ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರ ಖಂಡ್ರೆ ಆರೋಪ ಅರ್ಥಹೀನ

ಸಂಸದ ಭಗವಂತ ಖೂಬಾ ತಿರುಗೇಟು
Last Updated 13 ಮಾರ್ಚ್ 2021, 14:47 IST
ಅಕ್ಷರ ಗಾತ್ರ

ಬೀದರ್: ‘ನಾನು ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದು, ಅಭಿವೃದ್ಧಿ ವಿರೋಧಿಯಾಗಿದ್ದೇನೆ ಎಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾಡಿರುವ ಆರೋಪ ಅರ್ಥಹೀನವಾಗಿದೆ’ ಎಂದು ಸಂಸದ ಭಗವಂತ ಖೂಬಾ ತಿರುಗೇಟು ನೀಡಿದ್ದಾರೆ.

‘ಖಂಡ್ರೆ ಅವರು ಪೌರಾಡಳಿತ ಸಚಿವರಾಗಿದ್ದಾಗ ಬೀದರ್ ಹೊರವಲಯದಲ್ಲಿ ರಿಂಗ್ ರಸ್ತೆ ಮಂಜೂರಾಗಿತ್ತು. ಕಾಮಗಾರಿ ಕೂಡ ಪ್ರಗತಿಯಲ್ಲಿ ಇತ್ತು. ಗುತ್ತಿಗೆದಾರನ ಮೇಲೆ ದ್ವೇಷ ಸಾಧಿಸಲು ಟೆಂಡರ್ ರದ್ದುಪಡಿಸಿದ್ದು ಅಭಿವೃದ್ಧಿ ವಿರೋಧಿ ನೀತಿ ಅಲ್ಲವೇ’ ಎಂದು ಕೇಳಿದ್ದಾರೆ.

‘ಜನವಾಡ ಸಮೀಪ ಮಾಂಜ್ರಾ ನದಿಗೆ ಅಡ್ಡಲಾಗಿ ಅಮೃತ ಯೋಜನೆಯಡಿ ಮಂಜೂರಾಗಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ರದ್ದುಪಡಿಸಿದ್ದು ನೀವೇ ಅಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ನಿಮಗೆ ಬೇಕಾದ ಗುತ್ತಿಗೆದಾರರಿಗೆ ಕೆಲಸ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೀರಿ. ತಮ್ಮವರಿಗೆ ಟೆಂಡರ್ ಸಿಗುವುದಿಲ್ಲ ಎಂದು ತಿಳಿದಾಗ ಅಧಿಕಾರಿಗಳಿಗೆ ಬ್ಲ್ಯಾಕ್‍ಮೇಲ್ ಮಾಡುತ್ತೀರಿ. ಅವಶ್ಯಕವಾದರೆ ಅಧಿಕಾರಿಗಳ ಮೇಲೆ ಒತ್ತಡ ತರುತ್ತೀರಿ’ ಎಂದು ಆಪಾದಿಸಿದ್ದಾರೆ.

‘ನಿಮ್ಮ ವ್ಯಕ್ತಿಗೆ ಸಿಕ್ಕಿಲ್ಲ ಎನ್ನುವ ಏಕೈಕ ಕಾರಣಕ್ಕೆ ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ಮಂಜೂರಾದ ಜನೌಷಧಿ ಕೇಂದ್ರ ನಾಲ್ಕು ವರ್ಷ ಪ್ರಾರಂಭವಾಗಲು ಬಿಟ್ಟಿಲ್ಲ. ಇದು, ಬಡವರ ವಿರೋಧಿ ನಡೆ ಅಲ್ಲವೇ? ಅಭಿವೃದ್ಧಿ ವಿರೋಧಿ ಕೆಲಸ ಮಾಡುವುದು ನಿಮ್ಮ ಇತಿಹಾಸದಲ್ಲಿ ಇದೆ. ನನ್ನ ಮೇಲೆ ಆರೋಪ ಮಾಡಲು ನಿಮಗೆ ಯಾವ ನೈತಿಕತೆ ಇದೆ’ ಎಂದು ಖಂಡ್ರೆ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

‘ಜಿಲ್ಲೆಯ ಇತಿಹಾಸದಲ್ಲೇ ನನ್ನ ಅವಧಿಯಲ್ಲಿ ಯಾವ ಯಾವ ಅಭಿವೃದ್ಧಿ ಕೆಲಸಗಳಾಗಿವೆ ಎನ್ನುವುದನ್ನು ಪುಸ್ತಕ ರೂಪದಲ್ಲಿ ಹೊರ ತಂದು ಜನರಿಗೆ ಲೆಕ್ಕ ಕೊಟ್ಟ ಮೊದಲ ಸಂಸದನಾಗಿದ್ದೇನೆ’ ಎಂದು ಹೇಳಿದ್ದಾರೆ.

‘ಶಾಸಕರಾಗಿ ನಿಯಮ ಗಾಳಿಗೆ ತೂರಿ, ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡದಲ್ಲಿ ಹೇಗೆ ಖಾಸಗಿ ಕಾರ್ಯಕ್ರಮ ನಡೆಸಲು ಹೋಗಿದ್ದೀರಿ. ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮ ಹೇಗೆ ಮಾಡಿಕೊಳ್ಳಬೇಕು ಎನ್ನುವ ಜ್ಞಾನ ನಿಮಗೆ ಇಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಸಂಸದನಾಗಿ ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಭ್ರಷ್ಟಾಚಾರ, ಸರ್ವಾಧಿಕಾರಿ ಧೋರಣೆ, ಸಂವಿಧಾನಕ್ಕೆ ಅಗೌರವ ಅಥವಾ ಜನರಿಗೆ ಅನ್ಯಾಯವಾಗುತ್ತಿದ್ದರೆ ಅದರ ವಿರುದ್ಧ ಧ್ವನಿ ಎತ್ತುವೆ’ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ.

‘ನಿಮ್ಮ ದುರಾಡಳಿತದಿಂದ ಭಾಲ್ಕಿ ತಾಲ್ಲೂಕಿನ ಅರ್ಹ ವಸತಿ ಫಲಾನುಭವಿಗಳಿಗೆ ಹಣ ಬರಲು ತಡವಾಗಿದೆ. ನಮ್ಮ ಸರ್ಕಾರ ಅರ್ಹರಿಗೆ ದೊಡ್ಡು ಕೊಡಲಿದೆ. ಮುಂದೆಯೂ ನೀಡಲಿದೆ’ ಎಂದು ಹೇಳಿದ್ದಾರೆ.

‘ನಾನು ಅಭಿವೃದ್ಧಿ ಕೆಲಸಗಳಿಗೆ ವಿರೋಧಿಸುವುದಿಲ್ಲ. ಆದರೆ, ಸರ್ವಾಧಿಕಾರಿ ಆಡಳಿತ, ಭ್ರಷ್ಟಾಚಾರದ ಬಗ್ಗೆ ಸುಮ್ಮನೆ ಕೂರುವುದೂ ಇಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT