ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ರಹೀಂ ಖಾನ್‌, ಸಚಿವ ಪ್ರಭು ಚವಾಣ್‌ ಮಧ್ಯೆ ಮಾತಿನ ಚಕಮಕಿ

ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಸ ಡಿಸಿ ಕಚೇರಿ ವಿವಾದ
Last Updated 28 ಸೆಪ್ಟೆಂಬರ್ 2021, 15:50 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾಡಳಿತದ ವತಿಯಿಂದ ಇಲ್ಲಿಯ ಪ್ರತಾಪನಗರದಲ್ಲಿರುವ ಸರ್ಕಾರಿ ನೌಕರರ ಸಮುಧಾಯ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸುವ ಜಾಗದ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹಾಗೂ ಬೀದರ್‌ ಶಾಸಕ ರಹೀಂ ಖಾನ್‌ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಸಂಕೀರ್ಣ ವಿಷಯದಲ್ಲಿ ಪರಸ್ವರ ವಾಗ್ವಾದ ನಡೆಸಿ ಕೈಯಲ್ಲಿದ್ದ ಮೈಕ್‌ ಪಡೆದು ಏರು ಧ್ವನಿಯಲ್ಲಿ ಮಾತನಾಡಿದರು. ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಇಬ್ಬರ ಕೈಯಿಂದ ಮೈಕ್‌ ಪಡೆದು ಸಮಾಧಾನ ಪಡಿಸಲು ಪ್ರಯತ್ನಿಸಿದರು.

ಸಚಿವ–ಶಾಸಕರ ಮಾತಿನ ಚಕಮಕಿ ಶಿಕ್ಷಕರಿಗೆ ಮನರಂಜನೆ ನೀಡಿತು. ಶಿಕ್ಷಕರ ಸಂಘದ ಪದಾಧಿಕಾರಿಗಳು ಇಬ್ಬರಿಗೂ ಸಮಾಧಾನ ಹೇಳಲು ‍ಪ್ರಯತ್ನಿಸಿದರೂ ಇಬ್ಬರ ನಡುವೆ ಕೆಲ ಹೊತ್ತು ಕೋಳಿ ಜಗಳ ನಡೆಯಿತು.

ಆಗಿದ್ದು ಏನು?
ಕಾರ್ಯಕ್ರಮ ಆರಂಭವಾಗುವ ಮೊದಲೇ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಚಿವ ಪ್ರಭು ಚವಾಣ್ ಬಳಿ ಬಂದು ಜಿಲ್ಲಾಡಳಿತವು ಗುರುಭವನ ಆಕ್ರಮಿಸಿಕೊಂಡು ಚುನಾವಣಾ ಸಾಮಗ್ರಿಗಳನ್ನು ಇಟ್ಟುಕೊಂಡಿದೆ. ಶಿಕ್ಷಕರ ಚಟುವಟಿಕೆಗಳ ಕೇಂದ್ರವಾಗಬೇಕಿದ್ದ ಗುರುಭವನ ಗೋದಾಮು ಆಗಿದೆ. ಅದನ್ನು ಶಿಕ್ಷಕರಿಗೆ ಕೊಡಿಸಬೇಕು ಹಾಗೂ ದುರಸ್ತಿ ಪಡಿಸಲು ಒಂದಿಷ್ಟು ಅನುದಾನವನ್ನೂ ಒದಗಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಭು ಚವಾಣ್‌ ಗುರುಭವನ ದುರಸ್ತಿ ಹಾಗೂ ಸರ್ಕಾರಿ ನೌಕರರ ಭವನದಲ್ಲಿ ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ನೌಬಾದ್‌ ಸಮೀಪದ ರೇಷ್ಮೆ ಇಲಾಖೆಯ ಜಾಗದಲ್ಲಿ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣವನ್ನೂ ನಿರ್ಮಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿದ್ದ ಶಾಸಕ ರಹೀಮ್‌ ಖಾನ್‌ ಆಕ್ಷೇಪ ವ್ಯಕ್ತಪಡಿಸಿ, ‘ನಗರದ ಹೊರವಲಯದಲ್ಲಿ ಯಾವ ಕಾರಣಕ್ಕೂ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲು ಬಿಡುವುದಿಲ್ಲ. ಈಶ್ವರ ಖಂಡ್ರೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೀದರ್‌ ಸಮೀಪದ ಮಾಮನಕೇರಿ ಬಳಿ ಜಾಗ ಗುರುತಿಸಿದಾಗ ಬಿಜೆಪಿಯವರು ವಿರೋಧಿಸಿದರು. ಈಗಿರುವ ಸ್ಥಳದಲ್ಲೇ ಕಚೇರಿ ನಿರ್ಮಿಸಬೇಕೆಂದು ಒತ್ತಾಯಿಸಿದರು‘ ಎಂದರು.

‘ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಅವರು ₹ 50 ಲಕ್ಷ ಬಿಡುಗಡೆ ಮಾಡಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈಗ ಮತ್ತೆ ಜಾಗ ಬದಲಿಸಬಾರದು. ಸರ್ಕಾರದ ಬಳಿ ಹಣವೇ ಇಲ್ಲ. ಮೊದಲು ಇನ್ನೂ ₹ 50 ಲಕ್ಷ ಬಿಡುಗಡೆ ಮಾಡಿಸಬೇಕು. ನಂತರ ಕಾಮಗಾರಿ ಆರಂಭಿಸಬೇಕು’ ಎಂದು ಸವಾಲು ಹಾಕಿದರು.

‘ಔರಾದ್, ಭಾಲ್ಕಿ, ಹುಮನಾಬಾದ್ ಹಾಗೂ ಬಸವಕಲ್ಯಾಣದ ಜನರಿಗೂ ಅನುಕೂಲವಾಗುವ ಸ್ಥಳದಲ್ಲೇ ಸಂಕೀರ್ಣ ನಿರ್ಮಿಸಲಾಗುವುದು. ಈಗ ನಿರ್ಧಾರ ಮಾಡಿರುವ ಜಾಗ ಬದಲಿಸುವುದಿಲ್ಲ. ₹ 50 ಲಕ್ಷದಲ್ಲಿ ಕಟ್ಟಡ ನಿರ್ಮಾಣಗೊಳ್ಳಲು ಸಾಧ್ಯವಿಲ್ಲ. ಕನಿಷ್ಠ ₹ 1.5 ಕೋಟಿ ಬೇಕಾಗಲಿದೆ. ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿ ಹಣ ತಂದ ನಂತರವೇ ಕಾಮಗಾರಿ ಶುರು ಮಾಡಲಾಗುವುದು’ ಎಂದು ಸವಾಲು ಸ್ವೀಕರಿಸಿದರು.

ನಂತರ ನಮ್ಮ ಪಕ್ಷ, ನಿಮ್ಮ ಪಕ್ಷ ಎಂದು ಮೈಕ್‌ ಕಸಿದುಕೊಳ್ಳಲು ಶುರು ಮಾಡಿದರು. ಸಂಘಟಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಶಿಕ್ಷಕರ ದಿನಾಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚಾರಣೆ ಹಾಗೂ 2021-22ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು.

ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಅಪ್ಪುಗೆರೆ ಸೋಮಶೇಖರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ 30 ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಣ್ಣ ಸ್ವಾಮಿ ಎಚ್.ಜಿ., ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಸೂರ್ಯವಂಶಿ, ಎಸ್‌.ಸಿ, ಎಸ್‌.ಟಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೈಜನಾಥ ಸಾಗರ, ಸರ್ಕಾರಿ ಪ್ರೌಢ ಶಾಲಾ ಮುಖ್ಯ ಗುರುಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮರಾವ್‌ ಹಡಪದ, ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ಉಪ ನಿರ್ದೇಶಕ ದಿಗಂಬರ್ ಬಿ.ಕೆ, ಕಾರ್ಯಕ್ರಮ ನೋಡಲ್‌ ಅಧಿಕಾರಿ ರಾಜು ಪಾಯದವರ್ ಇದ್ದರು,

ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್. ದೊಡ್ಡೆ ಸ್ವಾಗತಿಸಿದರು. ವಿಷಯ ಪರಿವೀಕ್ಷಕ ಸೈಯದ್‌ ಫುರಖಾನ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT