ಭಾನುವಾರ, ಆಗಸ್ಟ್ 14, 2022
23 °C
ವಡಗಾಂವ್ ಡಿ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಬೇಡಿಕೆ

ಮಳೆಗಾಲದಲ್ಲೂ ತಪ್ಪದ ನೀರಿನ ಬವಣೆ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನ ವಡಗಾಂವ್ (ಡಿ) ಗ್ರಾಮದ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಸುಮಾರು 100ಕ್ಕೂ ಜಾಸ್ತಿ ಮನೆಗಳಿರುವ ವಾರ್ಡ್‌-1ರ ಸಮಗಾರ ಗಲ್ಲಿಯಲ್ಲಿ ಕಳೆದ ಹಲವು ತಿಂಗಳಿನಿಂದ ನೀರಿನ ಕೊರತೆ ಉಂಟಾಗುತ್ತಿದೆ. ಹಲವು ತಿಂಗಳಿನಿಂದ ಒಂದು ಕೊಳವೆ ಬಾವಿ ಕೆಟ್ಟುನಿಂತಿದೆ. ಇನ್ನೊಂದು ಕೊಳವೆ ಬಾವಿ ವಾರದ ಹಿಂದೆ ಹಾಳಾಗಿದೆ. ಹೀಗಾಗಿ ಈ ಬಡಾವಣೆ ಮಹಿಳೆಯರು ಕುಡಿಯಲು ನೀರಿಗಾಗಿ ಹರಸಹಾಸ ಪಡಬೇಕಿದೆ.

‘ಗ್ರಾಮ ಪಂಚಾಯಿತಿಯವರಿಗೆ ನಮ್ಮ ಗಲ್ಲಿ ಬಗ್ಗೆ ಮೊದಲಿನಿಂದಲೂ ನಿರ್ಲಕ್ಷ್ಯ. ಇರುವ ಎರಡು ಕೊಳವೆ ಬಾವಿ ಕೆಟ್ಟಿರುವ ಪರಿಣಾಮ ಬೇರೆ ಗಲ್ಲಿಗೆ ನೀರು ತರಲು ಅಲೆಯಬೇಕಾಗಿದೆ. ಕೆಲವು ಬಾರಿ ಅಲ್ಲೂ ನೀರು ಸಿಗದಿದ್ದಾಗ 1 ಕಿ.ಮೀ ದೂರದ ಜಮಗಿ ರಸ್ತೆ ಬಳಿಗೆ ಹೋಗಬೇಕಾಗಿದೆ. ಈಗ ಮಳೆಗಾಲ ಇರುವುದರಿಂದ ಜನರಿಗೆ ಅಷ್ಟು ದೂರ ಹೋಗಿ ನೀರು ತರುವುದು ಕಷ್ಟವಾಗಿ ಪರಿಣಮಿಸಿದೆ’ ಎಂದು ಗ್ರಾಮದ ನಿವಾಸಿ ಮಹೇಂದ್ರಸಿಂಗ್ ಪಾಟೀಲ ಸಮಸ್ಯೆಯನ್ನು ವಿವರಿಸಿದರು.

‘ಸಮಸ್ಯೆ ಪರಿಹರಿಸಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾಕಷ್ಟು ಸಲ ಮನವಿ ಸಲ್ಲಿಸಿದ್ದೇವೆ. ನೋಡುತ್ತೇವೆ, ಮಾಡುತ್ತೇವೆ ಎಂದು ಭರವಸೆ ನೀಡಿ ಜಾರಿಕೊಳ್ಳುತ್ತಿದ್ದಾರೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರಿದರೆ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಲಾಗುವುದು’ ವಾರ್ಡ್‌ 1ರ ನಿವಾಸಿ ನವೀಲಕುಮಾರ ಉತ್ಕಾರ್ ಎಚ್ಚರಿಸಿದ್ದಾರೆ.

‘ಗ್ರಾಮದಲ್ಲಿ ನೀರಿನ ಜತೆ ಬೇರೆ ಬೇರೆ ಸಮಸ್ಯೆಗಳು ಪರಿಹಾರ ಆಗುತ್ತಿಲ್ಲ. ಅಲ್ಲಲ್ಲಿ ಬೀದಿ ದೀಪ ಕೆಟ್ಟು ನಿಂತಿವೆ. ಹೀಗಾಗಿ ಜನ ಕತ್ತಲೆಯಲ್ಲಿ ಕಳೆಯಬೇಕಿದೆ. ಈಗ ಮಳೆ ಇರುವುದರಿಂದ ಹಾವುಗಳ ಕಾಟ ಜಾಸ್ತಿಯಾಗಿದೆ. ಬೆಳಕಿನ ವ್ಯವಸ್ಥೆ ಇದ್ದರೆ ಇಂತಹ ಜೀವ ಜಂತುಗಳಿಂದ ರಕ್ಷಣೆ ಪಡೆಯಬಹುದು. ಈ ಬಗ್ಗೆಯೂ ಪಂಚಾಯಿತಿಯವರಿಗೆ ಹೇಳಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಈ ಎಲ್ಲ ಸಮಸ್ಯೆ ಪಟ್ಟಿ ಮಾಡಿ ಗ್ರಾಮದ ಜನ ಶೀಘ್ರದಲ್ಲೇ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇವೆ’ ಎಂದು ಮಹೇಂದ್ರಸಿಂಗ್ ಪಾಟೀಲ ತಿಳಿಸಿದ್ದಾರೆ.

‘ಒಂದನೇ ವಾರ್ಡ್‌ನಲ್ಲಿ ಕೊಳವೆಬಾವಿ ಮೋಟಾರ್ ಹೊರ ತೆಗೆದು ರಿಪೇರಿ ಮಾಡಲು ನೀರು ಸರಬರಾಜು ಮಾಡುವ ವ್ಯಕ್ತಿಗೆ ಸೂಚಿಸಲಾಗಿದೆ. ಎರಡು ದಿನದಲ್ಲಿ ರಿಪೇರಿ ಮಾಡಿ ಸಮಸ್ಯೆ ಪರಿಹರಿಸಲಾಗುವುದು. ಸದ್ಯಕ್ಕೆ ಈ ಗಲ್ಲಿ ಜನ ಪಕ್ಕದ ಕ್ರಿಶ್ಚನ್ ಗಲ್ಲಿಯ ಕೊಳವೆಬಾವಿ ನೀರು ಉಪಯೋಗಿಸಲು ತಿಳಿಸಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನೀಲಕುಮಾರ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು