ಗುರುವಾರ , ಸೆಪ್ಟೆಂಬರ್ 23, 2021
28 °C

ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಜುಲೈ 26ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲು ಸುತ್ತೋಲೆ ಹೊರಡಿಸಿದರೂ ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಪರೀಕ್ಷೆ ನಡೆದಿರುವ ಕಾರಣ ಕಾಲೇಜುಗಳ ತರಗತಿಗಳು ಆರಂಭವಾಗಿಲ್ಲ. ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳು ಮಾತ್ರ ಸೋಮವಾರ ಶುರುವಾದವು.

ಲಾಕ್‌ಡೌನ್‌ ಕಾರಣ ಮನೆಯಲ್ಲೇ ಇದ್ದ ವಿದ್ಯಾರ್ಥಿಗಳು ಉತ್ಸಾಹದಿಂದ ಕಾಲೇಜಿಗೆ ಬಂದರು. ಜನವಾಡ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮೈದಾನದಲ್ಲಿ ವಿದ್ಯಾರ್ಥಿನಿಯರಿಗೆ ಕೋವಿಡ್ ಬಗೆಗೆ ತಿಳಿವಳಿಕೆ ನೀಡಲಾಯಿತು.

ಕಾಲೇಜಿನ ಬಹುತೇಕ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ಕೊಡಲಾಗಿದೆ. ಉಳಿದವರು ತಕ್ಷಣ ಲಸಿಕೆ ಪಡೆದುಕೊಳ್ಳಬೇಕು. ಅಂತರ ಕಾಯ್ದುಕೊಂಡು ಕೊಠಡಿಗಳಲ್ಲಿ ಕುಳಿತುಕೊಂಡು ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗಿದೆ. ಹಾಗಂತ ಮೈಮರೆಯಬಾರದು ಎಂದು ಪ್ರಾಚಾರ್ಯರು ಮನವಿ ಮಾಡಿದರು.

ಅಕ್ಕ ಮಹಾದೇವಿ ಮಹಿಳಾ ಪದವಿ ಕಾಲೇಜಿಗೂ ವಿದ್ಯಾರ್ಥಿನಿಯರು ಹುಮ್ಮಸ್ಸಿನೊಂದಿಗೆ ಬಂದರು. ಪ್ರವೇಶ ದ್ವಾರದಲ್ಲೇ ಥರ್ಮಲ್‌ ಸ್ಕ್ರೀನಿಂಗ್‌ ಮೂಲಕ ದೇಹದ ಉಷ್ಣಾಂಶ ಪರೀಕ್ಷಿಸಿ ಅವರಿಗೆ ಒಳಗೆ ಪ್ರವೇಶ ನೀಡಲಾಯಿತು. ಮೊದಲ ದಿನ ಕೋವಿಡ್‌ ಬಗ್ಗೆಯೇ ತಿಳಿವಳಿಕೆ ನೀಡಲಾಯಿತು.

ಶಾಹೀನ್‌ ಮಹಿಳಾ ಪದವಿ ಕಾಲೇಜಿಗೆ ಕೂಡ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಹಾಜರಾದರು. ಕೋವಿಡ್‌ ಲಸಿಕೆ ಪಡೆಯದವರಿಗೆ ಲಸಿಕೆ ಕೊಡಲಾಯಿತು.

‘ಕಾಲೇಜಿನಲ್ಲಿರುವ 419 ವಿದ್ಯಾರ್ಥಿನಿಯರ ಪೈಕಿ 300 ವಿದ್ಯಾರ್ಥಿನಿಯರು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. 200 ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲೇ ಲಸಿಕೆ ಕೊಡಲಾಗಿದೆ. ಮೊದಲ ದಿನ 110 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ಕೋವಿಡ್‌ ಲಸಿಕೆ ಪಡೆದ ಪ್ರಮಾಣಪತ್ರ ಪಡೆದವರಿಗೆ ಮಾತ್ರ ತರಗತಿಯೊಳಗೆ ಪ್ರವೇಶ ನೀಡಲಾಗಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ರಾಜಪ್ಪ ಬಕಚೇಡಿ ತಿಳಿಸಿದರು.

‘ಆನ್‌ಲೈನ್‌ ತರಗತಿಗಳಿಗೆ ವಿದ್ಯಾರ್ಥಿಗಳು ಸರಿಯಾಗಿ ಹಾಜರಾಗುತ್ತಿರಲಿಲ್ಲ. ಪಾಠ ಬೋಧನೆ ಮಾಡಿದ ನಂತರ ಎಷ್ಟು ಜನರಿಗೆ ಅರ್ಥವಾಗಿದೆ. ಎಷ್ಟು ಜನರಿಗೆ ಇನ್ನೂ ಮನವರಿಕೆ ಮಾಡಬೇಕಿದೆ ಎನ್ನುವ ಗೊಂದಲ ಇರುತ್ತಿತ್ತು. ಈಗ ತರಗತಿಗಳು ಆರಂಭವಾಗಿರುವುದು ನಮಗೂ ತೃಪ್ತಿ ತಂದಿದೆ’ ಎಂದು ಪ್ರಾಧ್ಯಾಪಕಿಯರಾದ ವಿದ್ಯಾ ಪಾಟೀಲ ಹಾಗೂ ಭಾಗ್ಯವಂತಿ ಹೇಳಿದರು.

‘ಪ್ರಾಧ್ಯಾಪಕರು ಆನ್‌ಲೈನ್‌ ತರಗತಿಗಳನ್ನು ನಡೆಸಿದರೂ ನೆಟ್‌ವರ್ಕ್‌ ಸಮಸ್ಯೆ ಮತ್ತಿತರ ಕಾರಣಗಳಿಂದ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಆಫ್‌ಲೈನ್‌ ತರಗತಿಗಳು ಆರಂಭವಾಗಿರುವುದು ಖುಷಿ ತಂದಿದೆ. ತರಗತಿಗಳಲ್ಲೇ ಪಾಠಗಳನ್ನು ಆಸಕ್ತಿಯಿಂದ ಆಲಿಸಲು ಸಾಧ್ಯವಾಗಲಿದೆ’ ಎಂದು ಬಿ.ಎಸ್ಸಿ ವಿದ್ಯಾರ್ಥಿನಿ ಸ್ನೇಹಾ ತಿಳಿಸಿದರು.

‘ಶಿಕ್ಷಕರು ತರಗತಿಗಳಲ್ಲಿ ಮಾಡುವ ಪಾಠಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಸರ್ಕಾರ ತರಗತಿಗಳನ್ನು ಆರಂಭಿಸಿರುವುದು ಸೂಕ್ತವಾಗಿದೆ’ ಎಂದು ಅಕ್ಕ ಮಹಾದೇವಿ ಕಾಲೇಜಿನ ವಿದ್ಯಾರ್ಥಿನಿ ನಿಕಿತಾ ಕುಲಕರ್ಣಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು