ಸೋಮವಾರ, ಅಕ್ಟೋಬರ್ 14, 2019
29 °C
ವಿಶ್ವ ಹಿರಿಯ ನಾಗರಿಕರ ದಿನಾಚರಣೆ: ಅಕ್ಕ ಅನ್ನಪೂರ್ಣ ಹೇಳಿಕೆ

ವಯಸ್ಸಾದವರು ಮುದುಕರಲ್ಲ, ಮುದ್ದುಕರುಗಳು

Published:
Updated:
Prajavani

ಬೀದರ್‌: ‘ನಿವೃತ್ತಿಯ ನಂತರದ ಜೀವನ ನಿಜವಾಗಿಯೂ ಸ್ವಂತ ಜೀವನ. ವಯಸ್ಸಾಯಿತು ಎನ್ನುವುದನ್ನು ಮರೆಯಬೇಕು. ವಯಸ್ಸಾದವರೆಲ್ಲ ಮುದುಕರಲ್ಲ, ಮುದ್ದುಕರುಗಳು ಅಂದರೆ ಎಲ್ಲರಿಗೂ ಬೇಕಾದವರೆಂದು ಅರ್ಥಮಾಡಿಕೊಳ್ಳಬೇಕು’ ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

ಶ್ರೀ ಬಸವೇಶ್ವರ ಹಿರಿಯ ನಾಗರಿಕರ ವೇದಿಕೆ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜೀವನ ಸುಖದ ಸುಪ್ಪತ್ತಿಗೆಯಲ್ಲ. ಬದುಕನ್ನು ಎದುರಿಸಲು ನಿಜವಾದ ತಳಹದಿ ಅಧ್ಯಾತ್ಮವೇ ಆಗಿದೆ. ಆದ್ದರಿಂದ ಅಧ್ಯಾತ್ಮವನ್ನು ನಮ್ಮ ಜೀವನದ ಅಂಗವಾಗಿಸಿಕೊಳ್ಳಬೇಕು. ನಾವು ಕೆಲಸಕ್ಕೆ ಬಾರದವರೆಂಬ ಭಾವನೆ ಬರಬಾರದು. ಏನೇ ಬರಲಿ ಚಿಂತೆ ಮಾಡಬಾರದು’ ಎಂದು ತಿಳಿಸಿದರು.

‘ನಿಶ್ಚಿಂತತೆಯಿಂದ ಆರೋಗ್ಯ ವೃದ್ಧಿಸುತ್ತದೆ. ಈ ಜಗತ್ತಿನಲ್ಲಿ ಯಾವುದೂ ಕೂಡ ನಮ್ಮ ಇಚ್ಛೆಯಂತೆ ನಡೆಯದು. ಎಲ್ಲವೂ ದೇವರ ಇಚ್ಛೆಯಂತೆ ಸಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು’ ಎಂದರು.

‘ತಾವು ಗಳಿಸಿದ್ದನ್ನು ತಾವೇ ಬಳಸುವ ಸ್ವಾತಂತ್ರ್ಯ ಇಟ್ಟುಕೊಳ್ಳಬೇಕು. ನಿಸ್ವಾರ್ಥ ಭಾವನೆಯಿಂದ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಮತ್ತು ಆನಂದಗಳನ್ನು ಪಡೆಯಬಹುದಾಗಿದೆ’ ಎಂದು ತಿಳಿಸಿದರು.

ಶ್ರೀ ಬಸವೇಶ್ವರ ಹಿರಿಯ ನಾಗರಿಕರ ವೇದಿಕೆಯಿಂದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಪ್ರೊ. ದೇವೇಂದ್ರ ಕಮಲ್‌ (ಶಿಕ್ಷಣ), ಪಂಡಿತ ವೀರಭದ್ರಪ್ಪ ಗಾದಗೆ (ಸಂಗೀತ), ಮಾರುತಿರಾವ್‌ ಚಂದನಹಳ್ಳಿ (ಆರೋಗ್ಯ), ದೇಶಾಂಶ ಹುಡಗಿ (ಆರೋಗ್ಯ) ಮತ್ತು ಪಿ.ಸಂಗಪ್ಪ (ಎಂಜಿನಿಯರಿಂಗ್ ಕ್ಷೇತ್ರ) ಅವರನ್ನು ಶಾಲು ಹೊದಿಸಿ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಮಾಣಿಕಪ್ಪ ಗೋರನಾಳೆ ಮಾತನಾಡಿ, ‘ಹಿರಿಯರ ಸಬಲೀಕರಣ ತಮ್ಮ ಗುರಿಯಾಗಿದ್ದು, ಮುಂಬರುವ ದಿನಗಳಲ್ಲಿ ಬಗೆಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹಿರಿಯರು ಮತ್ತು ಕಿರಿಯರನ್ನು ಸೇರಿಸಿ ವಿಚಾರ ಸಂಕಿರಣಗಳನ್ನು ಏರ್ಪಡಿಸುವ ಮೂಲಕ ಉತ್ತಮ ಬಾಂಧವ್ಯ ಬೆಳೆಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಗೌರವಾಧ್ಯಕ್ಷ ಸಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮನ ಗೌಡ ಎಸ್.ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ ಪಂಚಾಕ್ಷರಿ ವಂದಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಹಿರಿಯ ನಾಗರಿಕರ ವೇದಿಕೆಯಿಂದ ಆರಂಭಿಸಲಾಗುತ್ತಿರುವ ಕಲ್ಯಾಣ ಕರ್ನಾಟಕ ವಧು-ವರರ ಮಾಹಿತಿ ಕೇಂದ್ರವನ್ನು ಅಕ್ಕ ಅನ್ನಪೂರ್ಣ ಉದ್ಘಾಟಿಸಿದರು.

Post Comments (+)