ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಲ ಖೂಬಾ ಸೋಲು ಖಚಿತ: ಪದ್ಮಾಕರ ಪಾಟೀಲ

ಬಿಜೆಪಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪದ್ಮಾಕರ ಪಾಟೀಲ
Published 3 ಮೇ 2024, 8:46 IST
Last Updated 3 ಮೇ 2024, 8:46 IST
ಅಕ್ಷರ ಗಾತ್ರ

ಬೀದರ್‌: ‘ಕೇಂದ್ರ ಸಚಿವ ಭಗವಂತ ಖೂಬಾ ಅವರು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಏನೂ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಸಲ ಅವರ ಸೋಲು ಖಚಿತ’ ಎಂದು ಬಿಜೆಪಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪದ್ಮಾಕರ ಪಾಟೀಲ ಹೇಳಿದರು.

‘ಬಿಜೆಪಿ ಬಂಡಾಯ ಅಭ್ಯರ್ಥಿ ಡಾ. ದಿನಕರ್‌ ಮೋರೆ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆಯವರ ನಡುವೆ ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನೇರ ಸ್ಪರ್ಧೆ ಇದೆ. ಸದ್ಯ ಬಿಜೆಪಿ ಮೂರನೇ ಸ್ಥಾನದಲ್ಲಿದೆ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಸಿದರು.

‘ಖೂಬಾ ಅವರು ಹತ್ತು ವರ್ಷಗಳಲ್ಲಿ ಯುವಕರಿಗಾಗಿ ಏನೂ ಮಾಡಿಲ್ಲ. ಲಿಂಗಾಯತ ಕೋಟಾದಡಿ ಗೆದ್ದು ಮಂತ್ರಿ ಪದವಿ ಗಿಟ್ಟಿಸಿಕೊಂಡಿದ್ದಾರೆ. ಸಂಪರ್ಕಕ್ಕಾಗಿ ರಾಷ್ಟ್ರೀಯ ಹೆದ್ಧಾರಿಗಳನ್ನು ನಿರ್ಮಿಸಲಾಗಿದೆ. ಮೊದಲಿನಿಂದಲೂ ರೈಲು ಸಂಪರ್ಕ ಇದೆ. ಖೂಬಾ ಅವರೇನು ಹೊಸದಾಗಿ ಮಾಡಿಲ್ಲ. ಆರು ತಿಂಗಳು ವಿಮಾನ ಹಾರಾಡುತ್ತದೆ ಆರು ತಿಂಗಳು ನಿಲ್ಲುತ್ತದೆ’ ಎಂದು ವ್ಯಂಗ್ಯವಾಡಿದರು.

‘ಈ ಸಲ ದಿನಕರ್ ಮೋರೆಯವರಿಗೆ ಬಿಜೆಪಿಯಲ್ಲಿರುವ ಅನೇಕರು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಹೆಸರಿಗಷ್ಟೇ ಖೂಬಾ ಅವರೊಂದಿಗೆ ಓಡಾಡುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಖೂಬಾ ಅವರು ಏನೆಲ್ಲ ಮಾಡಬಹುದಿತ್ತು. ಕನಿಷ್ಠ ಒಂದು ಸಾವಿರ ಯುವಕರಿಗೆ ಕೆಲಸ ಕೊಡಿಸಲೂ ಅವರಿಗೆ ಆಗಿಲ್ಲ’ ಎಂದು ಟೀಕಿಸಿದರು.

ಡಾ.ದಿನಕರ್‌ ಮೋರೆ ಮಾತನಾಡಿ, ‘ತನ್ನ ಅವಧಿಯಲ್ಲಿ ಖೂಬಾ ಅವರು ಮಿತ್ರರಿಗಿಂತ ಶತ್ರುಗಳನ್ನೇ ಹುಟ್ಟುಹಾಕಿದ್ದಾರೆ. ಖೂಬಾ ಅಧಿಕಾರದ ಮದದಲ್ಲಿ ಮುಳುಗಿದ್ದಾರೆ’ ಎಂದು ಟೀಕಿಸಿದರು.

‘ಭಗವಂತ ಖೂಬಾ ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಒಮ್ಮೆಯೂ ಮಾತನಾಡಿರುವುದನ್ನು ನಾನು ಎಲ್ಲಿಯೂ ಕೇಳಿಲ್ಲ. ಇನ್ನು, ಖಂಡ್ರೆಯವರು ಕುಟುಂಬ ರಾಜಕಾರಣದಲ್ಲಿ ಮುಳುಗಿದ್ದಾರೆ. ನಾನು ಗೆದ್ದರೆ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವೆ. ಐ.ಟಿ. ಹಬ್‌ ಸ್ಥಾಪನೆಗೆ ಶ್ರಮಿಸುವೆ’ ಎಂದರು.

ಜನಧ್ವನಿ ಸಂಘಟನೆಯ ಅಧ್ಯಕ್ಷ ಅಂಕುಶ ಗೋಖಲೆ ಮಾತನಾಡಿ, ‘ಪ್ರಜ್ವಲ್‌ ರೇವಣ್ಣ ಜಗತ್ತಿನಲ್ಲಿ ಯಾರೂ ಮಾಡದ ಹೇಯ ಕೃತ್ಯ ಎಸಗಿದ್ದಾನೆ. ಅದನ್ನು ಬಿಜೆಪಿ, ಆರ್‌ಎಸ್‌ಎಸ್‌ನವರು ಖಂಡಿಸಿಲ್ಲ. ನೇಹಾ ಕೊಲೆಯಾದಾಗ ಹಿಂದೂಗಳ ಹತ್ಯೆ ಎಂದು ಮರುಕಪಟ್ಟಿದ್ದರು. ಆದರೆ, ಕೊಲೆಯಾದ ಸೌಜನ್ಯ, ದಾನಮ್ಮ ಹಿಂದೂಗಳಾಗಿರಲಿಲ್ಲವೇ?’ ಎಂದು ಪ್ರಶ್ನಿಸಿದರು.

ಮುಖಂಡರಾದ ಜನಾರ್ದನ ಬಿರಾದಾರ, ಬಾಲಾಜಿ ಸಾವಳೆಕರ್, ಶರಣಪ್ಪ ಕಡಗಂಚಿ, ರಾವು ಸಾಹೇಬ್‌ ಬಿರಾದಾರ, ಸೈಯದ್ ಅಶ್ಫಾಕ್‌, ಭರತ ತುಕದೆ ಹಾಜರಿದ್ದರು.

‘ನಾನೇ ಬಿಜೆಪಿ ಬಿಟ್ಟಿದ್ದೇನೆ’

‘ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಿಲ್ಲ. ನಾನೇ ಸ್ವತಃ ಬಿಜೆಪಿ ಬಿಟ್ಟಿದ್ದೇನೆ. ನಾನು ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಕೆಲಸ ಮಾಡಲ್ಲ. ನನ್ನ ಸ್ನೇಹಿತರ ಸಲಹೆ ಪಡೆದು ಈ ತೀರ್ಮಾನ ತೆಗೆದುಕೊಂಡಿದ್ದೇನೆ’ ಎಂದು ಪದ್ಮಾಕರ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT