ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಹಸಿವು ನೀಗಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು

ಸಾಗರ: ನಾಮಪತ್ರ ಸಲ್ಲಿಸಿದ ಕಾಗೋಡು ತಿಮ್ಮಪ್ಪ
Last Updated 24 ಏಪ್ರಿಲ್ 2018, 11:51 IST
ಅಕ್ಷರ ಗಾತ್ರ

ಸಾಗರ: ಐದು ವರ್ಷಗಳಲ್ಲಿ ಹಲವು ಯೋಜನೆಗಳ ಮೂಲಕ ಬಡವರ ಹಸಿವು ನೀಗಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದಾಗಿದೆ. ಈ ಹಿನ್ನೆಲೆಯಲ್ಲಿ ಬರಲಿರುವ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಮಾಡಿಕೊಡಲಿದ್ದಾರೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಚಾಮರಾಜ ಪೇಟೆ ಬಡಾವಣೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಹೊಸ ಯುಗಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆ. ಎಲ್ಲಾ ಜಾತಿ, ಧರ್ಮ, ವರ್ಗದವರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಅಭಿಪ್ರಾಯಪಟ್ಟರು.

ಬಡವರಿಗೆ ಭೂಮಿ ಹಕ್ಕು ನೀಡುವ ಸಲುವಾಗಿ ಬಗರ್‌ಹುಕುಂ ಕಾಯ್ದೆಯಡಿ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದವರಿಗೆ ಜೈಲಿಗೆ ಕಳುಹಿಸುವ ಕಾನೂನನ್ನು ಜಾರಿಗೆ ತರಲಾಗಿತ್ತು. ಮಲೆನಾಡಿನ ರೈತರ ಮೇಲೆ ಇಂಥ ಕರಾಳ ಕಾನೂನಿನ ತೂಗುಗತ್ತಿ ಈಗಲೂ ಇದೆ ಎಂದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ‘ಬಿಜೆಪಿ ನಂಬಿಕೆದ್ರೋಹ ಮಾಡಿದ ಕಾರಣ ನಾನು ಕಾಂಗ್ರೆಸ್ ಸೇರಿದ್ದೇನೆ. ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣ ತೊಟ್ಟಿದ್ದೇನೆ’ ಎಂದರು.

ಈ ಕ್ಷೇತ್ರದಲ್ಲಿ ಹಾಲಪ್ಪ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಬಿಜೆಪಿಯ ಸ್ಥಳೀಯ ಮುಖಂಡರ ಕುತಂತ್ರದಿಂದ ಅವರಿಗೆ ಟಿಕೆಟ್ ದೊರಕಿದೆ. ಹಾಲಪ್ಪ ಅವರಿಂದ ಸಾಕಷ್ಟು ಹಣ ಕಸಿಯುವ ಸಲುವಾಗಿ ಸ್ಥಳೀಯ ಬಿಜೆಪಿಯ ಕೆಲವರು ಇಂಥ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಸಂವಿಧಾನವನ್ನು ಬದಲಿಸುತ್ತೇನೆ ಎಂಬ ಹೇಳಿಕೆ ನೀಡುತ್ತಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದರ ಹಿಂದಿರುವ ಮರ್ಮವೇನು’ ಎಂದು ಪ್ರಶ್ನಿಸಿದ ಅವರು, ‘ಮೋದಿ ಅವರಿಗೆ ಸಂವಿಧಾನದ ಬಗ್ಗೆ ನಿಜಕ್ಕೂ ಗೌರವವಿದ್ದರೆ ಅನಂತಕುಮಾರ ಹೆಗಡೆ ಅವರಿಂದ ರಾಜೀನಾಮೆ ಪಡೆಯಬೇಕಿತ್ತು’ ಎಂದರು.

ಮುಖಂಡರಾದ ಕಲಗೋಡು ರತ್ನಾಕರ್, ಅನಿತಾ ಕುಮಾರಿ, ಬಿ. ಆರ್.ಜಯಂತ್, ಎಲ್.ಟಿ.ತಿಮ್ಮಪ್ಪ, ಮಕ್ಬುಲ್ ಅಹ್ಮದ್, ತೀ.ನ.ಶ್ರೀನಿವಾಸ್, ಕೆ.ಹೊಳಿಯಪ್ಪ, ಗಣಪತಿ ಹೆನಗೆರೆ, ತುಕಾರಾಂ ಶಿರವಾಳ, ಹೊನಗೋಡು ರತ್ನಾಕರ, ಎಂ.ಎ.ಸಲೀಂ, ಡಿ.ದಿನೇಶ್, ತಾರಾಮೂರ್ತಿ, ಗುಡ್ಡೆಮನೆ ನಾಗರಾಜ್, ಎಂ.ಬಿ. ಗಿರೀಶ್ ಗೌಡ, ಸೈಯದ್ ಅನ್ವರ್ ಬಾಷಾ, ಲಿಂಗರಾಜು, ಜಿ.ಕೆ.ಭೈರಪ್ಪ ಹಾಜರಿದ್ದರು.

‘ಕಾಗೋಡು ಮುಂದಿನ ಮುಖ್ಯಮಂತ್ರಿ’

ತಿಮ್ಮಪ್ಪ ಅವರು ನಾಮಪತ್ರ ಸಲ್ಲಿಸಿದ ನಂತರ ನಡೆದ ಬಹಿರಂಗ ಸಭೆಯಲ್ಲಿ ಅವರ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಕಾಗೋಡು ತಿಮ್ಮಪ್ಪ ಎಂದು ಘೋಷಣೆಗಳನ್ನು ಕೂಗಿದರು.ಆದರೆ ಕಾಗೋಡು ಮಾತ್ರ ತಮ್ಮ ಭಾಷಣದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೆ ಬರಲಿದ್ದು ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ನಗರದ ಗಣಪತಿ ದೇವಸ್ಥಾನದ ಆವರಣದಿಂದ ಕಾಂಗ್ರೆಸ್ ಕಾರ್ಯಕರ್ತರು ರೋಡ್ ಷೋ ನಡೆಸಿದರು. ಇದೇ ಸ್ಥಳಕ್ಕೆ ಬಂದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಕಾಗೋಡು ತಿಮ್ಮಪ್ಪ ಅವರ ಕಾಲಿಗೆ ನಮಸ್ಕರಿಸಿ ಅವರ ಜೊತೆಗೆ ತೆರೆದ ವಾಹನ ಏರಿ ಮೆರಣಿಗೆಯಲ್ಲಿ ಪಾಲ್ಗೊಂಡಿದ್ದರು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು ಗೋಪಾಲಕೃಷ್ಣ ಬೇಳೂರು ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದರಿಂದ ಪಕ್ಷದ ಬಲ ಮತ್ತಷ್ಟು ಹೆಚ್ಚಾಗಿದೆ. ಅವರಿಗೆ ಪ್ರಚಾರ ಕಾರ್ಯದ ಜೊತೆಗೆ ಇತರ ಎಲ್ಲಾ ಜವಾಬ್ದಾರಿಗಳನ್ನು ವಹಿಸಲಾಗುವುದು ಎಂದರು.ಕಾಂಗ್ರೆಸ್‌ಗೆ ಅಭಿವೃದ್ಧಿಯೇ ಪ್ರಮುಖ ವಿಷಯ. ಕ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ಮುಟ್ಟಿಸುವ ಜೊತೆಗೆ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆಯೂ ತಿಳಿಸಲಾಗುವುದು. ಕಾಂಗ್ರೆಸ್ ಸರ್ಕಾರದ ಹಲವು ಸಾಧನೆಗಳು ಈ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಆಸ್ತಿಯಲ್ಲಿ ₹ 97 ಲಕ್ಷ ಏರಿಕೆ

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ₹ 97 ಲಕ್ಷ ಏರಿಕೆಯಾಗಿದೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರು ಘೋಷಿಸಿದ ಒಟ್ಟು ಆಸ್ತಿಯ ಮೌಲ್ಯ ₹ 1.34 ಕೋಟಿಯಾಗಿತ್ತು. ಈ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಘೋಷಿಸಿರುವ ಆಸ್ತಿಯ ಮೌಲ್ಯ ₹ 2.31 ಕೋಟಿ ಆಗಿದೆ.

ಕಾಗೋಡು ತಿಮ್ಮಪ್ಪ ಅವರ ಬಳಿ ₹ 15 ಸಾವಿರ ನಗದು ಮಾತ್ರ ಇದೆ. ₹ 6 ಲಕ್ಷ ಮೌಲ್ಯದ ಬಂಗಾರ ಇದ್ದು, ಅವರ ಒಟ್ಟು ಚರಾಸ್ತಿಯ ಮೌಲ್ಯ ₹ 1.61 ಕೋಟಿ ಹಾಗೂ ಸ್ಥಿರಾಸ್ತಿಯ ಮೌಲ್ಯ ₹ 70 ಲಕ್ಷ ಇದೆ.

ಬೆಂಗಳೂರಿನ ಸಾಲ ವಸೂಲಾತಿ ಟ್ರಿಬ್ಯೂನಲ್‌ನಲ್ಲಿ ತಾವು ಟ್ರಸ್ಟಿಯಾಗಿರುವ ಶಿವಮೊಗ್ಗ ನಗರದ ಶಿವಪ್ಪನಾಯಕ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯಿಂದ ಸಂದಾಯ ಮಾಡಬೇಕಾದ ₹ 2.80 ಕೋಟಿ ಮೊತ್ತದ ಸಾಲದ ಹಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಯುತ್ತಿದೆ ಎಂದು ಕಾಗೋಡು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT