ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ ದಾಳಿಗೂ ನನಗೂ ಸಂಬಂಧವಿಲ್ಲ: ಸಚಿವ ಭಗವಂತ ಖೂಬಾ

ಉಪ್ಪು ತಿಂದವರು ನೀರು ಕುಡಿಯಲೇಬೇಕು–ಕೇಂದ್ರ ಸಚಿವ ಭಗವಂತ ಖೂಬಾ
Published 16 ಏಪ್ರಿಲ್ 2024, 16:09 IST
Last Updated 16 ಏಪ್ರಿಲ್ 2024, 16:09 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಸ್ಪಷ್ಟಪಡಿಸಿದರು.

ನಗರದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು,‘ಇಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳಾಗಿವೆ. ಯಾರು ಉಪ್ಪು ತಿನ್ನುತ್ತಾರೆ. ಅವರು ನೀರು ಕುಡಿಯಲೇಬೇಕು. ನನ್ನ ಮನೆಗೆ ಅಥವಾ ನಿಮ್ಮ ಮನೆಗೆ ಯಾರಾದರೂ ರೇಡ್‌ ಏಕೆ ಮಾಡಿಲ್ಲ’ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಭ್ರಷ್ಟಾಚಾರಿಗಳನ್ನು ಒಳಗೆ ಹಾಕಿದರೆ ಒಳ್ಳೆಯದೋ ಅಥವಾ ಕೆಟ್ಟದೋ ನೀವೇ ಹೇಳಬೇಕು. ಏನಾದರೂ ಅನುಮಾನ ಅಥವಾ ಮಾಹಿತಿ ಆಧರಿಸಿಯೇ ಇಡಿಯವರು ಡಿಸಿಸಿ ಬ್ಯಾಂಕ್‌ ಮೇಲೆ ದಾಳಿ ನಡೆಸಿರಬಹುದು ಎಂದರು.

ಡಿಸಿಸಿ ಬ್ಯಾಂಕ್‌, ಎಂಜಿಎಸ್‌ಎಸ್‌ಕೆ ಹಾಗೂ ಸಚಿವ ಈಶ್ವರ ಬಿ.ಖಂಡ್ರೆಯವರ ಒಡೆತನದ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕಡಿವಾಣ ಹಾಕಬೇಕು. ಏಕೆಂದರೆ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದೆ. ಆದರೆ, ಇಡಿಗೆ ದೂರು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಸರ್ಕಾರದ ಐದು ಮೋಸದ ಗ್ಯಾರಂಟಿಗಳಿಗೆ ಜನ ಮೋಸ ಹೋಗಿದ್ದಾರೆ. ಅಭಿವೃದ್ಧಿ ಕುಂಠಿತಗೊಂಡಿದೆ. ರೈತರು ಕಂಗಾಲಾಗಿದ್ದಾರೆ. ಇಂತಹ ಮೋಸದ ಪಕ್ಷದ ಪ್ರಣಾಳಿಕೆ ಸಂಪೂರ್ಣ ಬೋಗಸ್‌ ಆಗಿದೆ. ಬಿಟ್ಟಿ ಉಡುಗೊರೆಗಳ ಮೂಲಕ ದೇಶವನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಆದರೆ, ಬಿಜೆಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯ ದಿನ ಸಂಕಲ್ಪ ಪತ್ರ ಬಿಡುಗಡೆ ಮಾಡಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಭರವಸೆಗಳನ್ನು ಕೊಟ್ಟಿದೆ. ಇದು ಬಿಜೆಪಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.

ಹತ್ತು ವರ್ಷಗಳ ಹಿಂದೆ ಬೀದರ್‌ ಜಿಲ್ಲೆಯ ಕುರಿತು ಮಾತಾಡಬೇಕಾದರೆ ಮೊದಲು ಹಿಂದುಳಿದ ಹಣೆಪಟ್ಟಿ ಎಂಬ ಹೆಸರು ಬಳಸಲಾಗುತ್ತಿತ್ತು. ಆದರೆ, ಮೋದಿಯವರ ಅಧಿಕಾರದ ಅವಧಿಯಲ್ಲಿ ನಾನು ಮಾಡಿದ ಕೆಲಸಗಳಿಂದ ಈಗ ಆ ಹಣೆಪಟ್ಟಿ ದೂರವಾಗಿದೆ. ಯಾರೂ ಆ ಪದ ಬಳಸುತ್ತಿಲ್ಲ. ಹೆದ್ದಾರಿಗಳು ಅಭಿವೃದ್ಧಿ ಕಂಡಿವೆ. ಕೇಂದ್ರದ ಅನೇಕ ಯೋಜನೆಗಳ ಲಾಭ ಜಿಲ್ಲೆಯ ಜನರಿಗೆ ಸಿಕ್ಕಿದೆ ಎಂದು ತಿಳಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ,‘ಏ.18ರಂದು ಬಿಜೆಪಿ ಶಕ್ತಿ ಪ್ರದರ್ಶನದ ಮೂಲಕ ಭಗವಂತ ಖೂಬಾ ಅವರು ನಾಮಪತ್ರ ಸಲ್ಲಿಸುವರು. ಅಂದು ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ ಹಲವು ಜನ ಮುಖಂಡರು ಭಾಗವಹಿಸುವರು. ಬೆಳಿಗ್ಗೆ 10ಕ್ಕೆ ನಗರದ ಗಣೇಶ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಮಧ್ಯಾಹ್ನ ರ್‍ಯಾಲಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು’ ಎಂದು ಹೇಳಿದರು.

ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮುಖಂಡರಾದ ರಾಜಶೇಖರ ನಾಗಮೂರ್ತಿ, ಬಾಬು ವಾಲಿ, ಬಸವರಾಜ ಪವಾರ, ಶ್ರೀನಿವಾಸ ಚೌಧರಿ ಹಾಜರಿದ್ದರು.

‘ಸಚಿವ ಖಂಡ್ರೆ ಉತ್ತರಿಸಲಿ’
‘ಅಧಿಕಾರಕ್ಕೆ ಬಂದು ಹತ್ತು ತಿಂಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಅನೇಕ ಸಲ ಪತ್ರ ಬರೆದು ಗಮನಕ್ಕೆ ತಂದಿದ್ದೆ. ಮಾಧ್ಯಮಗಳ ಮೂಲಕವೂ ತಿಳಿಸಿದ್ದೆ. ಆದರೆ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ರಾಜ್ಯ ಸರ್ಕಾರದ ಪಾಲು ಬಿಡುಗಡೆಗೊಳಿಸದ ಕಾರಣ ಕೇಂದ್ರದ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ. ಖಂಡ್ರೆ ಪರಿವಾರದವರು ಜಿಲ್ಲೆಯಲ್ಲಿ 65 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲೆಗೆ ಅವರ ಕೊಡುಗೆ ಏನು. ತಮ್ಮ ಮಗನ (ಸಾಗರ್‌ ಖಂಡ್ರೆ) ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಇದಕ್ಕೆ ಸಚಿವರು (ಈಶ್ವರ ಖಂಡ್ರೆ) ಉತ್ತರಿಸಬೇಕು’ ಎಂದು ಭಗವಂತ ಖೂಬಾ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT