ಬೀದರ್: ಮೂರು ತಿಂಗಳಲ್ಲಿ ನಾಗರಿಕ ವಿಮಾನ ಹಾರಾಟ ಆರಂಭ

7
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿಕೆ

ಬೀದರ್: ಮೂರು ತಿಂಗಳಲ್ಲಿ ನಾಗರಿಕ ವಿಮಾನ ಹಾರಾಟ ಆರಂಭ

Published:
Updated:
Deccan Herald

ಬೀದರ್: ‘ಜಿಲ್ಲೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಒಂದು ವರ್ಷದಲ್ಲಿ ಅನೇಕ ಉದ್ಯಮಗಳನ್ನು ಆರಂಭಿಸಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

ಜಿಲ್ಲಾ ಆಡಳಿತದ ವತಿಯಿಂದ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕೈಗಾರಿಕೆ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು. ಕೈಗಾರಿಕೆಗಳ ಬೆಳವಣಿಗೆಗೆ ಸಾಧ್ಯವಿರುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

‘ಬೀದರ್‌ ಜಿಲ್ಲೆ ಶೈಕ್ಷಣಿಕವಾಗಿ ಹಿಂದೆ ಉಳಿದಿದೆ. ಶಿಕ್ಷಣದ ಗುಣಮಟ್ಟ ಸುಧಾರಿಸುವ ದಿಸೆಯಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ. ಈಗಾಗಲೇ ಶಿಕ್ಷಣ ಅಧಿಕಾರಿಗಳ ಸಭೆ ನಡೆಸಿ ಹೆಚ್ಚುವರಿ ತರಗತಿಗಳನ್ನು ನಡೆಸಲುಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ. ಆಗಸ್ಟ್‌ 16 ರಂದು ಬ್ರಿಮ್ಸ್‌ ಅಧಿಕಾರಿಗಳ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈಚೆಗೆ ಬ್ರಿಮ್ಸ್‌ಗೆ ಭೇಟಿ ನೀಡಿ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಶೀಘ್ರ ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯ ಜನ ಆರೋಗ್ಯ ಸೇವೆ ಪಡೆಯಲು ನೆರೆಯ ತೆಲಂಗಾಣದ ಹೈದರಾಬಾದ್ ಅಥವಾ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೋಗುವುದು ಕಡಿಮೆಯಾಗಬೇಕು. ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಬ್ರಿಮ್ಸ್‌ಗೆ ಇನ್ನಷ್ಟು ಅನುದಾನ ತಂದು ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

‘ರೈತರು ರಾಶಿ ಮಾಡುವ ಮೊದಲೇ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರೈತರು ಮಾರಾಟ ಮಾಡಿದ ಉದ್ದು, ಹೆಸರು ಹಾಗೂ ತೊಗರಿ ಹಣ ಬಿಡುಗಡೆ ಮಾಡಲಾಗಿದೆ. ಮಧ್ಯಪ್ರದೇಶ ಮಾದರಿಯಲ್ಲಿ ದ್ವಿದಳ ಧಾನ್ಯಗಳ ಖರೀದಿ ವ್ಯವಸ್ಥೆ ಮಾಡುವಂತೆ ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಶಾಸಕ ರಹೀಂ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಸಂಸದ ಭಗವಂತ ಖೂಬಾ, ಶಾಸಕ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಇದ್ದರು.

ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ನಗರದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನ್ಯತ್ಯ ಹಾಗೂ ಕವಾಯತು ಪ್ರದರ್ಶನ ನಡೆಯಿತು.

***
ಮೂರು ತಿಂಗಳಲ್ಲಿ ವಿಮಾನ ಹಾರಾಟ ಆರಂಭ
ಬೀದರ್: ‘ಉಡಾನ್‌ ಯೋಜನೆಯಡಿ ಬೀದರ್‌ನಿಂದ ಮೂರು ತಿಂಗಳಲ್ಲಿ ನಾಗರಿಕ ವಿಮಾನ ಹಾರಾಟ ಶುರುವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

‘ದೂರದಲ್ಲಿರುವ ಬೆಂಗಳೂರಿಗೆ ಹೋಗಿ ಬರಲು ಅನುಕೂಲವಾಗಲಿದೆ. ವಿಮಾನಯಾನ ಆರಂಭಿಸುವ ದಿಸೆಯಲ್ಲಿ ಈಗಾಗಲೇ ಸಂಸದ ಭಗವಂತ ಖೂಬಾ ಅವರೂ ಪ್ರಯತ್ನ ನಡೆಸಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !