ಶನಿವಾರ, ಆಗಸ್ಟ್ 13, 2022
22 °C
ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಮೇಲ್ವಿಚಾರಕ ಜಯಪೌಲ್ ಅಭಿಮತ

ಧರ್ಮದ ನೆರಳಿಲ್ಲದ ಬದುಕು ನಿರರ್ಥಕ: ಜಯಪೌಲ್ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಧರ್ಮದ ನೆರಳಿಲ್ಲದ ಬದುಕು ನಿರರ್ಥಕ. ಧರ್ಮ ಕಾರ್ಯವು ಮನುಷ್ಯನನ್ನು ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುತ್ತದೆ’ ಎಂದು ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಮೇಲ್ವಿಚಾರಕ ರೆ.ಎಂ.ಪಿ.ಜಯಪೌಲ್ ಅಭಿಪ್ರಾಯಪಟ್ಟರು.

ಇಲ್ಲಿಯ ಮಂಗಲಪೇಟೆ ಎಂ.ಎಂ.ಸಿ. ಮೈದಾನದ ಸಮೀಪದ ಸಮುದಾಯ ಭವನದಲ್ಲಿ ಶಿರೋಮಣಿ ಡಾಕುಳಗಿ ರಚಿತ 'ಜೀವನ ಸಾಗರ' ಭಕ್ತಿ ಗೀತೆಗಳ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ದೇವರ ಕೃಪೆಯಿಂದ ಮಾತ್ರ ಮನುಷ್ಯನ ಬಾಳು ಬಂಗಾರವಾಗಲು ಸಾಧ್ಯ. ಭಕ್ತಿ ಗೀತೆಗಳು ಭಕ್ತ ಹಾಗೂ ಭಗವಂತನ ನಡುವೆ ಬಾಂಧ್ಯವ್ಯ ಬೆಸೆಯುವ ಕಾರ್ಯ ಮಾಡುತ್ತವೆ’ ಎಂದು ತಿಳಿಸಿದರು.

‘ಧರ್ಮ ಹಾಗೂ ತತ್ವಗಳ ಕುರಿತು ಬರೆಯುವ ಲೇಖಕನಲ್ಲಿ ತಾಳ್ಮೆ ಮಹತ್ವದ ಪಾತ್ರ ವಹಿಸುತ್ತದೆ. ಭಾವಪರವಶನಾದ ಭಕ್ತನು ಸಹಜವಾಗಿಯೇ ದೇವರನ್ನು ಕಾಣಬಹುದು. ಡಾಕುಳಗಿ ಅವರು ಭಕ್ತಿ ಭಾವವನ್ನು ಜಾಗೃತಗೊಳಿಸುವಂತಹ ಕಾರ್ಯ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಟಿ.ಎಂ.ಮಚ್ಚೆ ಕೃತಿ ಪರಿಚಯಿಸಿ ಮಾತನಾಡಿ, ‘ಭಕ್ತಿ ಗೀತೆಗಳು ವ್ಯಕ್ತಿಯ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಜೀವನದ ಜಂಜಾಟಗಳಿಂದ ಕೊಂಚ ಹೊರ ಬಂದು ನಿರಾಳವಾಗಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಧರ್ಮ ಹಾಗೂ ತತ್ವಗಳ ಕುರಿತು ಬರೆಯುವ ಲೇಖಕನಿಗೆ ಸಾಮಾಜಿಕ ಕಾಳಜಿ ಹಾಗೂ ಲೋಕದ ಪರಿಜ್ಞಾನ ಇದ್ದರೆ ಕೃತಿ ಅದ್ಭುತವಾಗಿ ಮೂಡಿಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಯಾವುದೇ ಗೀತೆಗಳು ಬದುಕನ್ನು ಅರಳಿಸುವಂತಿರಬೇಕು. ಅಂತರಂಗ ಮತ್ತು ಬಹಿರಂಗಗಳೆರಡೂ ಶೋಧಿಸಿ ಸಾಣೆ ಹಿಡಿಯುವ ಕೆಲಸ ಮಾಡಬೇಕು. ಜೀವನದ ಜಿಗುಪ್ಸೆಗೆ ಭಜನೆಗಳು ನೆಮ್ಮದಿಯ ಮುಲಾಮು ಹಚ್ಚಿ ಸಂತೈಸುವಂತಹ ಕೆಲಸ ಮಾಡುವಂತಿರಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂತ ಪೌಲ್ ಮೆಥೋಡಿಸ್ಟ್ ಕೇಂದ್ರ ಸಭೆಯ ಸಹಾಯಕ ಸಭಾಪಾಲಕ ಕ್ರಿಸ್ಟೋಫರ್ ಡೇವಿಡ್ ಮಾತನಾಡಿ, ‘ಅನುಭವ ಜನ್ಯ ಭಾವಗಳು ಅದ್ಭುತವಾಗಿ ಮೂಡಿ ಬರುತ್ತವೆ. ನಮ್ಮಲ್ಲಿ ಪ್ರತಿಭೆಗಳ ಕೊರತೆ ಇಲ್ಲದಿದ್ದರೂ ಇಂದು ಆಸಕ್ತಿಯಿಂದ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

‘ಅಧ್ಯಯನ ಜ್ಞಾನಾರ್ಜನೆಗೆ ಮೂಲವಾಗಿದೆ. ಅಧ್ಯಯನ ಪ‌್ರವೃತ್ತಿ ಬೆಳೆಸುವ ಮೂಲಕ ನಾಡಿನ ಸಾಹಿತ್ಯ ಹಾಗೂ ಸಾಹಿತಿಗಳನ್ನು ಉಳಿಸಬೇಕು’ ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ರೆ.ಡಿಸೋಜಾ ಥಾಮಸ್, ಯೇಶಪ್ಪ ವಡಗಾಂವ, ಡಾ.ವಿಜಯಕುಮಾರ, ಅನಿಲಕುಮಾರ ಕಮಠಾಣಾ, ಸುನೀಲಕುಮಾರ, ನಥಾನಿಯೇಲ್, ಜಾನ್ ವಡಗಾಂವ, ಪ್ರಭಾಕರ, ಸೈಮನ್ ರಾಜಶೇಖರ, ವಿಜಯಕುಮಾರ್ ಗೌರೆ, ಶಿವಶಂಕರ, ಪಿ.ಜೆ. ಜೋಸೆಫ್, ಸುಧಾಕರ, ಭಾಸ್ಕರ್ ಇದ್ದರು.

ಶಿವಕುಮಾರ ಪಾಂಚಾಳ, ಸಂಜು ಆಣದೂರ, ಮಾರುತಿ ಸೂರ್ಯವಂಶಿ ಕೃತಿಯಲ್ಲಿರುವ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಡೇವಿಡ್ ಸನ್ ನಿರೂಪಿಸಿದರು.ಬಿ.ಕೆ. ಸುಂದರರಾಜ್ ಸ್ವಾಗತಿಸಿದರು. ಶಿರೋಮಣಿ ತಾರೆ ವಂದಿಸಿದರು. ಹೊಸನ್ನಾ ಭಜನಾ ಮಂಡಳಿ ಕಾರ್ಯಕ್ರಮ ಸಂಘಟಿಸಿತ್ತು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.