ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ: ವಾಸವಿಲ್ಲದೇ ಪಾಳು ಬಿದ್ದಿರುವ ಶಿಕ್ಷಕರ ವಸತಿ ಗೃಹ

ಭಾಲ್ಕಿ ಸಾರ್ವಜನಿಕರ ತೆರಿಗೆ ಹಣ ಪೋಲು: ಆಕ್ರೋಶ
ಬಸವರಾಜ್ ಎಸ್.ಪ್ರಭಾ
Published : 14 ಸೆಪ್ಟೆಂಬರ್ 2024, 6:50 IST
Last Updated : 14 ಸೆಪ್ಟೆಂಬರ್ 2024, 6:50 IST
ಫಾಲೋ ಮಾಡಿ
Comments

ಭಾಲ್ಕಿ: ತಾಲ್ಲೂಕಿನ ವಿವಿಧೆಡೆ ನಿರ್ಮಾಣಗೊಂಡಿರುವ ವಸತಿಗೃಹಗಳು (ಗುರುಭವನಗಳು) ಪಾಳು ಬಿದ್ದಿವೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಶಿಕ್ಷಕರ ವಾಸಕ್ಕೆಂದು ನಿರ್ಮಿಸಿರುವ ಕಟ್ಟಡಗಳು ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಭಾತಂಬ್ರಾ, ಹಲಬರ್ಗಾ, ಧನ್ನೂರ ಗ್ರಾಮಗಳಲ್ಲಿ ನಿರ್ಮಾಣಗೊಂಡ ಗೃಹಗಳಲ್ಲಿ ಹಲಬರ್ಗಾದಲ್ಲಿ ಮಾತ್ರ ಆರು ಶಿಕ್ಷಕ ಕುಟುಂಬಗಳು ವಾಸಿಸುತ್ತಿವೆ. ಉಳಿದೆಡೆ ಎರಡೂ ಗ್ರಾಮಗಳ ಭವನಗಳು ಯಾವ ಶಿಕ್ಷಕರೂ ವಾಸ ಇಲ್ಲದೇ ಹಾಳು ಬಿದ್ದಿವೆ.

ಗ್ರಾಮದಲ್ಲಿ ಮೂವತ್ತು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ವಸತಿ ಗೃಹ ನಿರ್ಮಿಸಲಾಗಿದೆ. ಕಟ್ಟಡ ಪೂರ್ಣಗೊಂಡಾಗಿನಿಂದಲೂ ಶಿಕ್ಷಕರ ವಾಸವಿಲ್ಲದೇ ಇರುವುದರಿಂದ ಪುಂಡ–ಪೋಕರಿಗಳ ಹಾವಳಿಗೆ ಒಳಗಾಗಿ ಕಟ್ಟಡದ ಕೆಲ ಕೋಣೆಗಳ ಬಾಗಿಲು, ಕಿಟಕಿ, ಗಾಜು, ಪರಸಿ ಸೇರಿದಂತೆ ಇತರ ವಸ್ತು ಕಾಣೆಯಾಗಿವೆ.

’ಈ ಕಟ್ಟಡವನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಈಚೆಗೆ ನವೀಕರಣ ಮಾಡಲಾಗಿದೆ. ಆದರೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ನಿರಾಸಕ್ತಿ, ನಿರ್ಲಕ್ಷ್ಯದಿಂದ ಎಂಟು ಬ್ಲಾಕ್‌ಗಳು ಯಾವುದೇ ಉಪಯೋಗಕ್ಕೂ ಬಾರದೇ ನಿಷ್ಪ್ರಯೋಜಕ ಆಗಿವೆ’ ಎಂದು ಭಾತಂಬ್ರಾ ಗ್ರಾಮದ ವಕೀಲ ಮಹೇಶ ರಾಚೋಟೆ ಅಸಮಾಧಾನ ವ್ಯಕ್ತಪಡಿಸಿದರು.

ಧನ್ನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಿಂಭಾಗದಲ್ಲಿರುವ ವಸತಿ ಗೃಹವೂ ಕೂಡ ಪಾಳು ಬಿದ್ದಿದೆ.

’ಶಿಕ್ಷಕರು ತಾವು ಕಾರ್ಯನಿರ್ವಹಿಸುವ ಶಾಲೆ ಸಮೀಪದ ವಾಸ ಮಾಡಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆ, ಶಾಲೆಯ ಅಭ್ಯುಧ್ಯಯಕ್ಕೆ ಸಹಕಾರಿ ಆಗುತ್ತದೆ. ದೂರದ ಊರುಗಳಿಂದ ಪ್ರಯಾಣ ಮಾಡಿ ನಿತ್ಯ ಶಾಲೆಗೆ ಆಗಮಿಸುವ ಸಂಕಟವೂ ತಪ್ಪುತ್ತದೆ ಎಂಬ ಸದುದ್ದೇಶ ಸೇರಿದಂತೆ ನಿರ್ಮಿಸಲಾಗಿದೆ. ಆದರೆ, ಶಿಕ್ಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲದ ಸ್ಥಳಗಳಲ್ಲಿ ವಾಸ ಇರುವುದರಿಂದ ಭವನಗಳು ನಿಷ್ಪ್ರಯೋಜಕವಾಗಿವೆ’ ಎಂದು ಜನರು ಆರೋಪಿಸಿದ್ದಾರೆ.

’ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಟ್ಟಡಗಳ ಸದ್ಬಳಕೆಗೆ ಸೂಕ್ತ ರೂಪುರೇಷೆ ತಯಾರಿಸಬೇಕು’ ಎಂದು ಜನರು ಒತ್ತಾಯಿಸಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ತಲೆ ಎತ್ತಿರುವ ವಸತಿಗೃಹದಲ್ಲಿ (ಗುರುಭವನ) ಶಿಕ್ಷಕರು ವಾಸ ಮಾಡಬೇಕು. ಇಲ್ಲವೇ ಅಧಿಕಾರಿಗಳು ಈ ಕಟ್ಟಡವನ್ನು ಶೈಕ್ಷಣಿಕ ಕಾರ್ಯಕ್ರಮಗಳ ಉಪಯೋಗಕ್ಕೆ ಬಳಸಿಕೊಳ್ಳಬೇಕು
ಮಹೇಶ ರಾಚೋಟೆ ವಕೀಲ ಭಾತಂಬ್ರಾ
ತಾಲ್ಲೂಕಿನ ಮೂರು ಕಡೆಗಳಲ್ಲಿ ಇರುವ ವಸತಿ ಗೃಹಗಳಿಗೆ ತೆರಳಿ ವಸ್ತು ಸ್ಥಿತಿ ಅರಿಯುವೆ. ನಂತರ ಮುಂದಿನ ಕ್ರಮ ಕೈಗೊಳ್ಳುವೆ
ವಿಜಯಲಕ್ಷ್ಮಿ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT