಬಾಡುತ್ತಿದ್ದ ಬೆಳೆಗೆ ಮಳೆ ವರದಾನ: ಸಂತಸ

Published 2 ಜುಲೈ 2024, 15:25 IST
Last Updated 2 ಜುಲೈ 2024, 15:25 IST
ಅಕ್ಷರ ಗಾತ್ರ

ಹುಲಸೂರ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು, ಸಿಡಿಲು ಸಹಿತ ಮಳೆ ಸುರಿದು ರೈತರಿಗೆ ಹರ್ಷ ತಂದಿತು. ನಂತರ ನಿರಂತರವಾಗಿ ತುಂತುರು ಮಳೆ ಸುರಿಯಿತು. ಜಮೀನುಗಳಲ್ಲಿ ನೀರು ಹರಿದು ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ.

ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದು ವಾತಾವರಣ ಸೃಷ್ಟಿಯಾಗಿತ್ತು. ನೀರಿಲ್ಲದೆ ಒಣಗಿ ಹಾಳಾಗುತ್ತಿದ್ದ ಬೆಳೆಗಳಿಗೆ ವರುಣನ ಕೃಪೆಯಿಂದಾಗಿ ಜೀವ ಕಳೆ ಬರಲಾರಂಭಿಸಿದ್ದು, ಅನ್ನದಾತರ ಸಂತಸಕ್ಕೆ ಕಾರಣವಾಗಿದೆ.

ಮುಂಗಾರು ಪೂರ್ವ ಮಳೆಗೆ ರೈತರು ಕೃಷಿ ಭೂಮಿ ಹದಗೊಳಿಸಿಕೊಂಡು ಬಿತ್ತನೆ ಕಾರ್ಯ ಕೈಗೊಂಡಿದ್ದರು. ಪ್ರಮುಖ ಬೆಳೆಗಳಾದ ತೊಗರಿ, ಉದ್ದು, ಹೆಸರು, ಸೋಯಾ ಅವರೆ ಬೆಳೆಗಳಿಗೆ ಮಳೆ ವರದಾನವಾಗಿತ್ತು. ತದನಂತರ ಕಳೆದ ಕೆಲ ವಾರಗಳಿಂದ ಮಾಯವಾಗಿದ್ದ ಮಳೆ ಇದೀಗ ಬೀಳುತ್ತಿರುವುದರಿಂದ ಬೆಳೆಗಳಿಗೆ ವರದಾನವಾಗಿದೆ. ಬಿತ್ತಿದ ಬೆಳೆಗಳಲ್ಲಿ ಕಳೆ ತೆಗೆದು ರಸಗೊಬ್ಬರ ನೀಡಿ ಬೆಳೆಗಳ ಬೆಳವಣಿಗೆಗೆ ಮಳೆ ಅನುಕೂಲಕರವಾಗಿ ಪರಿಣಮಿಸಿದೆ.

ಸಂಜೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಂದ ಮನೆಗೆ ತೆರಳಲು ತೀವ್ರ ತೊಂದರೆ ಅನುಭವಿಸಿದರು.

ಈವರೆಗೆ ಬಿದ್ದ ಮಳೆಯಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲವೆಂದು ತಹಶೀಲ್ದಾರ್ ಶಿವಾನಂದ್ ಮೇತ್ರೆ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT