ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಲಿಂಗಾಯತ ಮಠಗಳ ಸೇವೆ ದೊಡ್ಡದು

ಮಂಠಾಳ ಗುರುಲಿಂಗೇಶ್ವರ ಮಠದ ಪಟ್ಟಾಧಿಕಾರ ಕಾರ್ಯಕ್ರಮ
Last Updated 6 ಫೆಬ್ರುವರಿ 2023, 6:42 IST
ಅಕ್ಷರ ಗಾತ್ರ

ಬಸವಕಲ್ಯಾಣ: `ನಾಡಿಗೆ ವೀರಶೈವ ಲಿಂಗಾಯತ ಮಠಗಳ ಶೈಕ್ಷಣಿಕ ಕೊಡುಗೆ ದೊಡ್ಡದು. ಜಾತಿ, ಧರ್ಮ ನೋಡದೆ ಐಟಿ, ಬಿಟಿ, ವೈದ್ಯಕೀಯ ಕ್ಷೇತ್ರದ ದಿಗ್ಗಜರನ್ನು ಮಠಗಳ ಸಂಸ್ಥೆಗಳಲ್ಲಿ ಬೆಳೆಸಲಾಗುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ತಾಲ್ಲೂಕಿನ ಹೋಬಳಿ ಕೇಂದ್ರ ಮಂಠಾಳದ ಗುರುಲಿಂಗೇಶ್ವರ ಚೌಕಿಮಠದಲ್ಲಿ ಭಾನುವಾರ ನಡೆದ ಅಭಿನವ ಚನ್ನಬಸವ ಸ್ವಾಮೀಜಿಯವರ ಪಟ್ಟಾಧಿಕಾರದ ಶೂನ್ಯ ಸಿಂಹಾಸನಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಮಠ ಸಮಾಜದ ಆಸ್ತಿ, ಮಠಾಧೀಶರು ಜ್ಞಾನಿ ಆಗಿರಬೇಕು. ಧರ್ಮ, ಪಕ್ಷಭೇದ ಮಾಡಬಾರದು. ಜಾತ್ಯತೀತ ಮನೋಭಾವ ಹೊಂದಿರಬೇಕು. ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ಸಕ್ರಿಯ ಆಗಿರಬೇಕು. ಆದರೆ, ಈಚೆಗೆ ಕೆಲವರ ನಡವಳಿಕೆಯಿಂದ ಧಾರ್ಮಿಕ ಕ್ಷೇತ್ರ ಕಲುಷಿತಗೊಳ್ಳುತ್ತಿದೆ. ಭಕ್ತರಲ್ಲಿನ ವಿಶ್ವಾಸ ಕಡಿಮೆ ಆಗುತ್ತಿರುವುದು ವಿಷಾದನೀಯ. ಬಸವಕಲ್ಯಾಣದಲ್ಲಿಯ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಗೋ.ರು.ಚನ್ನಬಸಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿ ₹650 ಕೋಟಿಯ ನೀಲನಕ್ಷೆ ಸಿದ್ಧಪಡಿಸಲಾಗಿತ್ತು’ ಎಂದರು.

ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ, `ಈ ಮಠಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಹಿಂದಿನ ಗುಹೇಶ್ವರ ಸ್ವಾಮೀಜಿ ಉತ್ತಮ ಕಾರ್ಯ ಕೈಗೊಂಡರು. ನೂತನ ಸ್ವಾಮೀಜಿಯವರ ಪಟ್ಟಾಧಿಕಾರಕ್ಕೆ ಗ್ರಾಮಸ್ಥರು ಎಲ್ಲ ರೀತಿಯಿಂದಲೂ ಸಹಕರಿಸಿರುವುದು ಸಂತಸ ತಂದಿದೆ’ ಎಂದರು.

ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ ಗುಂಗೆ ಮಾತನಾಡಿ, `ವ್ಯಸನಮುಕ್ತ ಸಮಾಜಕ್ಕಾಗಿ ಮಠಾಧೀಶರು ಪ್ರಯತ್ನಿಸಬೇಕು’ ಎಂದರು. ಅಭಿನವ ಚನ್ನಬಸವ ಸ್ವಾಮೀಜಿ, ಬೇಲೂರ ಚಿದ್ಘನಲಿಂಗ ಸ್ವಾಮೀಜಿ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮುಖಂಡರಾದ ಧನರಾಜ ತಾಳ್ಳಂಪಳ್ಳಿ, ಅರ್ಜುನ ಕನಕ, ನೀಲಕಂಠ ರಾಠೋಡ, ಶಿವರಾಜ ನರಶೆಟ್ಟಿ, ಬಸವರಾಜ ಧನ್ನೂರ, ಜಗನ್ನಾಥ ಮಾಲಿ ಪಾಟೀಲ, ಹುಕ್ಕೇರಿ ಸದಾಶಿವ ಸ್ವಾಮೀಜಿ, ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಗಡಿಗೌಡಗಾಂವ ಶಾಂತವೀರ ಶಿವಾಚಾರ್ಯರು, ಶಿವಕುಮಾರ ಶೆಟಗಾರ, ಗಿರೀಶ ತಾಂಬೋಳೆ, ಪುಷ್ಪರಾಜ ಹಾರಕೂಡೆ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ, ರವೀಂದ್ರ ಶಾಯಪ್ಪ, ಬಾಬುರಾವ್ ಪಾಟೀಲ್, ಶಿವರಾಜ ಪಾರಾ, ಗುರುಲಿಂಗಪ್ಪ ಮುಸ್ತಾಪುರೆ, ಮಹಾದೇವ ಪಾಟೀಲ, ವೀರಭದ್ರಯ್ಯ ಸ್ವಾಮಿ, ಬಂಡೆಪ್ಪ ಮಾಳಿ, ಶಿವಶರಣಪ್ಪ
ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಬೆಳಗಿನಜಾವ ಹುಲಸೂರ ಶಿವಾನಂದ ಸ್ವಾಮೀಜಿ ನೇತೃತ್ವದಲ್ಲಿ ಮಲ್ಲಿಕಾರ್ಜುನ ದೇವರಿಗೆ ಅಭಿನವ ಚನ್ನಬಸವ ಸ್ವಾಮೀಜಿ ಎಂದು ನಾಮಕರಣ ಮಾಡಿ ಚಿನ್ಮಯಾನುಗ್ರಹ ಮತ್ತು ಬ್ರಹ್ಮೋಪದೇಶ ನೀಡಲಾಯಿತು. ನೂತನ ಸ್ವಾಮೀಜಿ ಅವರನ್ನು ಸಾರೋಟದಲ್ಲಿ ಮೆರವಣಿಗೆ ಸಹ ನಡೆಸಲಾಯಿತು. ಅಪಾರ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT