ಶುಕ್ರವಾರ, ಅಕ್ಟೋಬರ್ 18, 2019
23 °C
ಒಂದೇ ಕಟ್ಟಡದಲ್ಲಿ ಮೂರು ಶಾಲೆಗಳು

ಇಲ್ಲಿ ಕನ್ನಡ ಶಾಲೆಯ ಸ್ಥಿತಿ ಗಂಭೀರ

Published:
Updated:
Prajavani

ಬೀದರ್‌: ಇಲ್ಲಿನ ಶಹಾಗಂಜ್‌ನ ಒಂದೇ ಕಟ್ಟಡದಲ್ಲಿ ಮೂರು ಶಾಲೆಗಳು ನಡೆಯುತ್ತಿವೆ. ಮೂರೂ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಕನ್ನಡ ಶಾಲೆಯ ಸ್ಥಿತಿಯಂತೂ ಗಂಭೀರವಾಗಿದೆ.

ಮೂರೂ ಶಾಲೆಗಳಲ್ಲಿರುವ ದಾಖಲೆಗಳ ಪ್ರಕಾರ ಒಟ್ಟು ಎಂಟು ಶಿಕ್ಷಕರು ಇದ್ದಾರೆ. ವಾಸ್ತವದಲ್ಲಿ ಅರ್ಧದಷ್ಟು ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದೇ ಇಲ್ಲ. ಇಲ್ಲಿ ಸಾಮಾನ್ಯವಾಗಿ ಕಾಣಸಿಗುವವರು ಮೂವರೇ ಶಿಕ್ಷಕರು. ಅನಿರೀಕ್ಷಿತ ಭೇಟಿ ನೀಡಿದವರಿಗೆ ಅಚ್ಚರಿ ಕಾದಿರುತ್ತದೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರ ಆರ್‌ಟಿಇ ಜಾರಿಗೆ ತಂದಿದೆ. ಆದರೆ, ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರವು ಹೊರಡಿಸಿದ ಆದೇಶ ಇಲ್ಲಿಯ ಬಡಮಕ್ಕಳಿಗೆ ಮಾರಕವಾಗಿದೆ. ಒಂದು ಕಿ.ಮೀ ಅಂತರದಲ್ಲಿ ಸರ್ಕಾರಿ ಶಾಲೆ ಇರುವ ಕಾರಣ ಬಡ ಕುಟುಂಬಗಳ ಮಕ್ಕಳಿಗೆ ಆರ್‌ಟಿಇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.

ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅಧಿಕ ಮೊತ್ತದ ಶುಲ್ಕ ಪಾವತಿಸುವುದು ಅನಿವಾರ್ಯ. ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ಓದಿಸಬೇಕೆಂದರೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಪಾಲಕರು ಆರ್ಥಿಕ ಸಮಸ್ಯೆಯಿಂದಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಿದ್ದಾರೆ. ಆದರೆ, ಜಿಲ್ಲಾ ಆಡಳಿತ ಕೇಂದ್ರದಲ್ಲೇ ಸರ್ಕಾರಿ ಶಾಲೆಯ ಸ್ಥಿತಿ ಶೋಚನೀಯವಾಗಿದೆ.

‘ಹಳ್ಳಿಗಳಲ್ಲಿ ಇರುವ ಶಾಲೆಗಳಿಗಿಂತಲೂ ಈ ಶಾಲೆಯ ಸ್ಥಿತಿ ಕೆಟ್ಟದ್ದಾಗಿದೆ. ಇಂತಹ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ಹೇಳುತ್ತಾರೆ ಶಹಾಗಂಜ್‌ ನಿವಾಸಿ ಮಹಮ್ಮದ್‌ ರುಸೂಲ್‌.

ಮರಾಠಿ ಶಿಕ್ಷಕರಿಂದ ಆಟೊ ಸೇವೆ: ಮರಾಠಿ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೊರತೆ ಇಲ್ಲ. ಆದರೆ, ಒಂದೇ ತರಗತಿಯಲ್ಲಿ ಎಲ್ಲ ವರ್ಗದ ಮಕ್ಕಳಿಗೂ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿರುವ ಇಬ್ಬರು ಶಿಕ್ಷಕರು ಎಲ್ಲ ಮಕ್ಕಳಿಗೂ ಪಾಠ ಹೇಳಬೇಕಿರುವುದರಿಂದ ಚಿಕ್ಕ ಮಕ್ಕಳಿಗೆ ಕಲಿಕೆಯಲ್ಲಿ ಗೊಂದಲ ಉಂಟಾಗುತ್ತಿದೆ.
ಮರಾಠಿ ಪ್ರಾಥಮಿಕ ಶಾಲೆಯಲ್ಲಿ ದಾಖಲೆ ಪ್ರಕಾರ 33 ಮಕ್ಕಳು ಇದ್ದಾರೆ. ಆದರೆ, ಇಲ್ಲಿ ಗೈರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿ ಒಂದನೇ ತರಗತಿಗೆ ಮಕ್ಕಳು ಪ್ರವೇಶ ಪಡೆದಿರಲಿಲ್ಲ. ಶಾಲೆಯ ಶಿಕ್ಷಕ ಈಶ್ವರ ಪತ್ತಿ ಸ್ವಯಂ ಪ್ರೇರಣೆಯಿಂದ ಮಾಂಗರವಾಡಿಯಲ್ಲಿರುವ ಅಲೆಮಾರಿಗಳ ಮನೆಗೆ ತೆರಳಿ ಪಾಲಕರಿಗೆ ತಿಳಿವಳಿಕೆ ನೀಡಿ 10 ಮಕ್ಕಳನ್ನು ಶಾಲೆಗೆ ತಂದು ದಾಖಲಿಸಿದ್ದಾರೆ. ಈ ಮಕ್ಕಳಿಗಾಗಿ ಒಂದು ಪ್ರತ್ಯೇಕ ಆಟೊ ರಿಕ್ಷಾ ವ್ಯವಸ್ಥೆ ಸಹ ಮಾಡಿದ್ದಾರೆ. ಅಡುಗೆ ಸಹಾಯಕಿ ನಿತ್ಯ ಮಕ್ಕಳನ್ನು ಕರೆ ತಂದು ಮರಳಿ ಮನೆಗೆ ತಲುಪಿಸುತ್ತಿದ್ದಾರೆ.

‘ಪಾಲಕರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಇದೆ. ಆಟೊ ವ್ಯವಸ್ಥೆಯನ್ನೂ ಮಾಡಿದ ನಂತರ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ಆಟೊ ರಿಕ್ಷಾದ ವೆಚ್ಚವನ್ನು ನಾನೇ ಭರಿಸುತ್ತಿದ್ದೇನೆ’ ಎಂದು ಶಿಕ್ಷಕ ಈಶ್ವರ ಪತ್ತಿ ಹೇಳುತ್ತಾರೆ.

ಉರ್ದು ಶಾಲೆಯಲ್ಲಿ ಮೂರೇ ಮಕ್ಕಳು!: ಶಹಾಗಂಜ್‌ನ ಉರ್ದು ಮಾಧ್ಯಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದಾಖಲೆಯಲ್ಲಿ ಒಟ್ಟು ಏಳು ಮಕ್ಕಳು ಇದ್ದಾರೆ. ಆದರೆ, ಶಾಲೆಗೆ ಭೇಟಿ ಕೊಟ್ಟರೆ ಮೂರೇ ಮಕ್ಕಳು ಕಾಣಸಿಗುತ್ತಾರೆ. ಈ ವರ್ಷ ಒಂದನೇ ತರಗತಿಗೆ ಒಬ್ಬ ವಿದ್ಯಾರ್ಥಿ ಮಾತ್ರ ಪ್ರವೇಶ ಪಡೆದುಕೊಂಡಿದ್ದಾನೆ.

ಇಲ್ಲಿ ಇಬ್ಬರು ಶಿಕ್ಷಕರಿದ್ದರೂ ಸಾಮಾನ್ಯವಾಗಿ ಒಬ್ಬರೇ ಶಿಕ್ಷಕ ಕಾಣಸಿಗುತ್ತಾರೆ. ಶಿಕ್ಷಣದ ಗುಣಮಟ್ಟ ನೆಲಕಚ್ಚಿದೆ. ಮಕ್ಕಳಿಗೆ ಓದಲು ಹೇಳಿದರೆ ಗುಣಮಟ್ಟ ಬಯಲಾಗುತ್ತದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಭೇಟಿ ಕೊಡುವುದು ಅಪರೂಪ. ಮೇಲುಸ್ತುವಾರಿ ಸರಿ ಇಲ್ಲದ ಕಾರಣ ಗುಣಮಟ್ಟ ಪಾತಾಳಕ್ಕೆ ಕುಸಿದಿದೆ.

ಇಲ್ಲಿರುವ ಶಿಕ್ಷಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಶಾಲೆಯಲ್ಲಿ ಶಿಕ್ಷಣದ ವಾತಾವರಣ ಇಲ್ಲ. ಕತ್ತಲೆ ಕೊಠಡಿಗಳಲ್ಲೇ ಪಾಠ ಬೋಧನೆ ಮಾಡಲಾಗುತ್ತಿದೆ.

Post Comments (+)