25ಕ್ಕೆ ಪಶು ವಿ.ವಿ. ಘಟಿಕೋತ್ಸವ
ಬೀದರ್‌ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಮಾ. 25ರಂದು ಬೆಳಿಗ್ಗೆ 11ಕ್ಕೆ ಜರುಗಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು 2022–23ನೇ ಸಾಲಿನ 16 ಸ್ನಾತಕ ಪದವೀಧರರಿಗೆ 53 ಚಿನ್ನದ ಪದಕ, ಸ್ನಾತಕೋತ್ತರ ಪದವಿ ಪೂರೈಸಿದ 21 ವಿದ್ಯಾರ್ಥಿಗಳಿಗೆ 34 ಚಿನ್ನದ ಪದಕ, ಡಾಕ್ಟರೇಟ್ ಪದವಿ ಮುಗಿಸಿರುವ 7 ವಿದ್ಯಾರ್ಥಿಗಳಿಗೆ ತಲಾ ಒಂದು ಚಿನ್ನದ ಪದಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ ಇಬ್ಬರಿಗೆ ತಲಾ ಒಂದು ಚಿನ್ನದ ಪದಕ, ಪದವಿ ಪ್ರದಾನ ಮಾಡಲಿದ್ದಾರೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ನಿರ್ದೇಶಕ ಡಾ. ನವೀನಕುಮಾರ ಘಟಿಕೋತ್ಸವ ಭಾಷಣ ಮಾಡುವರು. ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಆಗಮಿಸುವರು ಎಂದು ವಿ.ವಿ. ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಶುಕ್ರವಾರ ತಿಳಿಸಿದರು.