ಪತಿಗಿಂತ ಪತ್ನಿಯೇ ಸಿರಿವಂತೆ; ಈಶ್ವರ ಖಂಡ್ರೆಗೆ ಕೃಷಿ ಜಮೀನು ಇಲ್ಲ

ಬುಧವಾರ, ಏಪ್ರಿಲ್ 24, 2019
31 °C

ಪತಿಗಿಂತ ಪತ್ನಿಯೇ ಸಿರಿವಂತೆ; ಈಶ್ವರ ಖಂಡ್ರೆಗೆ ಕೃಷಿ ಜಮೀನು ಇಲ್ಲ

Published:
Updated:
Prajavani

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಮಂಗಳವಾರ ನಾಮಪತ್ರ ಸಲ್ಲಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗಿಂತ ಅವರ ಪತ್ನಿಯೇ ಸಿರಿವಂತರು. ಖಂಡ್ರೆ ಜಮೀನು ಹೊಂದಿಲ್ಲ. ಆದರೆ ಅವರ ಪತ್ನಿ ಹಾಗೂ ಪುತ್ರರ ಹೆಸರಲ್ಲಿ ಜಮೀನು ಇದೆ.

ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಈಶ್ವರ ಖಂಡ್ರೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರ ನೀಡಿದ್ದಾರೆ. ಖಂಡ್ರೆ ₹ 85.35 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ ಗೀತಾ ₹10.26 ಕೋಟಿಯ ಒಡೆಯರಾಗಿದ್ದಾರೆ. ಅವರ ಇಬ್ಬರು ಮಕ್ಕಳ ಹೆಸರಲ್ಲಿ ₹ 2.40 ಕೋಟಿಯ ಆಸ್ತಿ ಇದೆ.

ಈಶ್ವರ ಖಂಡ್ರೆ ಕೈಯಲ್ಲಿ ₹ 2.49 ಲಕ್ಷ ನಗದು ಇಟ್ಟುಕೊಂಡಿದ್ದಾರೆ. ಪತ್ನಿ ಬಳಿ ₹ 3.93 ಲಕ್ಷ, ಹಿರಿಯ ಪುತ್ರನ ಕೈಯಲ್ಲಿ ₹ 1.45 ಲಕ್ಷ ಹಾಗೂ ಕಿರಿಯ ಪುತ್ರನ ಬಳಿ ₹ 2,900 ನಗದು ಇದೆ.

ಈಶ್ವರ ಖಂಡ್ರೆ ಬಳಿ ₹ 8.75 ಲಕ್ಷ ಮೌಲ್ಯದ 30 ತೊಲ ಚಿನ್ನ, ₹ 3.04 ಲಕ್ಷ ಮೌಲ್ಯದ 4 ಕೆ.ಜಿ ಬೆಳ್ಳಿ, ಪತ್ನಿ ಗೀತಾ ಅವರಲ್ಲಿ ₹ 30.05 ಲಕ್ಷ ಮೌಲ್ಯದ 1 ಕೆ.ಜಿ. 5 ತೊಲ ಚಿನ್ನಾಭರಣ, ₹ 2.70 ಲಕ್ಷ ಮೌಲ್ಯದ 7 ಕೆ.ಜಿ ಬೆಳ್ಳಿಯ ಆಭರಣ, ಹಿರಿಯ ಪುತ್ರ ಗುರುಪ್ರಸಾದ ಬಳಿ ಸಂಬಂಧಿಕರು ಉಡುಗೊರೆಯಾಗಿ ನೀಡಿದ ₹15 ಲಕ್ಷ ಮೌಲ್ಯದ ಅರ್ಧ ಕೆ.ಜಿ ಚಿನ್ನಾಭರಣ ಹಾಗೂ ಕಿರಿಯ ಪುತ್ರ ಸಾಗರ ಅವರ ಹತ್ತಿರ ₹ 12 ಲಕ್ಷ ಮೌಲ್ಯದ 40 ತೊಲ ಚಿನ್ನಾಭರಣ ಇದೆ.

ಪತ್ನಿ ಹೆಸರಲ್ಲಿ ಭಾಲ್ಕಿ ತಾಲ್ಲೂಕಿನ ಚಿಕ್ಕಲಚಂದ ಗ್ರಾಮದಲ್ಲಿ 41 ಎಕರೆ 46 ಗುಂಟೆ ಜಮೀನು, ಬೀದರ್‌ನಲ್ಲಿ ಅರಣ್ಯ ಇಲಾಖೆಯ ಕಚೇರಿ ಬಳಿ ಎರಡು ನಿವೇಶನಗಳು ಇವೆ. ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಎರಡು ಮನೆಗಳಿವೆ. ಕುಟುಂಬದ ನಾಲ್ಕು ಜನ ಸದಸ್ಯರು ಮಾಡಿಸಿರುವ ಜೀವ ವಿಮೆಯ ಮೌಲ್ಯ ₹ 32.68 ಲಕ್ಷ.

ಪತ್ನಿ ಹಾಗೂ ಪುತ್ರರ ಹೆಸರಲ್ಲಿ ₹ 2.40 ಕೋಟಿ ಮೌಲ್ಯದ ಕೃಷಿ ಜಮೀನು, ₹ 1.98 ಕೋಟಿ ಮೌಲ್ಯದ ಕೃಷಿಯೇತರ ಜಮೀನು ಹಾಗೂ ₹ 7.48 ಕೋಟಿ ಮೌಲ್ಯದ ಮನೆ- ಕಟ್ಟಡಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !