ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ | ಬ್ರಿಜ್‌ ಮೇಲಿಂದ ಹರಿದ ನೀರು; ಜಮೀನಿಗೆ ಹಾನಿ

ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆ; ಸಂಪರ್ಕ ಸ್ಥಗಿತಗೊಳಿಸಿದ್ದ ಜೆಸ್ಕಾಂ
Published 12 ಜೂನ್ 2024, 16:27 IST
Last Updated 12 ಜೂನ್ 2024, 16:27 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನಲ್ಲಿ ಹರಿಯುವ ಮಾಂಜ್ರಾ ನದಿಗೆ ನೆರೆ ರಾಜ್ಯದಿಂದ ಮಂಗಳವಾರ ತಡರಾತ್ರಿ  ಯಾವುದೇ ಮಾಹಿತಿ ನೀಡದೆ ಅಪಾರ ನೀರು ಹರಿಬಿಟ್ಟಿದ್ದು, ಈ ನಡುವೆ ಕೊಂಗಳಿ ಬ್ರಿಜ್ ಕಮ್ ಬ್ಯಾರೇಜ್ ಗೇಟ್ ಸಮಯಕ್ಕೆ ಸರಿಯಾಗಿ ತೆರೆಯದ ಕಾರಣ ರೈತರ ಹೊಲಗಳಿಗೆ ನೀರು ನುಗ್ಗಿ ನೂರಾರು ಎಕರೆ ಜಮೀನು ಜಲಾವೃತವಾಗಿವೆ.

ತಾಲ್ಲೂಕಿನ ಮಾಂಜ್ರಾ ನದಿಗೆ ಕೊಂಗಳಿ ಏತ ನೀರಾವರಿ ಯೋಜನೆಯಡಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣವಾಗಿದೆ.   ₹ 5 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಕಾರಣ ಜೆಸ್ಕಾಂ ಕಳೆದ 15 ದಿನಗಳ ಹಿಂದೆ ಬ್ರಿಜ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಈ ಹಿನ್ನಲೆಯಲ್ಲಿ ಕೊಂಗಳಿ ಬ್ರಿಜ್ ಕಮ್ ಬ್ಯಾರೇಜ್ ಗೇಟ್ ಮೇಲೆತ್ತಲು ಸಾಧ್ಯವಾಗದೇ ಬ್ರಿಜ್‌ ಮೇಲಿಂದ ನೀರು ಹರಿದಿದೆ. ಸುತ್ತಮುತ್ತಲಿನ ಗ್ರಾಮಗಳಾದ ಕೊಂಗಳಿ, ಸಾಯಗಾಂವ, ಮೆಹಕರ ಗ್ರಾಮದ ರೈತರ ನೂರಾರು ಎಕರೆ ಹೊಲಗಳಿಗೆ ನೀರು ನುಗ್ಗಿದ್ದು, ರೈತರು ಹಿಡಿಶಾಪ ಹಾಕಿದ್ದಾರೆ.

ತದನಂತರ ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಕರ್ನಾಟಕ ನೀರಾವರಿ ನಿಗಮ ನೀರಾವರಿ ಇಲಾಖೆಯ ಎಇಇ ಸಂತೋಷ ಮಾಕಾ, ತಹಶೀಲ್ದಾರ್‌ ರಮೇಶ್ ಬಾಬು ಹಾಲು, ಜೆಸ್ಕಾಂ ಎಇಇ ಗಣಪತಿ ಅವರು ಭೇಟಿ ಕೊಟ್ಟು ಸೂಕ್ತ ಸಮಾಲೋಚನೆಯೊಂದಿಗೆ ವಿದ್ಯುತ್ ಸಂಪರ್ಕ ಪಡೆದು ಬ್ರಿಜ್ ಕಮ್ ಬ್ಯಾರೇಜ್ ಗೇಟ್ ತೆರೆದು ನೀರು ಸುಗಮವಾಗಿ ಹರಿದು ಬಿಡಲಾಯಿತು. ನೀರಿನ ಒತ್ತಡ ಹಿನ್ನಲೆ ನೀರಿನ ರಭಸದಿಂದ ಕಾರ್ಯಾಚರಣೆ ಪದೇ ಪದೇ ಸ್ಥಗಿತವಾಗುತ್ತಿತ್ತು .

ಮಾಹಿತಿ ಇಲ್ಲಿದೆ ನೀರು ಬಿಡುಗಡೆ:

ಸರ್ಕಾರದ ನಿಯಮಾನುಸಾರ ಮಳೆಗಾಲ ಹಾಗೂ ಪ್ರವಾಹದ ಸಂದರ್ಭಗಳಲ್ಲಿ ಯಾವುದೇ ರಾಜ್ಯ ತನ್ನ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡುವ ಮುನ್ನ ನದಿ ಹರಿದು ಹೋಗುವ ರಾಜ್ಯಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಆದೇಶವಿದ್ದರೂ, ನೆರೆ ರಾಜ್ಯ ಮಹಾರಾಷ್ಟ್ರದಿಂದ ಕರ್ನಾಟಕದ ಗಡಿಯಲ್ಲಿರುವ ಮಾಂಜ್ರಾ ನದಿಗೆ ತಡರಾತ್ರಿ ನೀರೂ ಹರಿದುಬಿಟ್ಟಿದ್ದೂ ಸಮಂಜಸವಲ್ಲ ಎಂದು ತಹಶೀಲ್ದಾರ್ ರಮೇಶ್ ಬಾಬು ' ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT