ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಲ್ಲೂಕಿನಲ್ಲಿ 1.5 ಲಕ್ಷ ಸಸಿ ನೆಡುವ ಗುರಿ’

ಭಾಲ್ಕಿ: ಸಸಿ ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಈಶ್ವರ ಖಂಡ್ರೆ ಚಾಲನೆ
Last Updated 4 ಜೂನ್ 2020, 17:19 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕನ್ನು ಹಸಿರುಮಯ ಕ್ಷೇತ್ರವನ್ನಾಗಿಸಲು ಈ ಬಾರಿ ಸುಮಾರು 1.5 ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ಮುಂಗಾರು ಆಶಾದಾಯಕವಾಗಿದ್ದು ರೈತರು ಹೊಲ, ಗದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ, ಹಸಿರೀಕರಣ ಮಾಡಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಲಯ ಭಾಲ್ಕಿ ವತಿಯಿಂದ ಗುರುವಾರ ಆಯೋಜಿಸಿದ್ದ ರೈತರು, ಸಾರ್ವಜನಿಕರಿಗೆ ಸಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು
ಮಾತನಾಡಿದರು.

ಇಂದು ಮನುಷ್ಯ ಭೌತಿಕ ಸುಖದತ್ತ ಸಾಗುತ್ತಿದ್ದು, ಪರಿಸರದ ಮೇಲಿನ ಕಾಳಜಿ ಕಡಿಮೆ ಆಗುತ್ತಿರುವ ಪರಿಣಾಮ ಅರಣ್ಯ, ಹಸಿರು ಪ್ರದೇಶ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರ ನಾಶವಾದರೆ ಮಾಲಿನ್ಯ ಹೆಚ್ಚಾಗಿ ಮನುಷ್ಯ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಅತಿವೃಷ್ಟಿ, ಅನಾವೃಷ್ಟಿ, ಜಾಗತಿಕ ತಾಪಮಾನ ಹೆಚ್ಚಳದಿಂದ ನಾನಾ ಸಮಸ್ಯೆಗಳು ಎದುರಾಗುತ್ತಿವೆ ಎಂದರು.

ಪರಿಸರ ರಕ್ಷಿಸಿದರೆ ಮಾತ್ರ ನಾವು ಆರೋಗ್ಯವಾಗಿ ಬದುಕಲು ಸಾಧ್ಯ. ನಮ್ಮ ಮುಂದಿನ ಪೀಳಿಗೆಗೂ ಅರಣ್ಯವನ್ನು ಉಳಿಸಬೇಕು. ಇದನ್ನು ಎಲ್ಲರೂ ಅರಿತು ಹೆಚ್ಚೆಚ್ಚು ಗಿಡಗಳನ್ನು ಪೋಷಿಸುವುದರ ಜತೆಗೆ ಮಕ್ಕಳಲ್ಲಿ ಪರಿಸರದ ಅಗತ್ಯತೆ ಬಗ್ಗೆ ತಿಳಿ ಹೇಳುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಶೇ 14ಕ್ಕೆ ಕುಸಿದಿದ್ದು, ಒಳ್ಳೆಯ ಬೆಳವಣಿಗೆಯಲ್ಲ. ಮುಂಬರುವ ದಿನಗಳಲ್ಲಿ ಶೇ 20-30 ರಷ್ಟು ಅರಣ್ಯ ಪ್ರದೇಶ ಹೆಚ್ಚಿಸುವ ಕೆಲಸ ಅರಣ್ಯ ಅಧಿಕಾರಿಗಳು ಮಾಡಬೇಕು. ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳ ಬದಿ ಗಿಡಗಳನ್ನು ನೆಟ್ಟು ಸಕಾಲಕ್ಕೆ ಪೋಷಣೆ ಮಾಡಿ ಸಂಪೂರ್ಣ ಹಸಿರೀಕರಣ ಮಾಡಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಕೋಸಂಬೆ, ಪರಿಸರ ಪ್ರೇಮಿ ಶೈಲೇಂದ್ರ ಕಾವಡಿ, ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಮಹ್ಮದ್ ಮೈನೋದ್ಧಿನ್, ಅರಣ್ಯಾಧಿಕಾರಿ ಕರೇಪ್ಪ ಪೂಜಾರಿ, ಪ್ರಾದೇಶಿಕ ವಲಯ ಅರಣ್ಯಧಿಕಾರಿ ಪ್ರಕಾಶ ನಿಪ್ಪಾಣಿ, ಧನರಾಜ ಪಸರಗಿ, ಸಂಜೀವ, ವೈಜಿನಾಥ, ಜುಬೇರ್, ಶಿವಾನಂದ್, ಸಂತೋಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT