ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೀಯ

ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿಕೆ
Last Updated 15 ಆಗಸ್ಟ್ 2022, 12:27 IST
ಅಕ್ಷರ ಗಾತ್ರ

ಬೀದರ್‌: ‘ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ನೇತಾಜಿ ಸುಭಾಷ ಚಂದ್ರಬೋಸ್, ಬಾಲ ಗಂಗಾಧರ ತಿಲಕ್, ಭಗತಸಿಂಗ್, ರಾಜಗುರು, ಸುಖದೇವ ಸೇರಿದಂತೆ ಅನೇಕ ಮಹಾಪುರುಷರನ್ನು ಇಂದು ಸ್ಮರಿಸಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ಇಲ್ಲಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾದ ಸಂವಿಧಾನ ರಚಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. 75 ವರ್ಷಗಳ ಅವಧಿಯಲ್ಲಿ ಭಾರತವು ಅಖಂಡವಾಗಿ ಉಳಿದಿರುವುದೇ ಅತಿದೊಡ್ಡ ಸಾಧನೆಯಾಗಿದೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಜಗತ್ತಿಗೆ ಮಾದರಿಯಾಗಿದೆ’ ಎಂದು ತಿಳಿಸಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗಿದೆ. ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ 3.63 ಲಕ್ಷ ಮನೆಗಳ ಮೇಲೆ ಧ್ವಜಗಳನ್ನು ಹಾರಿಸಲು ಸ್ಥಳೀಯ ಸಂಸ್ಥೆಗಳು ಹಾಗೂ ದಾನಿಗಳಿಂದ ಪೂರೈಸಲಾಗಿದೆ. 1 ಕಿ.ಮೀ. ಉದ್ದದ ತಿರಂಗಾ ಯಾತ್ರೆಯು ಜಿಲ್ಲೆಯ ಎಲ್ಲ ಪಟ್ಟಣಗಳಲ್ಲಿ ಸಂಚರಿಸಿ ಜನರಲ್ಲಿ ರಾಷ್ಟ್ರ ಪ್ರೇಮ ಜಾಗೃತಗೊಳಿಸಿದೆ’ ಎಂದರು.

‘ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 3.62 ಲಕ್ಷ ನೊಂದಣಿ ಮಾಡಿ ರಾಜ್ಯದಲ್ಲಿಯೇ ಬೀದರ್ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಬಸವಕಲ್ಯಾಣದಲ್ಲಿ ₹ 612 ಕೋಟಿ ಯೋಜನಾ ಮೊತ್ತದ ನೂತನ ಅನುಭವ ಮಂಟಪದ ನಿರ್ಮಾಣ ಕಾಮಗಾರಿ ಆರಂಭವಾಗಿದೆ’ ಎಂದು ಹೇಳಿದರು.

‘ಪುಣ್ಯಕೋಟಿ ದತ್ತು ಯೋಜನೆಯಡಿ ಸಾರ್ವಜನಿಕರು ವಾರ್ಷಿಕವಾಗಿ ₹ 11ಸಾವಿರ ಪಾವತಿಸಿ ಗೋಶಾಲೆಯಲ್ಲಿರುವ ಒಂದು ಹಸುವನ್ನು ದತ್ತು ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.


‘ಜಿಲ್ಲೆಯಲ್ಲಿ ಮಳೆಯಿಂದಾಗಿ 1,893 ಮನೆ ಹಾನಿಯಾಗಿದ್ದು, ತುರ್ತು ಪರಿಹಾರವಾಗಿ ಪ್ರತಿ ಮನೆಗಳಿಗೆ ತಲಾ ₹ 10 ಸಾವಿರ ನೀಡಲಾಗಿದೆ. ಜಲ ಜೀವನ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ನಳದ ಮುಖಾಂತರ ಪ್ರತಿಯೊಬ್ಬರಿಗೆ 55 ಲೀಟರ್ ನೀರು ಒದಗಿಸಲಾಗುತ್ತಿದೆ. ಬೀದರ್‌ನಿಂದ ವಿಮಾನಯಾನ ಸೇವೆ ಆರಂಭವಾಗಿದೆ. ಬೀದರ್‌ದಿಂದ ಹುಬ್ಬಳ್ಳಿಗೆ ಪ್ರಾಯೋಗಿಕ ರೈಲು ಸಂಚಾರ ಶುರುವಾಗಿದೆ. ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಮತ್ತು ಬೀದರ್- ಔರಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ತಿಳಿಸಿದರು.


ಇದಕ್ಕೂ ಮೊದಲು ವಿವಿಧ ಪಡೆಗಳು, ಎನ್‌ಸಿಸಿ ಕೆಡೆಟ್‌, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ಜಿಲ್ಲಾಧಿಕಾರಿ ಪರೇಡ್‌ ವೀಕ್ಷಣೆ ಮಾಡಿದರು.

ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಶಾಸಕ ಬಂಡೆಪ್ಪ ಕಾಶೆಂಪುರ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಕಿಶೋರಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್, ಬೀದರ್‌ ಉಪ ವಿಭಾಗಾಧಿಕಾರಿ ಮೊಹಸಿನ್‌ ಮೋಮಿನ್ ಇದ್ದರು. ಚೆನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ರಾಯಚೂರಿನಲ್ಲಿ ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರಿಂದ ಇಲ್ಲಿಗೆ ಬಂದಿರಲಿಲ್ಲ. ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ವಿಧಾನ ಪರಿಷತ್‌ ಸದಸ್ಯರು ಹಾಜರಿರಲಿಲ್ಲ.


* * *

100 ಅಡಿ ಎತ್ತರದ ಧ್ವಜ ಸ್ತಂಬದ ಮೇಲೆ ಧ್ವಜಾರೋಹಣ

ಜಿಲ್ಲಾಡಳಿತ ವತಿಯಿಂದ ನೆಹರೂ ಕ್ರೀಡಾಂಗಣದಲ್ಲಿ 100 ಅಡಿ ಅತಿ ಎತ್ತರದ ಧ್ವಜ ಸ್ತಂಬದ ಮೇಲೆ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಬಟನ್ ಒತ್ತುವ ಮೂಲಕ ಧ್ವಜಾರೋಹಣ ನೆರವೇರಿಸಿದರು.
ಇದಕ್ಕೂ ಮುಂಚೆ ಡಾ.ಅಂಬೇಡ್ಕರ್ ವೃತ್ತದಿಂದ ನೆಹರೂ ಕ್ರೀಡಾಂಗಣದ ವರೆಗೆ 1 ಕಿ.ಮೀ. ಉದ್ದದ ತಿರಂಗಾ ಯಾತ್ರೆ ನಡೆಯಿತು.

ಅಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತ್ರಿವರ್ಣ ಟೀಶರ್ಟ್‌ದ ಹಾಗೂ ಕ್ಯಾಪ್‌ಗಳನ್ನು ಧರಿಸಿ ಜಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿದ್ದ ದೇಶ ಇಬ್ಭಾಗವಾದಾಗಿನ ಘೋರ ದುರಂತಗಳನ್ನು ಬಿಂಬಿಸುವ ಛಾಯಾ ಚಿತ್ರಗಳ ಪ್ರದರ್ಶನವನ್ನು ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT