ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಸೋತಿದ್ದೇನೆ, ಸತ್ತಿಲ್ಲ: ಭಗವಂತ ಖೂಬಾ ವಿರುದ್ಧ ರಾಜಶೇಖರ ಪಾಟೀಲ ವಾಗ್ದಾಳಿ

Published 2 ಅಕ್ಟೋಬರ್ 2023, 16:25 IST
Last Updated 2 ಅಕ್ಟೋಬರ್ 2023, 16:25 IST
ಅಕ್ಷರ ಗಾತ್ರ

ಬೀದರ್‌: ‘ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹುಮನಾಬಾದ್‌ ಕ್ಷೇತ್ರದಿಂದ ನಾನು ಸೋತಿದ್ದೇನೆ, ಸತ್ತಿಲ್ಲ. ಈಗಲೂ ಜೀವಂತವಾಗಿದ್ದೇನೆ’ ಎಂದು ಮಾಜಿಸಚಿವರೂ ಆದ ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಹುಮನಾಬಾದ್‌ ಭಾವುಕರಾಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರ್‌ ಜಿಲ್ಲೆ ಹಾಗೂ ಹುಮನಾಬಾದ್‌ ಕ್ಷೇತ್ರದ ಜನ ನನ್ನ ಜತೆಗಿದ್ದಾರೆ. ನನ್ನ ಪರಿವಾರದ ಮೇಲೆ ಬಹಳ ಭಕ್ತಿ ಇದೆ. ಚುನಾವಣೆ ನಂತರ ಅನೇಕ ಜನ ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಬರುವ ಲೋಕಸಭೆ ಚುನಾವಣೆಗೆ ನಿಲ್ಲಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದರು.

ನಾನು ಚುನಾವಣೆಯಲ್ಲಿ ಸ್ವಲ್ಪ ಅಂತರದಲ್ಲಿ ಸೋತೆ. ಆದರೆ, ಒಂದು ಮತದಿಂದ ಸೋತರೂ ಸೋಲೇ. ಅದೊಂದು ‘ಆ್ಯಕ್ಸಿಡೆಂಟ್‌. ಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಎಲ್ಲರೊಂದಿಗೆ ಚರ್ಚಿಸಿ ಮುಂದುವರೆಯುವೆ. ಬರುವ ಚುನಾವಣೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಬಿಸಿ ಮುಟ್ಟಿಸುವುದು ಖಚಿತ ಎಂದು ಹೇಳಿದರು.

ಖೂಬಾ ಅವರು ಎರಡು ಸಲ ಮೋದಿ ಅಲೆಯಲ್ಲಿ ಗೆದ್ದು ಬಂದಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯನಾಗಲು ಅವರಿಗೆ ಯೋಗ್ಯತೆ ಇಲ್ಲ. ಅವರ ಪರ ಯಾರೂ ಇಲ್ಲ. 400 ಜನ ಸ್ವಾಮೀಜಿಗಳು ಆರ್‌ಎಸ್‌ಎಸ್‌ ಮುಖಂಡರನ್ನು ಭೇಟಿ ಮಾಡಿ ಸ್ವಾಮೀಜಿಯೊಬ್ಬರನ್ನು ಬೀದರ್‌ ಕ್ಷೇತ್ರದಿಂದ ಕಣಕ್ಕಿಳಿಸುವಂತೆ ಕೋರಿದ್ದಾರೆ ಎಂದರು.

ಬಿಎಸ್‌ಎಸ್‌ಕೆಯಲ್ಲಿ ಆಗಿರುವ ಅಕ್ರಮದ ಕುರಿತು ತನಿಖೆ ನಡೆಸುವಂತೆ ಸಕ್ಕರೆ ಸಚಿವರಿಗೆ ಮನವಿ ಮಾಡಿದ್ದೇನೆ. ಇನ್ನು, ಹುಮನಾಬಾದ್‌ ಕ್ಷೇತ್ರದಲ್ಲಿ ನಾನು ಈ ಹಿಂದೆ ಭೂಮಿ ಪೂಜೆ ಮಾಡಿದ ಕಾಮಗಾರಿಗಳಿಗೆ ಹಾಲಿ ಶಾಸಕರು ಪುನಃ ಪೂಜೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.

‘ಲವ್‌ ಮಾಡಿದರೆ ಡೀಪ್‌ ಆಗಿ ಮಾಡಲಿ’

‘ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಈಗ ನಾಗಮಾರಪಳ್ಳಿ ಕುಟುಂಬದ ಮೇಲೆ ಎಲ್ಲಿಲ್ಲದ ಪ್ರೇಮ ಬಂದಿದೆ. ಲವ್‌ ಮಾಡಿದರೆ ಡೀಪ್‌ ಆಗಿ ಮಾಡಲಿ. ಮುಂದೆ ಯಾವುದೇ ಚುನಾವಣೆ ಬಂದರೂ ಇದೇ ತರಹದ ಪ್ರೇಮ ಇರಲಿ. ಇವರು ರಾವಣ ಅಲ್ಲ. ರಾವಣ ಹೋಗಿದ್ದಾನೆ’ ಎಂದು ಖೂಬಾ ವಿರುದ್ಧ ರಾಜಶೇಖರ ಪಾಟೀಲ ಹುಮನಾಬಾದ್‌ ಹರಿಹಾಯ್ದರು.

ನಿಜವಾಗಲೂ ನಾಗಮಾರಪಳ್ಳಿ ಕುಟುಂಬದ ಮೇಲೆ ಖೂಬಾ ಅವರಿಗೆ ಪ್ರೀತಿ ಇದ್ದಿದ್ದರೆ ಸೂರ್ಯಕಾಂತ ನಾಗಮಾರಪಳ್ಳಿಗೆ ಏಕೆ ಅನ್ಯಾಯ ಮಾಡಿದರು. ಅವರಿಗೆ ಟಿಕೆಟ್‌ ಕೊಡಿಸಲಿಲ್ಲ. ಈಗೇಕೆ ಲವ್‌ ಆಗಿದೆ ಗೊತ್ತಿಲ್ಲ. ಬರುವ ಜನವರಿಯಲ್ಲಿ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಖೂಬಾ ಹೇಳಿದ್ದಾರೆ. ಅವರಿಗೆ ಪ್ರಧಾನಿ ಮೋದಿಯವರು ಹೇಗೆ ಸಚಿವರಾಗಿ ಮಾಡಿದ್ದಾರೋ ಗೊತ್ತಿಲ್ಲ. ಸ್ವಲ್ಪವಾದರೂ ಅವರಿಗೆ ತಿಳಿವಳಿಕೆ ಇರಬೇಕು ಎಂದರು.

ಈಶ್ವರ ಖಂಡ್ರೆ ದನಿಗೂಡಿಸಿ, ಖೂಬಾ ತಿರುಕನ ಕನಸು ಕಾಣುತ್ತಿದ್ದಾರೆ. ರಾಜ್ಯದ ಜನ ಕಾಂಗ್ರೆಸ್‌ ಆಡಳಿತದಿಂದ ಸಂತೃಪ್ತರಾಗಿದ್ದಾರೆ ಎಂದರು. 

‘ನಾನು ತಟಸ್ಥನಾಗಿ ಉಳಿದಿಲ್ಲ, ಹೆದರಲ್ಲ’

‘ಬಿಡಿಸಿಸಿ ಬ್ಯಾಂಕಿನ ಚುನಾವಣೆಗೆ ಸಂಬಂಧಿಸಿದಂತೆ ನಾನು ತಟಸ್ಥನಾಗಿ ಉಳಿದಿಲ್ಲ. ನಾನು ಯಾರಿಗೂ ಹೆದರುವ ಮನುಷ್ಯ ಅಲ್ಲ’ ಎಂದು ರಾಜಶೇಖರ ಪಾಟೀಲ ಹುಮನಾಬಾದ್‌ ಹೇಳಿದರು.

ನಾನು ಯಾರಿಗೂ ಅಥವಾ ಬೇರೆಯವರು ನನಗೆ ಕೈಕೊಡುವುದು, ಕಾಲು ಕೊಡುವುದು ಪ್ರಶ್ನೆಯೇ ಇಲ್ಲ. 38 ವರ್ಷಗಳ ನಂತರ ಮೊದಲ ಸಲ ಚುನಾವಣೆ ಬಿಡಿಸಿಸಿ ಬ್ಯಾಂಕಿಗೆ ನಡೆಯುತ್ತಿದೆ. ಬೀಗರು ಕೈಕೊಡುವ ಪ್ರಶ್ನೆಯಿಲ್ಲ. ಚುನಾವಣೆ ಆಗಬಾರದು ಎಂದು ಪ್ರಯತ್ನಿಸಿದ್ದೆ. ಅದು ಆಗಲಿಲ್ಲ. ನಾನು ಪಕ್ಷದ ಜತೆಗಿದ್ದೇನೆ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಈಗ ಇಲ್ಲ. ಅವರು ಕೆಲಸ ಮಾಡಿದ್ದಾರೆ. ನಂತರ ಎರಡು ಅವಧಿಗೆ ಉಮಾಕಾಂತ ಕೆಲಸ ಮಾಡಿದ್ದಾರೆ. ನಮ್ಮ ಮನೆ ಒಡೆಯುವ ಶಕ್ತಿ ಯಾರಿಗೂ ಇಲ್ಲ. ಯಾರು ಕೂಡ ಅದರಲ್ಲಿ ಕೈ ಹಾಕಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT