ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ: ಹೆಸರುಕಾಯಿ ಕಟಾವಿಗೆ ಕಾರ್ಮಿಕರ ಕೊರತೆ

ದುಬಾರಿಯಾದ ಕಾರ್ಮಿಕರು, ಕೈಗೆಟುಕದ ಫಸಲು: ರಾಶಿ ಯಂತ್ರಗಳ ಮೊರೆ
ಗುರುಪ್ರಸಾದ ಮೆಂಟೇ
Published 2 ಸೆಪ್ಟೆಂಬರ್ 2024, 5:03 IST
Last Updated 2 ಸೆಪ್ಟೆಂಬರ್ 2024, 5:03 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಹೆಸರು-ಉದ್ದು ಬೆಳೆ ಕಟಾವಿಗೆ ಬಂದಿದ್ದು, ಕಾರ್ಮಿಕರ ಕೊರತೆ ಎದುರಾಗಿದೆ. ರೈತರು ರಾಶಿ ಯಂತ್ರದ ಮೊರೆ ಹೋಗುತ್ತಿದ್ದಾರೆ.

ಹೆಸರು ಬೆಳೆಗೆ ಪ್ರಾರಂಭದಿಂದಲೇ ಅನೇಕ ವಿಘ್ನಗಳು ಎದುರಾಗಿವೆ. ಮೊಗ್ಗು ಕೊರೆಯುವ ಹುಳುಬಾಧೆ ಕಾಣಿಸಿಕೊಂಡಿತ್ತು. ಇದರ ನಿವಾರಣೆಗೆ ರೈತರು ದುಬಾರಿ ರಾಸಾಯನಿಕಗಳನ್ನು ಖರೀದಿಸಿ ಮೂರು ನಾಲ್ಕು ಬಾರಿ ಸಿಂಪಡಣೆ ಮಾಡಿದ್ದಾರೆ. ಆದರೂ ಬಹಳಷ್ಟು ಕಾಯಿಗಳು ಹಾಳಾಗಿವೆ. ಇನ್ನೊಂದೆಡೆ ಜಿಟಿ ಜಿಟಿ ಮಳೆಯೂ ಅಡ್ಡಿಯಾಗಿದ್ದು, ಬಿಸಿಲು ಬಿದ್ದರೆ ಕಾಯಿಗಳು ಸಿಡಿಯುತ್ತವೆ ಎನ್ನುತ್ತಾರೆ ರೈತ ಡೊಂಡಿರಾಮ ಜಾಮಗೆ.

ಮಳೆ ಕಣ್ಣುಮುಚ್ಚಾಲೆ ನಡುವೆ ಹೆಸರಿನ ರಾಶಿ ಬೇಗ ಮಾಡಿಕೊಳ್ಳಬೇಕಿದೆ. ರಾಶಿ ಬೇಗ ಮುಗಿಸುವ ಧಾವಂತ, ಕೂಲಿಕಾರರ ಕೊರತೆಯಿಂದಾಗಿ ಕಟಾವು ಯಂತ್ರಗಳು ಈ ವರ್ಷವಂತೂ ರೈತರ ಪಾಲಿಗೆ ವರದಾನವಾಗಿವೆ. ಆದ್ದರಿಂದ ರೈತರು ಕಟಾವು ಯಂತ್ರಗಳ ಮೂಲಕ ರಾಶಿ ಮಾಡುತ್ತಿರುವುದು ಕಂಡುಬರುತ್ತಿದೆ.

ವಿವಿಧ ಜಿಲ್ಲೆಗಳ ಕಟಾವು ಯಂತ್ರಗಳ ಮಾಲೀಕರು ತಮ್ಮ ಯಂತ್ರ ಹಾಗೂ ಸಿಬ್ಬಂದಿಯೊಂದಿಗೆ ಕೇಸರ ಜವಳಾಗ, ದಾಪಕ, ಹುಲಸೂರ, ಮೀರಖಲ ಸೇರಿ ವಿವಿಧ ಹಳ್ಳಿಗಳಲ್ಲಿ ಬೀಡುಬಿಟ್ಟು ಹೆಸರು ಕಟಾವು ಮಾಡುತ್ತಿದ್ದಾರೆ. ತಾಲ್ಲೂಕಿಗೆ 200ಕ್ಕೂ ಹೆಚ್ಚು ಕಟಾವು ಯಂತ್ರಗಳು ಲಗ್ಗೆ ಇಟ್ಟಿವೆ.

ಬೆಲೆಯತ್ತ ರೈತರ ಚಿತ್ತ: ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ತುಂಬ ಹದವಾಗಿ ಬಿದ್ದಿದೆ. ಪರಿಣಾಮ ಪ್ರತಿ ವರ್ಷಕ್ಕಿಂತ ಈಗ ಹೆಸರು ಬೆಳೆ ಅತ್ಯಂತ ಫಲಪ್ರದವಾಗಿದೆ. ಕಳೆದ ವರ್ಷ ಭೀಕರ ಬರಗಾಲ ಎದುರಿಸಬೇಕಾಯಿತು. ಹೆಸರು ಬೆಳೆದ ಸಾವಿರಾರು ರೈತರು ಈಗಲಾದರೂ ಕಷ್ಟ ದೂರವಾಯಿತು ಎಂಬ ಖುಷಿಯಲ್ಲಿದ್ದಾರೆ. ಆದರೆ, ನಿರಂತರ ಕುಸಿತ ಕಂಡ ದರ ಅವರನ್ನು ಕಂಗಾಲು ಮಾಡಿದೆ.

ಮಾರುಕಟ್ಟೆಯಲ್ಲಿ ಹೆಸರು ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹4,000 ರಿಂದ ಗರಿಷ್ಠ ₹6,500 ದರವಿದೆ. ಚಿಲ್ಲರೆ ಮಾರಾಟದಲ್ಲಿ ಈ ದರ ಇನ್ನೂ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ₹8,580 ರಿಂದ ₹10 ಸಾವಿರ ಇತ್ತು. ಈಗ ಅರ್ಧದಷ್ಟು ಕುಸಿದಿದೆ ಎಂದು ರೈತರು ಹೇಳುತ್ತಾರೆ. ಈ ಬಾರಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹8,682 ದರ ನಿಗದಿಪಡಿಸಿದೆ. ಹೀಗಾಗಿ ರೈತರು ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಸಿದ್ಧರಾಗಿದ್ದಾರೆ.

ಹುಲಸೂರ ತಾಲ್ಲೂಕಿನ ದಾಪಕ ಗ್ರಾಮದ ರೈತರೊಬ್ಬರ ಹೊಲದಲ್ಲಿ ಹೆಸರು ಬೆಳೆ ಕಟಾವು ಮಾಡುತ್ತಿರುವ ಯಂತ್ರ
ಹುಲಸೂರ ತಾಲ್ಲೂಕಿನ ದಾಪಕ ಗ್ರಾಮದ ರೈತರೊಬ್ಬರ ಹೊಲದಲ್ಲಿ ಹೆಸರು ಬೆಳೆ ಕಟಾವು ಮಾಡುತ್ತಿರುವ ಯಂತ್ರ

ಮುಂಗಾರಿನ ಹೆಸರು-ಉದ್ದು ಬೆಳೆ ಕಟಾವು ಹಂತಕ್ಕೆ ಬಂದಿದ್ದು ಉತ್ತಮ ಬೆಲೆ ದೊರೆತು ರೈತರ ಬಾಳಿಗೆ ವರದಾನವಾಗಬೇಕಿದೆ

- ಬಂಡೆಪ್ಪ ಕಾಶಪ್ಪ ಪಾಟೀಲ ಪ್ರಗತಿಪರ ರೈತ

ರೈತರಿಗೆ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಯಂತ್ರೋಪಕರಣ ಲಭ್ಯವಿದ್ದು ಯೋಜನೆಯ ಲಾಭ ಪಡೆಯಬೇಕು

-ವಿಶ್ವನಾಥ ಕೃಷಿ ಅಧಿಕಾರಿ ಹುಲಸೂರ ರೈತ ಸಂಪರ್ಕ ಕೇಂದ್ರ

‘ಹೆಸರು’ ರಕ್ಷಣೆಗೆ ಹರಸಾಹಸ

ಮುಂಗಾರು ಹಂಗಾಮಿನ ಹೆಸರು–ಉದ್ದು ಬೆಳೆ ಕಟಾವು ಆರಂಭವಾಗಿದ್ದು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಾಶಿ ಮಾಡಿದ ಕಾಳುಗಳನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಕಟಾವು ಮಾಡಿದ ಹೆಸರು ಕಾಳಿನ ರಾಶಿಯನ್ನು ಹೊಲದಿಂದ ತಂದು ಮನೆಗಳ ಮುಂದೆ ದೇವಸ್ಥಾನ ಗ್ರಾಮಗಳ ಮುಖ್ಯ ರಸ್ತೆ ಪಕ್ಕ ಈದ್ಗಾ ಮೈದಾನ ಪಾಳು ಬಿದ್ದ ಜಾಗ ಮೊದಲಾದೆಡೆ ಒಣಗಿಸಲು ಹಾಕಲಾಗಿದೆ. ಗುಡಿಸಲು ಹಾಕಿಕೊಂಡು ಹಗಲು ರಾತ್ರಿ ಎನ್ನದೆ ಹೆಸರು–ಉದ್ದು ಕಾಳು ರಕ್ಷಿಸಿಕೊಳ್ಳಬೇಕಿದೆ ಎನ್ನುತ್ತಾರೆ ರೈತರು.

ಲಾಭ–ನಷ್ಟದ ಚರ್ಚೆ

ಒಂದು ಎಕರೆ ಹೆಸರು ಕಾಯಿ ಬಿಡಿಸಲು ಕನಿಷ್ಠ 15-20 ಕಾರ್ಮಿಕರು ಬೇಕು. ಒಬ್ಬರಿಗೆ ₹300 ಕೂಲಿ ಕೊಟ್ಟರೂ ₹4500- ₹6000 ಆಗುತ್ತದೆ. ಆದರೆ ಅದೇ ಕಟಾವು ಯಂತ್ರದವರು ಎಕರೆಗೆ ₹2000-₹2500 ತೆಗೆದುಕೊಳ್ಳುತ್ತಾರೆ. ಸಮಯವೂ ಉಳಿಯುತ್ತದೆ. ಆದರೆ ರಾಶಿಯಲ್ಲಿ ಸ್ವಚ್ಛತೆ ಕಡಿಮೆ ಎಂದು ಹೇಳುವ ರೈತರು ಲಾಭ-ನಷ್ಟದತ್ತ ವಿಚಾರ ಮಾಡಿ ಕಟಾವು ಯಂತ್ರಗಳ ಮೊರೆ ಹೋಗಿದ್ದು ರೈತರಿಗಿಂತ ಕೂಲಿಕಾರರೇ ಈಗಿನ ಕಾಲದಲ್ಲಿ ನಿಶ್ಚಿಂತೆಯಿಂದ ಇದ್ದಾರೆ ಎಂದು ಅಟ್ಟರಗಾ ಗ್ರಾಮದ ರೈತ ಸಹದೇವ ತಲವಾಡೆ ಸಮಸ್ಯೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT