ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ನೆರೆ ರಾಜ್ಯದ ಬಸ್‌ ವ್ಯವಸ್ಥೆ

ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಮೂರನೇ ದಿನಕ್ಕೆ: ಬಸ್‌ ನಿಲ್ದಾಣಗಳಿಗೆ ಪೊಲೀಸ್‌ ಬಂದೋಬಸ್ತ್‌
Last Updated 10 ಏಪ್ರಿಲ್ 2021, 3:12 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಗುರುವಾರ ಮೂರನೇ ದಿನಕ್ಕೆ ಪಾದಾರ್ಪಣೆ ಮಾಡಿದೆ. ಎನ್‌ಇಕೆಎಸ್‌ಆರ್‌ಟಿಸಿ ಬೀದರ್‌ ವಿಭಾಗದ ಅಧಿಕಾರಿಗಳ ಮನವಿ ಮೇರೆಗೆ ನೆರೆ ರಾಜ್ಯಗಳ ಬಸ್‌ಗಳು ಶುಕ್ರವಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿದವು.

ತೆಲಂಗಾಣ, ಮಹಾರಾಷ್ಟ್ರ ಸಾರಿಗೆ, ಖಾಸಗಿ ಬಸ್‌ಗಳು ಹಾಗೂ ಕ್ರೂಸರ್‌ಗಳು ಬಸ್‌ ನಿಲ್ದಾಣಗಳಿಂದಲೇ ಸಂಚರಿಸಿದವು.

ಸಮೀಪದ ಪಟ್ಟಣಗಳಿಗೆ ಹೊರಟಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗಲಿಲ್ಲ. ದೂರದ ನಗರಗಳಿಗೆ ಹೋಗ ಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.

ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮುಷ್ಕರದ ಕಾರಣ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಬೀದರ್‌ ವಿಭಾಗದ ಅಧಿಕಾರಿಗಳು ನೆರೆಯ ತೆಲಂಗಾಣ ಹಾಗೂ ಮಹಾರಾಷ್ಟ್ರದ ಸಾರಿಗೆ ನಿಗಮದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರಿಂದ ಶುಕ್ರವಾರ ಜಿಲ್ಲೆಯಲ್ಲಿ 235 ಮಾರ್ಗಗಳಲ್ಲಿ ನೆರೆ ರಾಜ್ಯದ ಬಸ್‌ಗಳು ಸಂಚರಿಸಿದವು.

ತೆಲಂಗಾಣದ 150 ಹಾಗೂ ಮಹಾರಾಷ್ಟ್ರದ 85 ಬಸ್‌ಗಳು ಸಂಚರಿಸಿವೆ. ರಸ್ತೆ ಸಾರಿಗೆ ಸಂಸ್ಥೆಯ 12 ಬಸ್‌ಗಳು ಹೈದರಾಬಾದ್‌, ಕಲಬುರ್ಗಿ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಬಂದಿವೆ ಎಂದು ಎನ್‌ಇಕೆಎಸ್‌ಆರ್‌ಟಿಸಿ ಬೀದರ್‌ ವಿಭಾಗೀಯ ಸಂಚಾಲಕ ಚಂದ್ರಕಾಂತ ಫುಲೇಕರ್‌ ತಿಳಿಸಿದ್ದಾರೆ.

ತೆಲಂಗಾಣ ಸಾರಿಗೆ ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದವು. ಜಿಲ್ಲಾ ಕೇಂದ್ರದಿಂದ ಹೈದರಾಬಾದ್‌ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಹೋಗಿ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿತ್ತು. ನಗರದ ಕೇಂದ್ರ ಬಸ್‌ ನಿಲ್ದಾಣ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿರುವ ಬಸ್‌ ನಿಲ್ದಾಣಗಳಲ್ಲೂ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಬಸ್‌ ನಿಲ್ದಾಣಗಳಲ್ಲಿನ ಮಾರಾಟ ಮಳಿಗೆಗಳು ತೆರೆದುಕೊಂಡಿರಲಿಲ್ಲ. ಬಸ್ ನಿಲ್ದಾಣ ಒಳಗಡೆಯೂ ಆಟೋ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT