ಚುನಾವಣೆ ಪ್ರಕ್ರಿಯೆಗೆ ಅಧಿಕಾರಿಗಳನ್ನು ಅಣಿಗೊಳಿಸಿ: ಜಿಲ್ಲಾಧಿಕಾರಿ.ಮಹಾದೇವ ಸೂಚನೆ

ಬುಧವಾರ, ಏಪ್ರಿಲ್ 24, 2019
31 °C

ಚುನಾವಣೆ ಪ್ರಕ್ರಿಯೆಗೆ ಅಧಿಕಾರಿಗಳನ್ನು ಅಣಿಗೊಳಿಸಿ: ಜಿಲ್ಲಾಧಿಕಾರಿ.ಮಹಾದೇವ ಸೂಚನೆ

Published:
Updated:
Prajavani

ಬೀದರ್‌: ಲೋಕಸಭಾ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆ ಪೂರ್ವದಲ್ಲಿಯೇ ಪೂರ್ಣ ತರಬೇತಿ ನೀಡಿ ಸಕಲ ರೀತಿಯಿಂದ ಅಣಿಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಮಾಸ್ಟರ್‌ ಟ್ರೇನರ್‌ಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ಅಧಿಕಾರಿಗಳಿಗೆ ಆಯೋಜಿಸಿದ್ದ ಮೂರನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮತಗಟ್ಟೆ ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಮನವರಿಕೆ ಮಾಡಿಕೊಡಬೇಕು. ಮತದಾನ ದಿನ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಮತಗಟ್ಟೆಗಳ ತಯಾರಿ ಮಾಡಿಕೊಳ್ಳಬೇಕು. ಮತದಾರರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿವಳಿಕೆ ನೀಡಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಮಾತನಾಡಿ, ‘ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣೆಯ ದಿನ ತಮ್ಮ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಮತ್ತೊಂದು ಹಂತದಲ್ಲಿ ತರಬೇತಿ ಕಾರ್ಯಕ್ರಮ ನಡೆಸಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಮಾತನಾಡಿ, ‘ಈ ಬಾರಿಯ ಚುನಾವಣೆಯಲ್ಲಿ ಎರಡು ಬ್ಯಾಲೆಟ್‌ಗಳಿರುತ್ತವೆ. ಮತಗಟ್ಟೆ ಕೇಂದ್ರದಲ್ಲಿ ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಗೊಂದಲಗಳಿದ್ದರೆ ಮುಂಚಿತವಾಗಿಯೇ ಪರಿಹರಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

‘ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆ ವಿಧಾನ, ಅಣಕು ಮತದಾನ, ಮತಗಟ್ಟೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು, ಅರ್ಜಿ ನಮೂನೆಗಳ ಭರ್ತಿ, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಹೀಗೆ ಪ್ರತಿಯೊಂದರ ಬಗ್ಗೆಯೂ ನಿಖರವಾಗಿ ಅರಿತುಕೊಳ್ಳಬೇಕು’ ಎಂದು ಹೇಳಿದರು.

‘ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ ಸಾಧನಗಳನ್ನು ತಿರುಚಲು ಅಥವಾ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಈ ಯಂತ್ರಗಳು ಮಲ್ಟಿ ಡಿಜಿಟಲ್ ಗುರುತಿನ ಸಂಖ್ಯೆಗಳನ್ನು ಹೊಂದಿರುತ್ತವೆ. ಯಾರಾದರೂ ಅವುಗಳನ್ನು ತಿದ್ದುಪಡಿ ಮಾಡಲು ಯತ್ನಿಸಿದರೆ ಕೇಂದ್ರ ಕಚೇರಿಗೆ ತಕ್ಷಣವೇ ಸಂದೇಶ ರವಾನೆಯಾಗುತ್ತದೆ. ಎಲ್ಲ ಯಂತ್ರಗಗಳ ಮೇಲೂ ಜಿಪಿಎಸ್ ಮೂಲಕ ನಿಗಾ ವಹಿಸಲಾಗುತ್ತದೆ' ಎಂದು ತಿಳಿಸಿದರು.

‘ಚುನಾವಣೆ ದಿನಾಂಕದಂದು ಬೆಳಿಗ್ಗೆ 6 ಗಂಟೆಗೆ ಮತಗಟ್ಟೆ ಏಜೆಂಟರ ಸಮಕ್ಷಮದಲ್ಲಿ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್‌ ಪ್ರಾತ್ಯಕ್ಷಿಕೆ ನಡೆಸಬೇಕು. ಮೊದಲು ಅಣಕು ಮತದಾನ ನಡೆಸಿ ಯಂತ್ರಗಳು ಸುಸ್ಥಿತಿಯಲ್ಲಿರುವುದನ್ನು ಖಾತರಿಪಡಿಸಬೇಕು. ಯಾವುದೇ ಯಂತ್ರ ಸಮರ್ಪಕ ಕೆಲಸ ಮಾಡುತ್ತಿಲ್ಲ ಎನ್ನುವುದು ಮನವರಿಕೆಯಾದರೆ ತಕ್ಷಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !