ಭಾನುವಾರ, ಡಿಸೆಂಬರ್ 4, 2022
19 °C
ವಿಶೇಷ ಪೊಲೀಸ್ ಘಟಕಗಳ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಸತೀಶ ಸಲಹೆ

ಮಾತೃ ಹೃದಯದಿಂದ ನಡೆದುಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಮಕ್ಕಳ ಪ್ರಕರಣಗಳು ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಅವರೊಂದಿಗೆ ಮಾತೃ ಹೃದಯದಿಂದ ನಡೆದುಕೊಳ್ಳಬೇಕು’ ಎಂದು ಡಿವೈಎಸ್‌ಪಿ ಸತೀಶ ಕೆ.ಎಂ.ಸಲಹೆ ನೀಡಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ನಡೆದ ಮಕ್ಕಳ ಪೋಷಣೆ ಮತ್ತು ರಕ್ಷಣೆಯ ವಿವಿಧ ಆಯಾಮಗಳ ಅನುಷ್ಠಾನದ ಪ್ರಕ್ರಿಯೆ ಕುರಿತ ಮಕ್ಕಳ ವಿಶೇಷ ಪೊಲೀಸ್ ಘಟಕಗಳ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು ಎಂದರೆ ಮೊದಲೇ ಮಕ್ಕಳಿಗೆ ಭಯ ಇರುತ್ತದೆ. ಆತ್ಮೀಯವಾಗಿ ಅವರೊಂದಿಗೆ ಸಮಾಲೋಚನೆ ನಡೆಸಿದರೆ ಭಯಮುಕ್ತರಾಗಿ ನಡೆದ ಘಟನೆಯನ್ನು ವಿವರಿಸಿ ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಿತ್ಯ ಹಲವಾರು ಪ್ರಕರಣಗಳು ಪೊಲೀಸ್ ಠಾಣೆಗೆ ಬರುತ್ತವೆ. ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳು ಬಂದಾಗ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಮಿಕ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಗಮನಕ್ಕೆ ತಕ್ಷಣ ತರಬೇಕು ಎಂದು ತಿಳಿಸಿದರು.

ಮಕ್ಕಳು ನೊಂದು ಬಂದಾಗ ಅವರಿಗೆ ಹೆದರಿಸದೇ ಪ್ರೀತಿಯಿಂದ ಅವರನ್ನು ನೋಡಿಕೊಳ್ಳಬೇಕು. ಪ್ರತಿಯೊಂದು ಪ್ರಕರಣವನ್ನು ಪೊಲೀಸ್ ಠಾಣೆಯ ನೋಂದಣಿ ಪುಸ್ತಕದಲ್ಲಿ ದಾಖಲಿಸಬೇಕು. ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಕಾಣುವ ಹಾಗೆ ಮಕ್ಕಳ ಸಹಾಯವಾಣಿ ಸಂಖ್ಯೆ ಹಾಕಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಬೀದರ್ ಲೋಕಾಯುಕ್ತ ವಿಶೇಷ ಅಭಿಯೋಜಕ ಕೇಶವರಾವ್ ಶ್ರೀಮಾಳೆ, ಕಲಬುರಗಿಯ ಪ್ರೊಬೇಷನರಿ ಅಧಿಕಾರಿ ಭರತೇಶ, ಬೀದರ್ ನಗರ ವೃತ್ತ ಪೊಲೀಸ್ ನಿರೀಕ್ಷಕ ಫಾಲಾಕ್ಷಯ್ಯ ಹಿರೇಮಠ ಉಪನ್ಯಾಸ ನೀಡಿದರು.

ಬೀದರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀನಿವಾಸ ಬಾಳುವಾಳೆ, ಜಿಲ್ಲಾ ಮಕ್ಕಳ ರಕ್ಷಣ ಘಟಕದ ಗೌರಿಶಂಕರ ಫರತಾಪೂರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮಂಜುಳಾ, ಧನಲಕ್ಷ್ಮಿ ಪಾಟೀಲ, ಬಾಲನ್ಯಾಯ ಮಂಡಳಿ ಸದಸ್ಯೆ ಧನವಂತಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.