ಕಚೇರಿ ನವೀಕರಣ ನೆಪದಲ್ಲಿ ಹಣ ಪೋಲು

7
ಅತಿಥಿಗೃಹದ ಹಳೆಯ ಕಟ್ಟಡಕ್ಕೆ ₹ 34 ಲಕ್ಷ ಖರ್ಚು!

ಕಚೇರಿ ನವೀಕರಣ ನೆಪದಲ್ಲಿ ಹಣ ಪೋಲು

Published:
Updated:
Deccan Herald

ಬೀದರ್‌: ‘ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕೊಠಡಿ ನವೀಕರಣದ ಹೆಸರಲ್ಲಿ ಲಕ್ಷಾಂತರ ರೂಪಾಯಿ ದುರ್ಬಳಕೆ ಮಾಡಲಾಗಿದೆ. ಲೋಕಾಯುಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಭ್ರಷ್ಟಾಚಾರ ವಿರುದ್ಧದ ಹೋರಾಟ ವೇದಿಕೆಯ ಸಂಚಾಲಕ ನರೇಶ ಪಾಠಕ್ ಆಗ್ರಹಿಸಿದರು.

‘ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಟೆಂಡರ್‌ ಕರೆಯದೇ 2017ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ನವೀಕರಣ ಮಾಡಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಡಿ 2017ರ ಡಿಸೆಂಬರ್‌ 30ರಂದು ಅರ್ಜಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು ಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ದೂರಿದರು.

‘ಅಂಬೇಡ್ಕರ್‌ ವೃತ್ತದ ಬಳಿಯ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಆವರಣದಲ್ಲಿರುವ ಕಚೇರಿ ನವೀಕರಣಕ್ಕೆ ಇಲಾಖೆಯೇ ಹಣ ಖರ್ಚು ಮಾಡಿದೆ. ಆದರೆ, ತಕ್ಷಣಕ್ಕೆ ವೆಚ್ಚದ ಮಾಹಿತಿ ಲಭ್ಯ ಇಲ್ಲ. ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕಾಂತ ಮಳ್ಳಿ, ಎಇಇ ಅಮೀನ್‌ ಮುಕ್ತಾರ್, ಜೆಇ ಸುನೀಲ್‌ ಕುಮಾರ ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆದಿದೆ. ಮೂರನೇ ತಂಡದಿಂದ ಕಾಮಗಾರಿಯ ಪರಿಶೀಲನೆ ನಡೆಸಿಲ್ಲ ಎಂದು ಮಾಹಿತಿಯಲ್ಲಿ ಉತ್ತರಿಸಿದ್ದಾರೆ’ ಎಂದು ವಿವರಿಸಿದರು.

‘ಖರ್ಚು ವೆಚ್ಚದ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ಗೆ ಮೇಲ್ಮನವಿ ಸಲ್ಲಿಸಿದರೂ ಸರಿಯಾದ ಮಾಹಿತಿ ಪೂರೈಸಿಲ್ಲ. ಹೀಗಾಗಿ 2017ರ ನವೆಂಬರ್ 6ರಂದು ರಾಜ್ಯ ಮಾಹಿತಿ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘₹ 1 ಲಕ್ಷಕ್ಕಿಂತ ಮೇಲ್ಪಟ್ಟು ಕಾಮಗಾರಿಗಳಿದ್ದರೆ ಟೆಂಡರ್ ಕರೆಯಬೇಕು. ಆದರೆ ಟೆಂಡರ್‌ ಕರೆಯದೇ ಕಾಮಗಾರಿ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಸುಣ್ಣ ಬಣ್ಣ ಬಳಿಯಲು, ಎ.ಸಿ, ಪೀಠೋಪಕರಣ ಖರೀದಿಸಲು ₹ 35 ಲಕ್ಷ ಖರ್ಚು ಮಾಡಿರುವ ಮಾಹಿತಿ ಇದೆ. ಈ ಕಟ್ಟಡದಲ್ಲಿ ಸಚಿವರು ಒಂದು ಬಾರಿಯೂ ಸಾರ್ವಜನಿಕರ ಕುಂದುಕೊರತೆ ವಿಚಾರಿಸಿದ ಮಾಹಿತಿ ಇಲ್ಲ. ಅಷ್ಟೇ ಅಲ್ಲ, ಈ ಜಾಗದಲ್ಲಿ ಜಿಲ್ಲಾ ಪಂಚಾಯಿತಿ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಆದರೂ ನವೀಕರಣಕ್ಕೆ ಸಾರ್ವಜನಿಕರ ತೆರಿಗೆ ಹಣ ಬಳಸಲಾಗಿದೆ’ ಎಂದು ಹೇಳಿದರು.

‘ಕಟ್ಟಡಕ್ಕೆ ಹಾಕಿದ್ದ ನಾಮಫಲಕಗಳನ್ನು ತೆಗೆಯಲಾಗಿದೆ. ಕರ್ನಾಟಕ ಸರ್ಕಾರ ಎನ್ನುವ ಹೊಸ ಫಲಕ ತೂಗು ಹಾಕಲಾಗಿದೆ. ಅವ್ಯವಹಾರದಲ್ಲಿ ಅನೇಕ ಜನ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಲೋಕಾಯುಕ್ತರು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸಹ ಸಂಚಾಲಕರಾದ ಅಂಗದ ಪಾಟೀಲ, ಎಂ.ಪಿ.ಮುದಾಳೆ ಇದ್ದರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !