ಬೀದರ್: ನಗರಸಭೆ ನೂತನ ಸದಸ್ಯರು ವಾರ್ಡ್‍ಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಸಲಹೆ ಮಾಡಿದರು.
ಇಲ್ಲಿಯ ಗುಂಪಾ ರಸ್ತೆಯಲ್ಲಿ ಇರುವ ಮಹೇಶ ಫಂಕ್ಷನ್ ಹಾಲ್‍ನಲ್ಲಿ ರಾಂಪುರೆ ಕಾಲೊನಿಯ ಗಾಂಧಿ ಮಿತ್ರ ಮಂಡಳಿ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿಸಿ ರಸ್ತೆ, ಚರಂಡಿ, ದಾರಿದೀಪ, ಉದ್ಯಾನ ಮೊದಲಾದ ಮೂಲಸೌಕರ್ಯ, ನೈರ್ಮಲ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ವಾರಕ್ಕೆ ಒಮ್ಮೆ ವಾರ್ಡ್‍ಗಳ ವ್ಯಾಪ್ತಿಯ ಒಂದು ಕಾಲೊನಿಗೆ ಭೇಟಿ ಕೊಡಬೇಕು. ಸ್ವಚ್ಛತೆ ಪರಿಶೀಲಿಸಬೇಕು. ಜನರ ಆಶಯಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಗಾಂಧಿ ಮಿತ್ರ ಮಂಡಳಿ ಅಧ್ಯಕ್ಷರೂ ಆದ ಅವರು ತಿಳಿಸಿದರು.
ನಗರ ಸೌಂದರ್ಯೀಕರಣದ ಭಾಗವಾಗಿ ಕುಂಬಾರವಾಡದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೆ ಕಡೆಗೆ ಹೋಗುವ ರಸ್ತೆಯಲ್ಲಿನ ವಿಭಜಕ, ರಸ್ತೆಗಳ ಬದಿಯಲ್ಲಿ ಸಸಿಗಳನ್ನು ನೆಡಬೇಕು. ವಾಯು ವಿಹಾರಕ್ಕೆ ಹೋಗುವವರ ಅನುಕೂಲಕ್ಕಾಗಿ ಮೈಲೂರ ಕ್ರಾಸ್‍ನಿಂದ ಅಮಲಾಪುರವರೆಗಿನ ರಸ್ತೆಯಲ್ಲಿ ಪಾದಚಾರಿ ಮಾರ್ಗ ನಿರ್ಮಿಸಬೇಕು ಎಂದು ಬೇಡಿಕೆ ಮಂಡಿಸಿದರು.
ನಗರಸಭೆ ನೂತನ ಸದಸ್ಯರಾದ ರಾಜಾರಾಮ ಚಿಟ್ಟಾ, ಶಶಿ ಹೊಸಳ್ಳಿ, ಪ್ರಭುಶೆಟ್ಟಿ ಪಾಟೀಲ, ಲಕ್ಷ್ಮೀಬಾಯಿ ಹಂಗರಗಿ ಅವರನ್ನು ಹಾಲು ಹೊದಿಸಿ ಸನ್ಮಾನಿಸಲಾಯಿತು.
ನಗರಸಭೆ ಮಾಜಿ ಸದಸ್ಯರಾದ ನಾಗಶೆಟ್ಟಿ ವಗದಾಳೆ, ಧನರಾಜ ಹಂಗರಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ಪ್ರೊ. ರಾಜಕುಮಾರ ಹೊಸದೊಡ್ಡೆ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಕಾರ್ಯದರ್ಶಿ ಮನೋಹರ ಕಾಶಿ, ಕಲ್ಯಾಣ ಮಂಟಪದ ಮಾಲೀಕ ಉಮೇಶ ಬಿರಾದಾರ, ರಾಚಯ್ಯ ಸ್ವಾಮಿ ಇದ್ದರು.
ರಘುನಾಥ ಮೇತ್ರೆ ಸ್ವಾಗತಿಸಿದರು. ಶಿವರಾಜ ಶ್ರೀಮಂಗಲೆ ನಿರೂಪಿಸಿದರು. ಬಸವರಾಜ ಹೆಗ್ಗೆ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.