ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ | ತ್ಯಾಜ್ಯದ ಅವೈಜ್ಞಾನಿಕ ನಿರ್ವಹಣೆ: ಬೇಸರ

ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ, ಅಧಿಕಾರಿಗಳ ನಿರ್ಲಕ್ಷ್ಯ,
ಗುರುಪ್ರಸಾದ ಮೆಂಟೇ
Published 14 ಏಪ್ರಿಲ್ 2024, 5:59 IST
Last Updated 14 ಏಪ್ರಿಲ್ 2024, 5:59 IST
ಅಕ್ಷರ ಗಾತ್ರ

ಹುಲಸೂರ: ಕಸದ ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಪಟ್ಟಣ ಗಬ್ಬೆದ್ದು ನಾರುವಂತಾಗಿದ್ದು, ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ.

ಪಟ್ಟಣದಲ್ಲಿ ಒಟ್ಟು 10 ವಾರ್ಡ್‌ಗಳು ಇದ್ದು, ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಕೆಲ ಬಡಾವಣೆಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲ. ಅಧ್ಯಕ್ಷರಿಲ್ಲದೆ ಗ್ರಾಮ ಪಂಚಾಯಿತಿ ಅನಾಥವಾಗಿದೆ. ಪಂಚಾಯಿತಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ 3 ಜನ ಪೂರ್ಣಾವಧಿ ಕಾರ್ಮಿಕರಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ಸಂಬಳ ಗುತ್ತಿಗೆ ಯೋಜನೆ ಅಡಿಯಲ್ಲಿ 5 ಕಾರ್ಮಿಕರನ್ನು ನೇಮಿಸಿಕೊಳ್ಳಲು ಟೆಂಡರ್ ಪ್ರಕ್ರಿಯೆ ಮುಂದುವರಿದಿದೆ. 10 ವಾರ್ಡ್‌ಗಳಲ್ಲಿ ಕಸವನ್ನು ಸಾಗಿಸಲು ಕೇವಲ ಒಂದು ಟಂಟಂ ಹಾಗೂ ಟ್ರ್ಯಾಕ್ಟರ್ ಇವೆ.

ಗ್ರಾ.ಪಂ ಕಸದ ವಾಹನಗಳು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗಿ ತ್ಯಾಜ್ಯ ಸುರಿಯುವುದಿಲ್ಲ. ರಸ್ತೆಗಳಲ್ಲಿಯೇ ತ್ಯಾಜ್ಯ ಹಾಗೂ ಸತ್ತ ಪ್ರಾಣಿಗಳನ್ನು ಬಿಸಾಕುತ್ತಾರೆ. ದೂರದ ರಸ್ತೆಯಲ್ಲಿನ ಗ್ರಾಮ ಪಂಚಾಯಿತಿ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕಕ್ಕೆ ಹೋಗುತ್ತಿಲ್ಲ. ಪಟ್ಟಣದ ನಾಲ್ಕೂ ದಿಕ್ಕುಗಳು ಕೊಳಗೇರಿಯಾಗಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಘಟಕಕ್ಕೆ ವಿಲೇವಾರಿ ಮಾಡಬೇಕು. ಅಲ್ಲಿ ಹಸಿ ಕಸ, ಒಣ ಕಸ ಬೇರ್ಪಡಿಸುವ ಕಾರ್ಯ ಮಾಡಬೇಕು. ಜತೆಗೆ ಕಸ ಸಂಗ್ರಹಣೆ ಆರಂಭದಲ್ಲಿಯೇ ಕಸದ ವಿಂಗಡಣೆಯಾಗಬೇಕು. ಆದರೆ ವಾರ್ಡ್‌ಗಳಲ್ಲಿ ಮನೆಯ ಕಸ ಸುರಿಯಲು ಸೂಕ್ತ ವ್ಯವಸ್ಥೆಯೂ ಇಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.

ಪಟ್ಟಣದ ವಾರ್ಡ್ ಸಂಖ್ಯೆ 3ರ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಭಾರಿ ಪ್ರಮಾಣದ ತ್ಯಾಜ್ಯದ ರಾಶಿ, ಮಾಂಸದ ತುಂಡುಗಳನ್ನು ಸುರಿದಿದ್ದು ದುರ್ನಾತ ಬೀರುತ್ತಿದೆ. ಜನ ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ ಎಂದು ದೂರುಗಳು ಕೇಳಿವೆ.

ವಾರ್ಡ್ ಸಂಖ್ಯೆ 2,3,5,6,7ರ ವಾರ್ಡ್ ಕಥೆಯೂ ಭಿನ್ನವಾಗಿಲ್ಲ. ರಾಶಿ ರಾಶಿ ಕಸದಿಂದಾಗಿ ರಸ್ತೆಗಳು ಗಬ್ಬೆದ್ದು ನಾರುವ ಕಸದ ಗುಡ್ಡೆಗಳಾಗಿ ಪರಿವರ್ತನೆಯಾಗಿವೆ. ವಾರ್ಡ್‌ಗಳಲ್ಲಿ ಉತ್ತಮ ಸಿಸಿ ರಸ್ತೆ , ಚರಂಡಿ ವ್ಯವಸ್ಥೆ ಇಲ್ಲ, ಬಡಾವಣೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದರಿಂದ ಜನರು ಸಾಂಕ್ರಾಮಿಕ ರೋಗಗಳ ಆತಂಕದಲ್ಲಿ ಇದ್ದಾರೆ. ಇಲ್ಲಿಯ ಹೊಲಸು ಪರಿಸ್ಥಿತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ಬಂದರೂ ಈವರೆಗೂ ಕ್ರಮಕೈಗೊಂಡಿಲ್ಲ. ಇದು ಅಧಿಕಾರಿ ನಿರ್ಲಕ್ಷ್ಯ ಧೋರಣೆಗೆ ಹಿಡಿದ ಕನ್ನಡಿಯಾಗಿದೆ.

ಪಟ್ಟಣದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ನಡುವೆ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಯಲ್ಲಿ ಜನ ವಾಯುವಿಹಾರಕ್ಕೆ ಹೋಗುತ್ತಾರೆ. ಈ ರಸ್ತೆಯುದ್ದಕ್ಕೂ ಕಸದ ರಾಶಿಯಿಂದ ಈ ನರಕಯಾತನೆ ಅನುಭವಿಸುವಂತಾಗಿದೆ. ಗ್ರಾಮ ಪಂಚಾಯಿತಿ ಕಣ್ಣು ತೆಗೆದು ಸಾರ್ವಜನಿಕರಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಶ್ವತ ನೀರಿನ ವವಸ್ಥೆಗೆ ಶಾಸಕರಿಗೆ ಮನವಿ: ಗ್ರಾ.ಪಂ ವ್ಯಾಪ್ತಿಯ ಅಂತರಭಾರತಿ ತಾಂಡ ಹಾಗೂ ವಾರ್ಡ್ ಸಂಖ್ಯೆ 8,9, 10, 11 ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಬೇಕಾಗಿದೆ. ಈ ವಾರ್ಡಗಳಲ್ಲಿ ನೀರಿನ ಪೂರೈಕೆಗೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಪಿಡಿಒ ತಿಳಿಸಿದ್ದಾರೆ.

ಕಸದ ಸಮಸ್ಯೆ ವಿಪರೀತವಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯ ಪ್ರವೃತ್ತನಾಗಿ ಸ್ವಚ್ಛಗೊಳಿಸಲಾಗುವುದು. ಮೂಲಸೌಲಭ್ಯಗಳ ಅಭಿವೃದ್ಧಿಗೂ ಕ್ರಮಕೈಗೊಳ್ಳಲಾಗುವುದು
ರಮೇಶ ಮಿಲಿಂದಕರ, ಪಿಡಿಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT