ಶನಿವಾರ, ಸೆಪ್ಟೆಂಬರ್ 25, 2021
29 °C
ಮಳಚಾಪುರ: ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

ಭಾಲ್ಕಿ: ಎದೆಹಾಲು ಮಕ್ಕಳಿಗೆ ಸರ್ವಶ್ರೇಷ್ಠ ಆಹಾರ, ಡಾ.ಶರಣ ಬುಳ್ಳಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಯಿ ಎದೆಹಾಲು ಮಕ್ಕಳಿಗೆ ಸರ್ವಶ್ರೇಷ್ಠ ಆಹಾರವಾಗಿದೆ ಎಂದು ಬ್ರಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶರಣ ಬುಳ್ಳಾ ನುಡಿದರು.

ವಿಶ್ವ ಸ್ತನ್ಯಪಾನ ಸಪ್ತಾಹ ಪ್ರಯುಕ್ತ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಭಾಲ್ಕಿ ತಾಲ್ಲೂಕಿನ ಮಳಚಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ತಾಯಿ ಎದೆಹಾಲು ಮಹತ್ವ ಹಾಗೂ ಕೋವಿಡ್ ಲಸಿಕೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗಾಗಿ ಜನನದಿಂದ ಆರು ತಿಂಗಳ ವರೆಗೆ ಸ್ತನ್ಯಪಾನ ಮಾಡಿಸಬೇಕು. ನಂತರ ಮನೆಯಲ್ಲೇ ತಯಾರಿಸಿದ ರಾಗಿ ಗಂಜಿ, ರವೆ ಇಡ್ಲಿ, ಅನ್ನದಂತಹ ಮೃದು ಪದಾರ್ಥಗಳನ್ನು ಕೊಡಬಹುದು ಎಂದು ಸಲಹೆ ಮಾಡಿದರು.

ಮಗು ಜನಿಸಿದ ಒಂದು ದಿನ ತಾಯಿ ಎದೆಹಾಲು ಕುಡಿಸಬಾರದು ಎನ್ನುವುದು ಮೂಢನಂಬಿಕೆಯಾಗಿದೆ. ಜನಿಸಿದ ಅರ್ಧ ಗಂಟೆಯೊಳಗೆ ಕುಡಿಸುವ ತಾಯಿಯ ಹಾಲು ಮಗುವಿಗೆ ಅಮೃತ ಸಮಾನ ಎಂದು ಹೇಳಿದರು.

ಮಕ್ಕಳಿಗೆ ಹಾಲು ಉಣಿಸುವುದರಿಂದ ತಾಯಂದಿರ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದೆ ಎನ್ನುವುದು ತಪ್ಪು ಕಲ್ಪನೆ. ಸ್ತನ್ಯಪಾನ ಮಾಡಿಸುವುದರಿಂದ ಸ್ತನ ಕಾನ್ಸರ್ ಸಾಧ್ಯತೆ ಕಡಿಮೆಯಾಗುತ್ತದೆ. ಅನೇಕ ರೋಗಗಳು ದೂರವಾಗುತ್ತವೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಲಸಿಕೆ ಪಡೆಯುವುದೇ ದೇಶವನ್ನು ಕೋವಿಡ್‍ಮುಕ್ತಗೊಳಿಸಲು ಇರುವ ಏಕೈಕ ಮಾರ್ಗವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ ಹೇಳಿದರು.

ತಿಳಿವಳಿಕೆ ಇಲ್ಲದ ಕಾರಣ ಗ್ರಾಮೀಣ ಪ್ರದೇಶದ ಅನೇಕರು ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಗಳಿಂದ ದೇಶದ ಉನ್ನತ ನಾಯಕರವರೆಗೂ ಕೋಟ್ಯಂತರ ಜನ ಲಸಿಕೆ ತೆಗೆದುಕೊಂಡಿದ್ದಾರೆ. ಲಸಿಕೆ ಸುರಕ್ಷಿತವಾಗಿದೆ. ಹೀಗಾಗಿ ಸ್ವಯಂ ಪ್ರೇರಣೆಯಿಂದ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಬ್ರಿಮ್ಸ್ ಪ್ರಯೋಗಾಲಯ ತಂತ್ರಜ್ಞ ರಾಜಕುಮಾರ ಹೆಬ್ಬಾಳೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಶಕಿಲಾ ಉಪಸ್ಥಿತರಿದ್ದರು. ತಾಯಂದಿರು, ಆರೋಗ್ಯ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.