ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಸಾಲದ ಪ್ರಯೋಜನ ಪಡೆಯಿರಿ

ವಿದ್ಯಾರ್ಥಿಗಳಿಗೆ ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಗಂಗಾಧರ ಸಲಹೆ
Last Updated 19 ಜುಲೈ 2019, 14:35 IST
ಅಕ್ಷರ ಗಾತ್ರ

ಬೀದರ್‌: ‘ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲದ ಪ್ರಯೋಜನ ಪಡೆಯಬೇಕು’ ಎಂದು ಕೆನರಾ ಬ್ಯಾಂಕ್‌ ಕಲಬುರ್ಗಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕಎಚ್.ಕೆ. ಗಂಗಾಧರ ಸಲಹೆ ಮಾಡಿದರು.

ಕೆನರಾ ಬ್ಯಾಂಕ್‌ ವತಿಯಿಂದ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಸಾಲ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ 14 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ವ್ಯವಹಾರಕ್ಕಷ್ಟೇ ಸೀಮಿತವಾಗಿಲ್ಲ. ಮಹಿಳಾ ಸಬಲೀಕರಣ, ಶೈಕ್ಷಣಿಕ ಪ್ರಗತಿಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ’ ಎಂದು ತಿಳಿಸಿದರು.

‘ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಅರ್ಹತೆ ಗಳಿಸುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಒದಗಿಸುತ್ತಿದೆ. ಶೈಕ್ಷಣಿಕ ಸಾಲಕ್ಕೆ ಸರ್ಕಾರ ಸಹಾಯಧನ ನೀಡುತ್ತಿದೆ’ ಹೇಳಿದರು.

‘ಶೈಕ್ಷಣಿಕ ಸಾಲವನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳಬೇಕು. ಶಿಕ್ಷಣ ಪೂರೈಸಿದ ನಂತರ ಪ್ರಾಮಾಣಿಕವಾಗಿ ಬ್ಯಾಂಕ್‌ಗೆ ಸಾಲ ಮರು ಪಾವತಿ ಮಾಡಬೇಕು’ ಎಂದು ತಿಳಿಸಿದರು.

‘ನರ್ಸರಿಯಿಂದ ಶುರುವಾದ ಶಾಹೀನ್ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯ ಅಡಿಯ ಶಾಲಾ ಕಾಲೇಜುಗಳಲ್ಲಿ ಸದ್ಯ 15 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ನೀಟ್‌ನಲ್ಲಿ ಪ್ರತಿಭೆ ಮೆರೆದಿರುವುದು ಪ್ರಶಂಸನೀಯ’ ಎಂದರು.

ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಮಾತನಾಡಿ, ‘ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ಕೋರ್ಸ್‌ಗಳ ಕನಸಿಗೆ ಈಗ ಬಡತನ ಅಡ್ಡಿಯಾಗದು. ಅವರ ಶಿಕ್ಷಣಕ್ಕೆ ಹಲವು ಮಾರ್ಗಗಳು ತೆರೆದುಕೊಳ್ಳುತ್ತಿವೆ. ಅವುಗಳಲ್ಲಿ ಶೈಕ್ಷಣಿಕ ಸಾಲವೂ ಒಂದು’ ಎಂದು ಹೇಳಿದರು.

‘ವೃತ್ತಿಪರ ಕೋರ್ಸ್‌ಗಳಿಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳು ಶೈಕ್ಷಣಿಕ ಸಾಲ ನೀಡುತ್ತಿವೆ. ವಿದ್ಯಾರ್ಥಿಗಳ ಶಿಕ್ಷಣದ ಅವಧಿಯಲ್ಲಿ ಈ ಸಾಲಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ. ಶಿಕ್ಷಣ ಪೂರೈಸಿದ ನಂತರ ಸಾಲ ಮರು ಪಾವತಿ ಮಾಡಬೇಕಾಗಲಿದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಶೈಕ್ಷಣಿಕ ಸಾಲವನ್ನು ತಮ್ಮ ಜೀವನದ ಗುರಿ ಸಾಧನೆಗೆ ಬಳಸಿಕೊಳ್ಳಬೇಕು. ಶಿಕ್ಷಣ ಪೂರೈಸಿದ ನಂತರ ಅದನ್ನು ಮರು ಪಾವತಿಸಿ ಇತರ ವಿದ್ಯಾರ್ಥಿಗಳಿಗೂ ಸಾಲ ಒದಗಿಸಲು ಬ್ಯಾಂಕ್‌ಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಹೇಳಿದರು.

ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದ ಪಾಲಕರು ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಕೆನರಾ ಬ್ಯಾಂಕ್ ಅಧಿಕಾರಿಗಳು ಸಮಾಧಾನಕರ ಉತ್ತರ ನೀಡಿದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲದ ಅರ್ಜಿಗಳನ್ನು ಕೂಡ ವಿತರಿಸಲಾಯಿತು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಬಿ. ವೆಂಕಟರಾಮಲು, ಪ್ರಬಂಧಕ ವಿಜಯ ರಾಮರಾವ್ ಕುಲಕರ್ಣಿ, ಬೀದರ್ ಶಾಖೆಯ ಮುಖ್ಯ ವ್ಯವಸ್ಥಾಪಕ ಕಾಮೇಶ್ವರರಾವ್, ಔರಾದ್ ಶಾಖೆಯ ವ್ಯವಸ್ಥಾಪಕ ಚಂದ್ರಶೇಖರ ಶಾನಗೊಂಡ, ರವಿಕಾಂತ ಉಪಸ್ಥಿತರಿದ್ದರು.
ಚಿಟ್ಟಾ ಶಾಖೆಯ ಹಿರಿಯ ವ್ಯವಸ್ಥಾಪಕ ಬಸವರಾಜ ಕೋಳಿ ಕಾರ್ಯಕ್ರಮ ಸಂಘಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT