ಭಾನುವಾರ, ಜುಲೈ 25, 2021
21 °C
ಪ್ರಶಾಂತ ಸಮಯದಲ್ಲಿನ ಓದು ಫಲ ನೀಡಿತು

ಬೀದರ್ | ನಾನೇ ಪರೀಕ್ಷಕ, ನಾನೇ ಮೌಲ್ಯಮಾಪಕ- ಅಭಿಷೇಕ ಸೂರ್ಯವಂಶಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಾನು ಇನ್ನೂ ತಾಯಿ ಹೊಟ್ಟೆಯಲ್ಲಿರುವಾಗಲೇ ನನ್ನ ತಂದೆ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಹೀಗಾಗಿ ನಾನು ತಾಯಿ, ಅಜ್ಜ, ಅಜ್ಜಿಯ ಆಶ್ರಯದಲ್ಲಿ ಬೆಳೆದೆ. ನಮ್ಮದೇನು ಶ್ರೀಮಂತ ಕುಟುಂಬ ಅಲ್ಲ. ನನ್ನ ತಾಯಿ ಕೃಷಿ ಕೂಲಿ ಮಾಡಿ ನನ್ನನ್ನು ಬೆಳೆಸಿದ್ದಾರೆ. ಬದುಕಿನ ಕಷ್ಟ ಏನು ಎನ್ನುವುದು ಚೆನ್ನಾಗಿ ತಿಳಿದಿದೆ. ಅದಕ್ಕೆ ಚೆನ್ನಾಗಿ ಓದಿದೆ. ಪ್ರತಿಫಲವಾಗಿ ಉತ್ತಮ ಅಂಕಗಳು ಬಂದಿವೆ.

ನಮ್ಮ ಮನೆ ಇರುವುದು ಬಸವಕಲ್ಯಾಣ ತಾಲ್ಲೂಕಿನ ಸಸ್ತಾಪುರದಲ್ಲಿ. ಮೊದಲು ಬಸ್ಸಿಗೆ ನಿತ್ಯ ₹ 10 ಕೊಟ್ಟು ಕಾಲೇಜಿಗೆ ಹೋಗಬೇಕಾಗಿತ್ತು. ಹಣ ಇಲ್ಲದಾಗ ಒಮ್ಮೊಮ್ಮೆ ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಬಸ್‌ ಪಾಸ್‌ ದೊರೆತ ಮೇಲೆ ಒಂದಿಷ್ಟು ಅನುಕೂಲವಾಯಿತು. ನಮ್ಮ ಮನೆಯಲ್ಲಿ ನನಗಾಗಿಯೇ ಒಂದು ಚಿಕ್ಕದಾದ ಪ್ರತ್ಯೇಕ ಕೊಠಡಿ ಇದೆ. ಅದರಲ್ಲಿಯೇ ಕುಳಿತು ಓದುತ್ತೇನೆ. ನಾನು ದೊಡ್ಡ ಅಧಿಕಾರಿಯಾಗಬೇಕು ಎನ್ನುವ ಆಸೆ ತಾಯಿ ಹಾಗೂ ಅಜ್ಜನಿಗೆ ಇದೆ. ಅದನ್ನು ಸಾಕಾರಗೊಳಿಸಬೇಕಿದೆ.

ಬೆಳಿಗ್ಗೆ ಕಾಲೇಜಿಗೆ ಹೋಗಬೇಕಾಗುತ್ತಿತ್ತು. ಸಂಜೆ 7 ಗಂಟೆಗೆ ಊಟ ಮಾಡಿದ ಮೇಲೆ ಮಲಗಿಕೊಳ್ಳುತ್ತಿದ್ದೆ. ಮನೆಯಲ್ಲಿದ್ದವರು ಟಿವಿ ನೋಡಿ ರಾತ್ರಿ 8 ಅಥವಾ 8.30ರ ಹೊತ್ತಿಗೆ ಮಲಗುತ್ತಿದ್ದರು. ಅವರೆಲ್ಲ ನಿದ್ರೆಗೆ ಜಾರಿದ ನಂತರ ರಾತ್ರಿ 11 ಗಂಟೆಗೆ ಎದ್ದು ಒಂದಿಷ್ಟು ಟೀ ಕುಡಿದು ಓದಲು ಕುಳಿತುಕೊಳ್ಳುತ್ತಿದ್ದೆ. ಕಾಲೇಜು ಇದ್ದಾಗ ಮಧ್ಯರಾತ್ರಿ 12.30ರಿಂದ 1 ಗಂಟೆಯ ವರೆಗೂ ಓದುತ್ತಿದ್ದೆ. ಪರೀಕ್ಷೆ ಒಂದು ತಿಂಗಳು ಬಾಕಿ ಇದ್ದಾಗ ಬೆಳಗಿನ ಜಾವದ ವರೆಗೂ ಓದುತ್ತಿದ್ದೆ. ನಿದ್ದೆ ಬಂದಾಗ ಡೈಗ್ರಾಮ್ ಹಾಗೂ ಸೂತ್ರಗಳನ್ನು ಬಿಡಿಸುತ್ತಿದ್ದೆ. ಬೆಳಗಾದ ನಂತರ ವಿಶ್ರಾಂತಿ ಪಡೆಯುತ್ತಿದ್ದೆ.

ಇಂಟರ್‌ನೆಟ್‌ನಲ್ಲಿ ಲಭ್ಯ ಇದ್ದ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದೆ.
ಪುನರಾವರ್ತಿತ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಮನೆಯಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಿದ್ದೆ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ 15 ನಿಮಿಷ ಸಮಯ ಉಳಿಸಿಕೊಳ್ಳುತ್ತಿದ್ದೆ. ಈ ಸಮಯವನ್ನು ಪ್ರಶ್ನೆಗಳಿಗೆ ಅನುಕ್ರಮವಾಗಿ ಉತ್ತರಿಸಿದ್ದನ್ನು ಖಾತರಿ ಪಡಿಸಿಕೊಲು ಬಳಸಿಕೊಳ್ಳುತ್ತಿದೆ.

2019ರಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಅದನ್ನು ಡೌನ್‌ಲೋಡ್ ಮಾಡಿಕೊಂಡು ಅಚ್ಚುಕಟ್ಟಾಗಿ ಅನುಸರಿಸಿದೆ. ಕಾಲೇಜಿನಲ್ಲಿ ತಿಂಗಳ ಟೆಸ್ಟ್, ಪೂರಕ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಅವುಗಳನ್ನು ಅಚ್ಚುಕಟ್ಟಾಗಿ ಬಿಡಿಸುತ್ತಿದ್ದೆ. ಕಾಲೇಜಿನಲ್ಲಿ ನಡೆಸುತ್ತಿದ್ದ ಪರೀಕ್ಷೆಯಲ್ಲಿ ನಾನೇ ಮೊದಲ ಸ್ಥಾನ ಪಡೆಯುತ್ತಿದ್ದೆ.

ರಾಜಕೀಯವಿಜ್ಞಾನ ಪರೀಕ್ಷೆ ಬರೆದಾಗ ಹೆಚ್ಚುವರಿ ಬುಕ್‌ಲೆಟ್ ಕೊಟ್ಟಿದ್ದರು. ಆದರೆ, ಸಮಾಜವಿಜ್ಞಾನ ಪರೀಕ್ಷೆಯಲ್ಲಿ ಹೆಚ್ಚುವರಿ ಬುಕ್‌ಲೆಟ್‌ ಕೊಡಲಿಲ್ಲ. ಆದರೂ ಸಮಾಜವಿಜ್ಞಾನದಲ್ಲಿ 91 ಅಂಕ ಬಂದಿವೆ. ಪರೀಕ್ಷೆ ಮುಗಿಯಲು 15 ನಿಮಿಷ ಬಾಕಿ ಇದ್ದಾಗ ಸಪ್ಲಿಮೆಂಟ್‌ ಕೇಳಿದರೂ ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಹೆಚ್ಚುವರಿ ಬುಕ್‌ಲೆಟ್‌ ಕೊಡಲಿಲ್ಲ. 42 ಪುಟಗಳ ಶೀಟ್‌ನಲ್ಲೇ ಬರೆದು ಮುಗಿಸುವಂತೆ ಸೂಚಿಸಿದರು. ನನಗೆ ಕೊಟ್ಟ ಶೀಟ್‌ನಲ್ಲಿ ಜಾಗ ಇಲ್ಲದ ಕಾರಣ 5 ಅಂಕಗಳ ಉತ್ತರ ಬಿಡಿಸಲಾಗಲಿಲ್ಲ. ಇಲ್ಲದಿದ್ದರೆ 98 ಅಂಕಗಳನ್ನಾದರೂ ಪಡೆಯಲು ಸಾಧ್ಯವಿತ್ತು.

ಸ್ಪರ್ಧಾತ್ಮಕ ಪರೀಕ್ಷೆ ಬರೆದು ಒಳ್ಳೆಯ ಐಎಎಸ್ ಅಧಿಕಾರಿಯಾಗಬೇಕು ಎನ್ನುವುದು ನನ್ನ ಗುರಿಯಾಗಿದೆ. ಆರ್ಥಿಕ ಬಲ ಇಲ್ಲ. ಹೀಗಾಗಿ ಮೊದಲು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಅದರ ಜತೆ ಜತೆಯಾಗಿ ಓದಬೇಕು ಎಂದು ಯೋಜನೆ ಹಾಕಿಕೊಂಡಿದ್ದೇನೆ. ನನ್ನ ಉತ್ತಮ ಅಂಕಕ್ಕೆ ಒಳ್ಳೆಯ ನೌಕರಿ ದೊರೆತರೆ ಮಾಡುವೆ. ಆದರೆ, ಗುರಿ ಸಾಧಿಸುವ ಛಲ ಬಿಡಲಾರೆನು.

ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ

ಬೀದರ್‌: ಜಿಲ್ಲೆಯ ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಕಲಾ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿಷೇಕ ಸೂರ್ಯವಂಶಿ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ 575 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ಅಭಿಷೇಕ ಅವರ ತಂದೆ ತಾಯಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದಾರೆ. ಬಡತನದ ಕಾರಣ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲಾಗಲಿಲ್ಲ. ಅಭಿಷೇಕ ತಾಯಿಯ ಗರ್ಭದಲ್ಲಿದ್ದಾಗಲೇ ತಂದೆ ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದಿದ್ದರು. ಆದರೆ, ತಾಯಿ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಸಾಧ್ಯವಿರುವ ಪ್ರಯತ್ನ ನಡೆಸಿದ್ದಾರೆ.

ಅಭಿಷೇಕ ಅನಕ್ಷರಸ್ಥರ ಕುಟುಂಬದಲ್ಲಿ ಬೆಳೆದರೂ ಆಸಕ್ತಿಯಿಂದ ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕೃಷಿಕೂಲಿ ಮಾಡಿ ಅವರ ತಾಯಿ ಕಷ್ಟಪಟ್ಟು ಬೆಳೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅಭಿಷೇಕ ಸಹ ಪರಿಶ್ರಮಪಟ್ಟು ಓದಿ ಕನ್ನಡದಲ್ಲಿ 98, ಹಿಂದಿಯಲ್ಲಿ 99, ಇತಿಹಾಸದಲ್ಲಿ 97, ರಾಜಕೀಯವಿಜ್ಞಾನದಲ್ಲಿ 96 ಹಾಗೂ ಸಮಾಜ ವಿಜ್ಞಾನದಲ್ಲಿ 91 ಅಂಕ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಭಾಲ್ಕಿ ತಾಲ್ಲೂಕಿನ ಚಳಕಾಪುರದ ಎಸ್‌.ಎಸ್‌.ಸ್ವಾಮೀಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಫ್ರೋಜ್‌ ಮಹಮ್ಮದ್‌ ಹುಸೇನ್ 574 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಹಾಗೂ ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಕಲಾ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ರಾಮ 569 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ನಿರೂಪಣೆ: ಚಂದ್ರಕಾಂತ ಮಸಾನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು