ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಪ್ರೇರಣೆ ತುಂಬಿದ ವಸಂತ ವಿಹಾರ ಶಿಬಿರ

Last Updated 15 ಏಪ್ರಿಲ್ 2019, 15:24 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ 3 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ 10 ದಿನಗಳ ವಸತಿಸಹಿತ ವಸಂತ ವಿಹಾರ ಬೇಸಿಗೆ ಶಿಬಿರ ಅರ್ಥಪೂರ್ಣ ನಡೆಯಿತು.

85 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು, ವ್ಯಕ್ತಿತ್ವ ವಿಕಸನಕ್ಕೆ ಶಕ್ತಿಯಾಗಿರುವ ಅಧ್ಯಾತ್ಮ ಚಿಂತನೆಗಳೊಂದಿಗೆ ಉತ್ತಮ ಜೀವನದ ಪಾಠ ಕೇಳಿ ಪ್ರೇರಣೆ ಪಡೆದರು.

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ದಿನವಿಡಿ ವಿವಿಧ ಚಟುವಟಿಕೆಗಳು ನಡೆದವು. ಶಿಕ್ಷಣವೆಂದರೆ ಕೇವಲ ಪಾಠ ಹೇಳುವುದು, ಕೇಳುವುದು ಅಲ್ಲ. ಮಕ್ಕಳು ಸ್ವಚ್ಛಂದ ಪರಿಸರದಲ್ಲಿ ವಿಹರಿಸಿ ಅವರಿಗೆ ಅಧ್ಯಾತ್ಮ, ಧ್ಯಾನ, ಯೋಗ, ಮಾನವೀಯ ಮೌಲ್ಯ, ಶಿಸ್ತು, ಚಾರಿತ್ರೃ, ಸಾಮಾಜಿಕ ಜವಾಬ್ದಾರಿ, ಪರಿಸರ ಕಾಳಜಿ ಕಲಿಸುವ ನಿಟ್ಟಿನಲ್ಲಿ ದಿನಚರಿ ಹಾಕಿಕೊಳ್ಳಲಾಗಿತ್ತು.

ಪಾಪನಾಶ ಕೆರೆ ಪರಿಸರದಲ್ಲಿ ಟ್ರೆಕ್ಕಿಂಗ್ ಮಾಡಿಸಿ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿ ಧೈರ್ಯ ತುಂಬಲಾಯಿತು. ಮಡ್ ಬಾತ್ (ಮಣ್ಣಿನ ಸ್ನಾನ) ಮಾಡಿಸಿ, ಮಣ್ಣಿನ ಶ್ರೇಷ್ಠತೆ ತಿಳಿಸಿಕೊಡಲಾಯಿತು. ಶಿಬಿರಾರ್ಥಿಗಳು ಹೊಸತನ್ನು ಕಲಿತು ಖುಷಿಯಿಂದ ಮನೆಗೆ ಮರಳಿದರು.

ಬೆಂಗಳೂರಿನ ಕಾರ್ಪೋರೇಟ್‌ ಟ್ರೇನರ್ ರಮೇಶ ಉಮರಾಣಿ ಮಾತನಾಡಿ, ‘ಶಾಲೆಯಲ್ಲಿನ ಪಠ್ಯ ಶಿಕ್ಷಣಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಮನೆಯಲ್ಲಿನ ಚಟುವಟಿಕೆಗಳು ದೊಡ್ಡ ಪಾಠ ನೀಡುತ್ತವೆ. ಹೀಗಾಗಿ ಪಾಲಕರು ಮಕ್ಕಳೊಂದಿಗೆ ಹೇಗಿರಬೇಕು? ಅವರೆದುರು ವರ್ತನೆ ಯಾವ ರೀತಿ ಇರಬೇಕೆಂಬುದು ತಿಳಿದಿರಬೇಕು. ನಾವು ಮಾಡುವುದನ್ನೇ ಮಕ್ಕಳು ಅನುಸರಿಸುವ ಕಾರಣ, ನಾವು ಒಳ್ಳೆಯದನ್ನೇ ಮಾಡಬೇಕು. ಇಲ್ಲದಿದ್ದರೆ ಮಕ್ಕಳ ಭವಿಷ್ಯ ನಾವೇ ಹಾಳು ಮಾಡಿದಂತಾಗುತ್ತದೆ’ ಎಂದರು.

‘ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು. ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ನಿರೀಕ್ಷೆ ಹೆಚ್ಚಿನ ಪಾಲಕರದ್ದು. ಈ ಭರಾಟೆಯಲ್ಲಿ ಮಕ್ಕಳಿಗೆ ಸಂಸ್ಕಾರ, ಪ್ರೀತಿ, ಮಮತೆ, ಮಾನವೀಯ ಗುಣ ಕಲಿಸುವುದೇ ಮರೆತಿದ್ದಾರೆ. ಹೀಗಾಗಿ ಮಕ್ಕಳು ಮುಂದೆ ದೊಡ್ಡವರಾದ ಮೇಲೆ ಪಾಲಕರಿಗೆ ಪ್ರೀತಿ ಮಾಡುವುದನ್ನೇ ಮರೆಯುತ್ತಿದ್ದಾರೆ. ಬಾಲ್ಯದಿಂದಲೇ ಅವರಿಗೆ ಮಾನವೀಯ ಗುಣ, ಪ್ರೀತಿ, ಉತ್ತಮ ಸಂಸ್ಕಾರ ಕಲಿಸಿದ್ದಲ್ಲಿ ಮುಂದೆ ಅವರಿಂದ ನಮಗೂ ಇದೆಲ್ಲ ಸಿಗುತ್ತದೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಾತನಾಡಿ, ‘ಇಂದಿನ ಅಂಕದ ಶಿಕ್ಷಣ ಪದ್ಧತಿಯು ಮಕ್ಕಳಲ್ಲಿ ನೈತಿಕತೆ, ಚಾರಿತ್ರೃ ಬೆಳೆಸುವಲ್ಲಿ ವಿಫಲವಾಗಿದೆ. ಉತ್ತಮ ಅಂಕಕ್ಕಿಂತ ಉತ್ತಮ ಬದುಕು ಸಾಗಿಸುವ ಶಿಕ್ಷಣ ಅಗತ್ಯವಿದೆ’ ಎಂದರು.

‘ಮೌಲ್ಯಯುತ ಶಿಕ್ಷಣ ಅಧ್ಯಾತ್ಮ ಚಿಂತನೆಯಿಂದಲೇ ಸಾಧ್ಯ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಆಶ್ರಮ ಕಳೆದ 15 ವರ್ಷಗಳಿಂದ ಶಿಬಿರ ನಡೆಸುತ್ತಿದೆ. ಅನೇಕ ಶಿಬಿರಾರ್ಥಿಗಳು ಇಂದು ಸಮಾಜದ ಆಸ್ತಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT