ಸೋಮವಾರ, ಸೆಪ್ಟೆಂಬರ್ 20, 2021
22 °C

ಬೀದರ್‌: ಬೆಂಡಾದ ಬೆಂಡೆಕಾಯಿ, ಹಿಗ್ಗಿದ ಹಿರೇಕಾಯಿ- ಹೆಚ್ಚಿದ ಸೊಪ್ಪಿನ ಬೆಲೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಎಲ್ಲೆಡೆ ಧಾರಾಕಾರ ಮಳೆ ಸುರಿದಿದೆ. ಮಳೆಗೆ ಸೊಪ್ಪು ನೀರಿನಲ್ಲಿ ಮುಳುಗಿ ಹಾಳಾಗಿದೆ. ಕೆಲ ಪ್ರದೇಶಗಳಿಂದ ಸೊಪ್ಪು ಬೀದರ್ ಮಾರುಕಟ್ಟೆಗೆ ಬಂದರೂ ಬೆಲೆ ಏರಿದೆ. ಮೆಣಸಿನಕಾಯಿಗೆ ಕೊಳೆ ರೋಗ ಕಾಣಿಸಿಕೊಂಡಿದ್ದು, ಬೆಲೆ ದಿಢೀರ್‌ ಕುಸಿದಿದೆ.

ನುಗ್ಗೆಕಾಯಿ ಮಾರುಕಟ್ಟೆಯಲ್ಲಿ ಸೆಟೆದು ನಿಂತಿದ್ದು, ಪ್ರತಿ ಕ್ವಿಂಟಲ್‌ಗೆ ₹ 10 ಸಾವಿರಕ್ಕೆ ಮಾರಾಟವಾಗಿದೆ. ಮಳೆಗಾಲದ ಚಳಿಯಲ್ಲಿ ಬಿಸಿ ಬೇಳೆ ಸಾರಿನಲ್ಲಿ ನುಗ್ಗೆ ಸವಿ ಬಯಸುವ ಗ್ರಾಹಕರು ಬೆಲೆ ಹೆಚ್ಚಳವಾದರೂ ಆಸಕ್ತಿಯಿಂದ ಖರೀದಿಸುತ್ತಿದ್ದಾರೆ. ಬಕ್ರೀದ್‌ ಸಂದರ್ಭದಲ್ಲಿ ಬೆಲೆಯ ಅಟ್ಟ ಏರಿ ಕುಳಿತಿರುವ ಮೆಂತೆ ಇನ್ನೂ ಕೆಳಗೆ ಇಳಿದಿಲ್ಲ.

ಟೊಮೆಟೊ ಇನ್ನಷ್ಟು ಕೆಂಪಾದರೆ, ಬೆಲೆ ಹೆಚ್ಚಿಸಿಕೊಂಡ ಹಿರೇಕಾಯಿ ಹಿರಿಹಿರಿ ಹಿಗ್ಗಿದೆ. ಕೊತಂಬರಿ ಹಾಗೂ ಕರಿಬೇವು ಸುಗಂಧ ಬೀರಿವೆ. ಅಡುಗೆ ಭಟ್ಟರು ನನ್ನನ್ನು ಬಿಟ್ಟು ಏನೂ ಮಾಡುವ ಹಾಗಿಲ್ಲ ಎನ್ನುವಂತೆ ಬೀಗುತ್ತಿವೆ. ತೊಂಡೆಕಾಯಿ, ಬೆಂಡೆಕಾಯಿ ಬಳಲಿ ಬೆಂಡಾಗಿವೆ.

ಬೀನ್ಸ್‌ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ, ಮೆಂತೆ ಸೊಪ್ಪು ₹ 3,500, ನುಗ್ಗೆಕಾಯಿ ₹ 2 ಸಾವಿರ, ಟೊಮೆಟೊ, ಹಿರೇಕಾಯಿ ತಲಾ ₹ 1 ಸಾವಿರ, ಸಬ್ಬಸಗಿ, ಬೀಟ್‌ರೂಟ್‌, ಕೊತಂಬರಿ ಹಾಗೂ ಕರಿಬೇವು ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಾಗಿದೆ.

ಈರುಳ್ಳಿ, ಬೆಂಡೆಕಾಯಿ ಹಾಗೂ ಹೂಕೋಸು ಬೆಲೆ ಸ್ಥಿರವಾಗಿದೆ. ಮೆಣಸಿನಕಾಯಿ ಕ್ವಿಂಟಲ್‌ಗೆ ₹ 2 ಸಾವಿರ, ತೊಂಡೆಕಾಯಿ ₹ 1,500, ಬೆಳ್ಳುಳ್ಳಿ ಬೆಲೆ ₹ 1 ಸಾವಿರ ಕಡಿಮೆಯಾಗಿದೆ. ಆಲೂಗಡ್ಡೆ, ಗಜ್ಜರಿ, ಬದನೆಕಾಯಿ, ಎಲೆಕೋಸು, ಪಾಲಕ್‌ ಬೆಲೆ ₹ 500 ಕುಸಿದಿದೆ.

ಹೈದರಾಬಾದ್‌ನಿಂದ ಬೀನ್ಸ್, ಆಲೂಗಡ್ಡೆ, ತೊಂಡೆಕಾಯಿ, ಬೆಂಡೆಕಾಯಿ ಆವಕವಾಗಿದೆ. ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಹಾರಾಷ್ಟ್ರದ ನಾಸಿಕ್‌ನಿಂದ ಬಂದಿದೆ. ಮಳೆಯ ಕಾರಣ ಮಾರುಕಟ್ಟೆಗೆ ಹೆಚ್ಚು ತರಕಾರಿ ಬಂದಿಲ್ಲ. ಬೀದರ್, ಭಾಲ್ಕಿ, ಹುಮನಾಬಾದ್ ಹಾಗೂ ಚಿಟಗುಪ್ಪದಲ್ಲಿ ನಿರಂತರ ಮಳೆ ಸುರಿದ ಕಾರಣ ತರಕಾರಿ ಬೆಲೆ ಕುಸಿದಿದೆ.

ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲೂ ಮಳೆ ಸುರಿದಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ಏರುಪೇರು ಆಗಿದೆ. ಹೆಚ್ಚು ಮಳೆ ಸುರಿದ ಕಾರಣ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಹೆಚ್ಚು ತರಕಾರಿ ಬಂದಿದ್ದರಿಂದ ಕೆಲ ತರಕಾರಿ ಬೆಲೆ ಕಡಿಮೆಯಾಗಿದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.

......................................................................
ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
........................................................................
ಈರುಳ್ಳಿ 20-25,20-25
ಮೆಣಸಿನಕಾಯಿ 80-85,60-65
ಆಲೂಗಡ್ಡೆ 40-50,40-45
ಎಲೆಕೋಸು 20-25,15-20
ಬೆಳ್ಳುಳ್ಳಿ 100-120,100-110
ಗಜ್ಜರಿ 40-50, 40-45
ಬೀನ್ಸ್‌ 160-170, 180-200
ಬದನೆಕಾಯಿ 40-50,40-45
ಮೆಂತೆ ಸೊಪ್ಪು 40-50, 80-85
ಹೂಕೋಸು 30-40, 30-40
ಸಬ್ಬಸಗಿ 40-45, 40-50
ಬೀಟ್‌ರೂಟ್‌ 40-45, 40-50
ತೊಂಡೆಕಾಯಿ 40-50, 30-35
ಕರಿಬೇವು 20-25, 20-30
ಕೊತಂಬರಿ 20-25, 20-30
ಟೊಮೆಟೊ 15-20,25-30
ಪಾಲಕ್‌ 45-50,40-45
ಬೆಂಡೆಕಾಯಿ 40-45,40-45
ಹಿರೇಕಾಯಿ 30-40,45-50
ನುಗ್ಗೆಕಾಯಿ 70-80,80-100

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು