ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಹಿತ ಕಾಪಾಡಿದವರಿಗೆ ಮರಾಠರ ಬೆಂಬಲ

ಖಂಡ್ರೆ ವಿರುದ್ಧ ಮರಾಠ ಮುಖಂಡರ ಅಸಮಾಧಾನ
Last Updated 8 ಏಪ್ರಿಲ್ 2019, 16:07 IST
ಅಕ್ಷರ ಗಾತ್ರ

ಬೀದರ್: ‘ಮರಾಠ ಸಮಾಜದ ಹಿತ ಕಾಪಾಡಿದ ಹಾಗೂ ಅಭಿವೃದ್ಧಿಗೆ ನೆರವಾದ ಪಕ್ಷವನ್ನೇ ನಮ್ಮ ಸಮಾಜ ಬೆಂಬಲಿಸಲಿದೆ’ ಎಂದು ಮರಾಠ ಸಮಾಜದ ಮುಖಂಡ ಪದ್ಮಾಕರ ಪಾಟೀಲ ಹೇಳಿದರು.

‘ಕೇಂದ್ರದಲ್ಲಿ 55 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್‌ನಿಂದ ಮರಾಠ ಸಮಾಜಕ್ಕೆ ಎಳ್ಳಷ್ಟೂ ಅನುಕೂಲವಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅನೇಕ ಬಗೆಯ ಅನುಕೂಲಗಳನ್ನು ಮಾಡಿಕೊಟ್ಟಿದೆ’ ಎಂದು ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಮರಾಠ ಸಮಾಜದ ಬಗೆಗೆ ಕಾಳಜಿ ಹೆಚ್ಚಾಗಿದೆ. ಆದರೆ, ಮತ ರಾಜಕೀಯದ ನಾಟಕ ಬಹಳ ದಿನ ನಡೆಯದು’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಅನೇಕ ವರ್ಷಗಳಿಂದ ಅಧಿಕಾರದಲ್ಲಿದ್ದರೂ ಮರಾಠ ಸಮಾಜವನ್ನು ಪ್ರವರ್ಗ 3ಬಿ ಯಿಂದ 2ಎ ಗೆ ಸೇರಿಸಲು ಪ್ರಯತ್ನ ನಡೆಸಿಲ್ಲ. ಮರಾಠ ಸಮಾಜದ ಮನವಿಗೆ ಸ್ಪಂದಿಸಿಲ್ಲ. ಕೇವಲ ಸುಳ್ಳು ಭರವಸೆ ನೀಡಿ ಕಾಲಹರಣ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಮರಾಠ ಸಮಾಜದ ಅಭ್ಯರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ. ಭಾಲ್ಕಿಯಲ್ಲಿ ಪ್ರಕಾಶ ಖಂಡ್ರೆ ಅಧಿಕಾರ ಅವಧಿಯಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಗೆ ₹20 ಲಕ್ಷ ಅನುದಾನ ನೀಡಿ ಮೂರ್ತಿ ಸ್ಥಾಪಿಸಲಾಯಿತು. ಆದರೆ, ಕಾಂಗ್ರೆಸ್ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು’ ಎಂದು ಕಿಡಿಕಾರಿದರು.

‘ಭಾಲ್ಕಿಯ ಶಿವಾಜಿ ಕಾಲೇಜು ಅನುದಾನಕ್ಕೆ ಒಳಪಡುವ ದಾಖಲೆಗಳನ್ನು ಹೊಂದಿದ್ದರೂ ಈಶ್ವರ ಖಂಡ್ರೆ ಸರ್ಕಾರಕ್ಕೆ ಶಿಫಾರಸು ಮಾಡಲಿಲ್ಲ. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಅನುದಾನಕ್ಕೆ ಒಳಪಟ್ಟಿತ್ತು’ ಎಂದು ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರ ಉಚ್ಚಾಟನೆಯಲ್ಲೂ ಈಶ್ವರ ಖಂಡ್ರೆ ಕೈವಾಡವಿದೆ. ನೌಬಾದ್ ಹೊರವಲಯದಲ್ಲಿ ಮರಾಠ ಸಮಾಜ ಭವನಕ್ಕಾಗಿ ಅನೇಕ ಬಾರಿ ಮನವಿ ಮಾಡಿದರೂ ಕಾಂಗ್ರೆಸ್‌ ಮುಖಂಡರು ಸ್ಪಂದಿಸಲಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದಾಗ ₹25 ಲಕ್ಷ ಅನುದಾನ ಒದಗಿಸಿದರು’ ಎಂದು ಹೇಳಿದರು.

‘ಈ ಚುನಾವಣೆಯಲ್ಲಿ ಸಮಾಜದ ಮುಖಂಡರು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನೇ ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮರಾಠ ಸಮಾಜದ ದಿಗಂಬರರಾವ್ ಮಾನಕರಿ, ಬಾಬುರಾವ್ ಕಾರಬಾರಿ, ರಾಮರಾವ್ ವರವಟ್ಟಿ, ಪ್ರಕಾಶ ಪಾಟೀಲ, ರಾಜಕುಮಾರ, ನಿಲೇಶ ಜಾಧವ, ಸಂಸದ ಭಗವಂತ ಖೂಬಾ, ಬಾಬು ವಾಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಜೈಕುಮಾರ ಕಾಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT