ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ದಿಢೀರ್‌ ಏರಿಕೆ: ಹಿರಿತನ ಉಳಿಸಿಕೊಂಡ ಹಿರೇಕಾಯಿ!

ಬದನೆಕಾಯಿಗೆ ಬಂತು ಬೆಲೆಯ ಕೊಂಬು
Last Updated 3 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಮಾರುಕಟ್ಟೆಯಲ್ಲಿ ಈ ವಾರ ಮತ್ತೆ ಬಹುತೇಕ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ವಿವಿಧೆಡೆ ಸುರಿದ ಭಾರಿ ಮಳೆಗೆ ತರಕಾರಿ ಬೆಳೆ ನೆಲಕಚ್ಚಿದೆ. ಹೀಗಾಗಿ ಈರುಳ್ಳಿ ಹಾಗೂ ಮೆಣಸಿನಕಾಯಿ ಖಾರ ಇನ್ನಷ್ಟು ಜಾಸ್ತಿಯಾಗಿದೆ. ಬದನೆಕಾಯಿ ಕೊಂಬು ಬೆಳೆಸಿಕೊಂಡರೆ, ಹಿರೇಕಾಯಿ ಮಾರುಕಟ್ಟೆಯಲ್ಲಿ ಹಿರೇತನ ಉಳಿಸಿಕೊಂಡಿದೆ.

ಟೊಮೊಟೊ ಬೆಲೆ ಪ್ರತಿ ಕ್ವಿಂಟಲ್‌ಗೆ ₹2,500 ಹೆಚ್ಚಳವಾದರೆ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಬೀನ್ಸ್‌, ಬೆಂಡೆಕಾಯಿ ಹಾಗೂ ಪಾಲಕ್‌ ಬೆಲೆ ₹2 ಸಾವಿರ ಏರಿಕೆಯಾಗಿದೆ. ಬದನೆಕಾಯಿ, ಬೀಟ್‌ರೂಟ್‌ ಹಾಗೂ ಗಜ್ಜರಿ ಮಾರುಕಟ್ಟೆಯಲ್ಲಿ ಇನ್ನಷ್ಟು ಬೇರು ಗಟ್ಟಿಗೊಳಿಸಿ ₹1,500 ಬೆಲೆ ಏರಿಕೆ ಕಂಡಿವೆ. ಆಲೂಗಡ್ಡೆ ಹಾಗೂ ಹೂಕೋಸು ಬೆಲೆ ₹1 ಸಾವಿರ ಹೆಚ್ಚಳವಾಗಿದೆ.

ಹಿರೇಕಾಯಿ, ನುಗ್ಗೆಕಾಯಿ ಹಾಗೂ ಕರಿಬೇವು ಬೆಲೆ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ. ಮೆಂತೆ ಸೊಪ್ಪು ₹ 2 ಸಾವಿರ, ಎಲೆಕೋಸು, ಸಬ್ಬಸಗಿ ಹಾಗೂ ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹1 ಸಾವಿರ ಕುಸಿದಿದೆ. ಆದರೆ, ಕೊತಂಬರಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯ ಇಲ್ಲ.

ನೆರೆಯ ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೊಲ್ಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಅಲೂಗಡ್ಡೆ, ಬೀಟ್‌ರೂಟ್‌, ಬೆಂಡೆಕಾಯಿ, ತೊಂಡೆಕಾಯಿ, ಬೀನ್ಸ್‌ ಹಾಗೂ ಹಸಿ ಮೆಣಸಿನಕಾಯಿ ಆವಕವಾಗಿದೆ.

ಬೆಳಗಾವಿಯಿಂದ ನುಗ್ಗೆಕಾಯಿ, ಗಜ್ಜರಿ, ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಟೊಮೆಟೊ, ಬೀದರ್‌, ಭಾಲ್ಕಿ ಹಾಗೂ ಚಿಟಗುಪ್ಪ ತಾಲ್ಲೂಕಿನಿಂದ ಹಿರೇಕಾಯಿ, ಬದನೆಕಾಯಿ, ಎಲೆಕೋಸು, ಹೂಕೋಸು, ಮೆಂತೆ, ಸಬ್ಬಸಗಿ, ಕೊತಂಬರಿ, ಕರಿಬೇವು ಹಾಗೂ ಪಾಲಕ್ ಬಂದಿದೆ.

‘ನೆರೆಯ ರಾಜ್ಯಗಳ ಮಾರುಕಟ್ಟೆಯಲ್ಲಿ ಹಿರೇಕಾಯಿ ಸುಲಭ ಬೆಲೆಯಲ್ಲಿ ದೊರಕುತ್ತಿಲ್ಲ. ಹೀಗಾಗಿ ಜಿಲ್ಲೆಯ ಹಿರೇಕಾಯಿ ಬೆಳೆಗಾರರಿಗೆ ಉತ್ತಮ ಆದಾಯ ಬರುತ್ತಿದೆ. ಮಾರುಕಟ್ಟೆಯಲ್ಲಿ ಹಿರೇತನ ಉಳಿಸಿಕೊಂಡು ರೈತರೂ ಹಿರಿ ಹಿರಿ ಹಿಗ್ಗುವಂತೆ ಮಾಡಿದೆ. ಬದನೆಕಾಯಿಗೂ ಉತ್ತಮ ಬೆಲೆ ದೊರಕಿದೆ’ ಎಂದು ದುರ್ಗಾ ತರಕಾರಿ ಅಂಗಡಿ ಮಾಲೀಕ ಚಂದ್ರಕಾಂತ ಹೊಕ್ರಾಣೆ ಹೇಳುತ್ತಾರೆ.

‘ನೆರೆ ರಾಜ್ಯಗಳ ಸಂಚಾರ ನಿರ್ಬಂಧ ತೆರವುಗೊಳಿಸಿದರೂ ತರಕಾರಿ ಮಾರುಕಟ್ಟೆ ಚೇತರಿಸಿಕೊಂಡಿಲ್ಲ. ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ತರಕಾರಿ ಬರುತ್ತಿಲ್ಲ. ಬರುವ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT