ಸೋಮವಾರ, ಸೆಪ್ಟೆಂಬರ್ 23, 2019
22 °C
ಅಂತರ ಕಾಲೇಜು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ

ಅನಿಲಕುಮಾರ, ರೇಣುಕಾ ವೇಗದ ಓಟಗಾರರು

Published:
Updated:
Prajavani

ಬೀದರ್‌: ಗುಲಬರ್ಗಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ 10 ಕಿ.ಮೀ ಗುಡ್ಡಗಾಡು ಓಟದ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರಾಯಚೂರು ಜಿಲ್ಲೆಯ ವಿಆರ್‌ಇಟಿ ಕಾಲೇಜಿನ ಅನಿಲಕುಮಾರ ಪೂಜಾರಿ ಹಾಗೂ ಮಹಿಳೆಯರ ವಿಭಾಗದಲ್ಲಿ ಜಿಲ್ಲೆಯ ಹುಮನಾಬಾದ್‌ ಸರ್ಕಾರಿ ಕಾಲೇಜಿನ ರೇಣುಕಾ ವೇಗದ ಓಟಗಾರರಾಗಿ ಹೊರ ಹೊಮ್ಮಿದ್ದಾರೆ.

ಪುರುಷರ ವಿಭಾಗದಲ್ಲಿ ರಾಯಚೂರು ಜಿಲ್ಲೆಯ ಎಲ್‌ವಿಡಿ ಕಾಲೇಜಿನ ಸಬೇಶ್‌ ಯಂಕೋಬಾ, ವಿಆರ್‌ಇಟಿ ಕಾಲೇಜಿನ ಸಚಿನ್‌ ಪೂಜಾರಿ, ಮಹಿಳೆಯರ ವಿಭಾಗದಲ್ಲಿ ಬೀದರ್‌ನ ಕರ್ನಾಟಕ ಕಾಲೇಜಿನ ರೋಹಿಣಿ ರಮೇಶ ಹಾಗೂ ಹುಮನಾಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ರುಕ್ಸಾನಾ ಮೈನುದ್ದೀನ್‌ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ಮಹಿಳಾ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಮಲ್ಲಮ್ಮ ಚೌಬೆ ಹಾಗೂ ಗುಪ್ತಚರ ವಿಭಾಗದ ಅಧಿಕಾರಿ ಸುನೀಲ ಬಿಚಕುಂದೆ ಜಂಟಿಯಾಗಿ ನಗರದಲ್ಲಿ ಸೋಮವಾರ ಸ್ಪರ್ಧೆಗೆ ಚಾಲನೆ ನೀಡಿದರು.

ನೌಬಾದ್‌ನ ಬಸವೇಶ್ವರ ವೃತ್ತದಿಂದ ಆರಂಭವಾದ ಓಟ ಪ್ರತಾಪನಗರ, ಶಿವನಗರ, ಅಕ್ಕಮಹಾದೇವಿ ಕಾಲೇಜು, ಕೆಇಬಿ ರಸ್ತೆ, ಏರ್‌ಫೋರ್ಸ್‌ ರಸ್ತೆ, ಓಲ್ಡ್‌ ಆರ್‌ಟಿಒ ಕಚೇರಿ ಮಾರ್ಗವಾಗಿ ಪ್ರಥಮ ದರ್ಜೆ ಕಾಲೇಜಿನ ಆವರಣಕ್ಕೆ ಬಂದು ಮುಕ್ತಾಯಗೊಂಡಿತು. ಕಲಬುರ್ಗಿ, ಬೀದರ್ ಹಾಗೂ ರಾಯಚೂರು ಜಿಲ್ಲೆಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಸುನೀಲ್‌ ಆರ್., ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಪ್ರಶಾಂತಕುಮಾರ ಡಿ. ಪಾಲ್ಗೊಂಡಿದ್ದರು. ಪ್ರಾಚಾರ್ಯ ಮನೋಹರ ಭಕ್ಕಾಳೆ ಅಧ್ಯಕ್ಷತೆ ವಹಿಸಿದ್ದರು. ದೇವಿದಾಸ ತುಮಕುಂಟೆ ಸ್ವಾಗತಿಸಿದರು. ಶಿವಕುಮಾರ ಉಪ್ಪೆ ನಿರೂಪಿಸಿದರು. ಶೀಲಾ ಎನ್‌.ಎಸ್‌. ವಂದಿಸಿದರು.

Post Comments (+)