ಬುಧವಾರ, ಜುಲೈ 28, 2021
20 °C

ಬೀದರ್‌: ಸೆಟೆದ ನುಗ್ಗೆಕಾಯಿ, ಹಿಗ್ಗಿದ ಹಿರೇಕಾಯಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಲಾಕ್‌ಡೌನ್‌ ನಿಯಮ ಸಡಿಲಗೊಂಡ ನಂತರ ತರಕಾರಿ ಬೇಡಿಕೆ ಹೆಚ್ಚಿದ್ದು, ಬಹುತೇಕ ತರಕಾರಿ ಬೆಲೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಹಿರೇಕಾಯಿ ಎರಡು ವಾರಗಳಿಂದ ಹಿಗ್ಗಿ ನಿಂತಿದೆ. ಈ ವಾರ ನುಗ್ಗೆಕಾಯಿ ಸೆಟೆದು ನಿಂತರೆ, ಹೂಕೋಸು ಅರಳಿದೆ. ಟೊಮೆಟೊ ಕೆಂಪಾಗಿದೆ.

ಪಾಲಕ್ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 4 ಸಾವಿರ ಇದೆ. ಕಳೆದ ವಾರಕ್ಕಿಂತ ಒಂದೂವರೆ ಸಾವಿರ ರೂಪಾಯಿ ಹೆಚ್ಚಳವಾಗಿದೆ. ಎಲೆಕೋಸು, ತೊಂಡೆಕಾಯಿ, ಬೀನ್ಸ್, ಸಬ್ಬಸಗಿ, ಕರಿಬೇವು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಏರಿದೆ. ಆಲೂಗಡ್ಡೆ ಹಾಗೂ ಟೊಮೆಟೊ ಬೆಲೆಯಲ್ಲಿ ₹ 500 ಏರಿಕೆಯಾಗಿದೆ.

ತರಕಾರಿ ರಾಜ ಬದನೆಕಾಯಿ ಬೆಲೆ ಸ್ಥಿರವಾಗಿದ್ದು, ಮಾರುಕಟ್ಟೆಯಲ್ಲಿ ಗತ್ತು ಕಾಯ್ದುಕೊಂಡಿದೆ. ಹಸಿ ಮೆಣಸಿನಕಾಯಿ, ಗಜ್ಜರಿ, ಹಿರೇಕಾಯಿ ಬೆಂಡೆಕಾಯಿ ಹಾಗೂ ಬೀಟ್‌ರೂಟ್ ಬೆಲೆ ಸ್ಥಿರವಾಗಿದೆ. ಈ ವಾರ ಯಾವುದೇ ತರಕಾರಿ ಬೆಲೆ ಕಡಿಮೆಯಾಗಿಲ್ಲ. ರೈತರು ನೇರವಾಗಿ ತರಕಾರಿ ಸಗಟು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿರುವ ಕಾರಣ ಅವರಿಗೆ ಉತ್ತಮ ಬೆಲೆ ದೊರೆಯುತ್ತಿದೆ.

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು ತರಕಾರಿ ಬೆಲೆ ಹೆಚ್ಚಳದಿಂದ ಸ್ವಲ್ಪ ತೊಂದರೆ ಅನುಭವಿಸಬೇಕಾಯಿತು. ಮಧ್ಯಮ ವರ್ಗದ ಜನರು ಸಹ ಅಗತ್ಯವಿರುವಷ್ಟು ತರಕಾರಿಯನ್ನು ಮಾತ್ರ ಖರೀದಿಸಿದರು. ಈರುಳ್ಳಿ, ಬೆಳ್ಳುಳ್ಳಿ ಹಾಗೂ ಆಲೂಗಡ್ಡೆ ಖರೀದಿಸಿ ಇಟ್ಟುಕೊಳ್ಳಲು ಹಿಂದೇಟು ಹಾಕಿದರು.

‘ಲಾಕ್‌ಡೌನ್‌ ಸಡಿಲಗೊಂಡ ನಂತರ ಮಾರುಕಟ್ಟೆಗೆ ಬಂದಿದ್ದೇನೆ. ಪ್ರತಿಯೊಂದು ತರಕಾರಿ ಬೆಲೆಯಲ್ಲಿ ಕೆ.ಜಿಗೆ ಕನಿಷ್ಠ ₹ 10 ಹೆಚ್ಚಳವಾಗಿದೆ. ನೌಕರರ ವೇತನ ಹೆಚ್ಚಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಸಹ ಹೆಚ್ಚಾಗಿರುವ ಕಾರಣ ಕಡಿಮೆ ಪ್ರಮಾಣದಲ್ಲಿ ತರಕಾರಿ ಖರೀದಿಸಬೇಕಾಗಿದೆ’ ಎಂದು ಗೃಹಿಣಿ ಸುಜಾತಾ ಹೇಳಿದರು.

ಭಾಲ್ಕಿ ತಾಲ್ಲೂಕಿನಲ್ಲಿ ಬೆಳೆದ ಬದನೆಕಾಯಿ, ಟೊಮೆಟೊಗೆ ಉತ್ತಮ ಬೆಲೆ ದೊರೆತಿದೆ. ಚಿಟಗುಪ್ಪ ತಾಲ್ಲೂಕಿನ ಹೂಕೋಸು ಹಾಗೂ ಎಲೆಕೋಸು ಬೀದರ್‌ ಮಾರುಕಟ್ಟೆಗೆ ಬಂದಿದೆ. ಜಿಲ್ಲೆಯಿಂದ ಹೆಚ್ಚು ತರಕಾರಿ ನೆರೆಯ ಜಿಲ್ಲೆಗಳಿಗೆ ಹೋಗಿಲ್ಲ. ‘ಬೀದರ್‌ ಮಾರುಕಟ್ಟೆಗೆ ಹೈದರಾಬಾದ್‌ನಿಂದ ಆಲೂಗಡ್ಡೆ, ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ’ ಎಂದು ವ್ಯಾಪಾರಿ ವಿಜಯಕುಮಾರ ತಿಳಿಸಿದರು.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
..............................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ; ಈ ವಾರ
.............................................

ಈರುಳ್ಳಿ 25-30, 30-40
ಮೆಣಸಿನಕಾಯಿ 55-60, 50-60
ಆಲೂಗಡ್ಡೆ 30-35,30-40
ಎಲೆಕೋಸು 15-20,20-30
ಬೆಳ್ಳುಳ್ಳಿ 160-165,150-160
ಗಜ್ಜರಿ 35-40,30-40
ಬೀನ್ಸ್‌ 130-135,130-140
ಬದನೆಕಾಯಿ 35-40,30-40
ಮೆಂತೆ ಸೊಪ್ಪು 50-60,60-70
ಹೂಕೋಸು 20-25,20-25
ಸಬ್ಬಸಗಿ 70-80,50-60
ಬೀಟ್‌ರೂಟ್‌ 45-50,40-50
ತೊಂಡೆಕಾಯಿ 30-35,30-40
ಕರಿಬೇವು 40-50,55-60
ಕೊತಂಬರಿ 20-25,20-25
ಟೊಮೆಟೊ 20-25,35-40
ಪಾಲಕ್‌ 20-25, 30-40
ಬೆಂಡೆಕಾಯಿ 55-60,50-60
ಹಿರೇಕಾಯಿ 55-60,50-60
ನುಗ್ಗೆಕಾಯಿ 60-65,60-70

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು