ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್: ರಣ ಬಿಸಿಲಿನಲ್ಲಿ ನೀರಿಗಾಗಿ ಅಲೆದಾಟ

Published 5 ಏಪ್ರಿಲ್ 2024, 6:09 IST
Last Updated 5 ಏಪ್ರಿಲ್ 2024, 6:09 IST
ಅಕ್ಷರ ಗಾತ್ರ

ಔರಾದ್: ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ಬಸವಳಿದ ತಾಲ್ಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಗಡಿ ಭಾಗದಲ್ಲಿ ಕಳೆದ ಒಂದು ವಾರದಿಂದ ಬಿಸಿಗಾಳಿ ಬೀಸುತ್ತಿದೆ. ಸುಮಾರು 40 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ಇದ್ದು, ಜನ ಹೊರಗೆ ಬಂದರೆ ಅಪಾಯದ ಸಾಧ್ಯತೆ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನ ಕುಡಿಯುವ ನೀರಿಗಾಗಿ ಅಲೆದಾಡಬೇಕಿದೆ.

ತಾಲ್ಲೂಕಿನ ಮಸ್ಕಲ್ ಹಾಗೂ ಚಟ್ನಾಳ ತಾಂಡಾ ಜನ ನೀರಿಗಾಗಿ ರಣ ಬಿಸಿಲಿನಲ್ಲಿ ಅಹೋರಾತ್ರಿ ಪರದಾಡುತ್ತಿದ್ದಾರೆ. ಈ ಎರಡು ತಾಂಡಾ ಸೇರಿ 200ಕ್ಕೂ ಹೆಚ್ಚು ಜನ ಇದ್ದಾರೆ. ಇರುವ ಒಂದು ಕೊಳವೆಬಾವಿ ಬತ್ತಿ ಹೋಗಿದೆ. ರೀಬೋರ್ ಮಾಡಿದರೂ ನೀರು ಬಂದಿಲ್ಲ. ಹೀಗಾಗಿ ಇವರು 4 ಕಿ.ಮೀ. ದೂರದ ನಾಗೂರ್‌ ಗ್ರಾಮದಿಂದ ನೀರು ಹೊತ್ತು ತರಬೇಕಾಗಿದೆ. ‘ನಾವು ಕಳೆದ ಎರಡು ತಿಂಗಳಿನಿಂದ ಇದೇ ರೀತಿ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ’ ಎನ್ನುತ್ತಾರೆ ಮಸ್ಕಲ್ ತಾಂಡಾ ನಿವಾಸಿಗಳು.

ತಾಲ್ಲೂಕಿನ ಲಾಧಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮುಸ್ತಾಪುರ ಗ್ರಾಮಸ್ಥರು ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ಎದುರಿಸುತ್ತಿದಾರೆ. ‘ನಮ್ಮ ಊರಲ್ಲಿ ಕಳೆದ ಮೂರು ತಿಂಗಳಿನಿಂದ ವಾಟರ್ ಮ್ಯಾನ್ ಇಲ್ಲ. ಹೀಗಾಗಿ ನಮಗೆ ನೀರು ಸಿಗುತ್ತಿಲ್ಲ. ದೂರದಿಂದ ಸೈಕಲ್, ಬೈಕ್ ಮೇಲೆ ನೀರು ತರುತ್ತಿದ್ದೇವೆ. ಪಿಡಿಒ ಬಳಿ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಮಲ್ಹಾರಾವ ಗೋಳು ತೋಡಿಕೊಂಡಿದ್ದಾರೆ.

‘ಮಸ್ಕಲ್ ತಾಂಡಾದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಲು ಹೋಗಿದ್ದಾರೆ. ಮುಸ್ತಾಪುರನಲ್ಲಿ ನಿರ್ವಹಣೆ ಸಮಸ್ಯೆ ಇದೆ. ಪಿಡಿಒ ಜತೆ ಮಾತನಾಡಿ ಸಮಸ್ಯೆ ಪರಿಹರಿಸುತ್ತೆವೆ’ ಎಂದು ತಾಲ್ಲೂಕು ಪಂಚಾಯತ್ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಸುಭಾಷ ಹೇಳಿದ್ದಾರೆ.

‘ಅನಿವಾರ್ಯ ಆದಾಗ ಟ್ಯಾಂಕರ್ ನೀರು’

‘25 ಕಡೆ ಖಾಸಗಿ ನೀರಿನ ಮೂಲ ಬಳಸಿಕೊಂಡು ನೀರು ಪೂರೈಸಿದ್ದೇವೆ. 11 ಕಡೆ ಟ್ಯಾಂಕ್ ನೀರು ಪೂರೈಕೆ ಪ್ರಸ್ತಾವ ಬಂದಿದೆ. ತೀರಾ ಅನಿವಾರ್ಯ ಆದಾಗ ಮಾತ್ರ ಟ್ಯಾಂಕರ್ ನೀರು ಪೂರೈಸಲಾಗುವುದು’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಸಲ ಮಳೆ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ಸಾಕಷ್ಟು ಕಡೆ ಕೊಳವೆಬಾವಿಗಳು ಬತ್ತಿ ಹೋಗಿವೆ. ರೀಬೋರ್ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಹೋಗಾಗಿ ನೀರಿನ ಮೂಲ ಗುರುತಿಸಿ ಹೊಸ ಕೊಳವೆಬಾವಿ ತೋಡಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT