ಕಾರಂಜಾ ಸಂತ್ರಸ್ತರ ಬೇಡಿಕೆಗಳ ಮರು ಪರಿಶೀಲನೆ

ಶನಿವಾರ, ಜೂಲೈ 20, 2019
25 °C
ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಭರವಸೆ

ಕಾರಂಜಾ ಸಂತ್ರಸ್ತರ ಬೇಡಿಕೆಗಳ ಮರು ಪರಿಶೀಲನೆ

Published:
Updated:
Prajavani

ಬೀದರ್‌: ‘ಜಿಲ್ಲೆಯ ಕಾರಂಜಾ ಜಲಾಶಯದ ಮುಳುಗಡೆ ಪ್ರದೇಶದ ಸಂತ್ರಸ್ತರ ಬೇಡಿಕೆಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಾರಂಜಾ ಸಂತ್ರಸ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ಸಂತ್ರಸ್ತರ ಬೇಡಿಕೆಗಳು ಹಾಗೂ ಸಭೆಯಲ್ಲಿ ಚರ್ಚೆಯಾದ ಸಮಗ್ರ ವಿಷಯಗಳ ನಡಾವಳಿಯನ್ನು ಮುಖ್ಯಮಂತ್ರಿಗೆ ಕಳಿಸಲಾಗುವುದು. ಸಂತ್ರಸ್ತರ ಬೇಡಿಕೆಗಳ ಮರು ಪರಿಶೀಲನೆಗಾಗಿ ಉಪ ಸಮಿತಿ ರಚನೆಗೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಲಾಗುವುದು’ ಎಂದು ತಿಳಿಸಿದರು.

‘ಕಾರಂಜಾ ಸಂತ್ರಸ್ತರ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಗಮನಕ್ಕೆ ತರುತ್ತೇನೆ. ಸರ್ಕಾರ ರೈತರ ಪರವಾಗಿದೆ. ಈ ವಿಷಯದಲ್ಲಿ ರಾಜಕೀಯ ಬೆರೆಸುವುದು ಬೇಡ. ಸಂತ್ರಸ್ತರ ಸಮಸ್ಯೆಗಳನ್ನು ಎಲ್ಲ ಪಕ್ಷಗಳ ಮುಖಂಡರು ಒಗ್ಗೂಡಿ ಪರಿಶೀಲಿಸೋಣ’ ಎಂದು ಹೇಳಿದರು.

‘ಈ ರೀತಿಯ ಸಮಸ್ಯೆಗಳು ಎಲ್ಲ ಕಡೆಯೂ ಇವೆ. ಒಂದು ವೇಳೆ ಕಾನೂನಿನಲ್ಲಿ ಅವಕಾಶ ಸಿಗದಿದ್ದರೆ ಪ್ರಧಾನಮಂತ್ರಿ ಅವರ ಬಳಿ ಹೋಗೋಣವೆಂದು ಈಗಾಗಲೇ ಹಲವಾರು ಬಾರಿ ಸಂತ್ರಸ್ತರಿಗೆ ಹೇಳಿದ್ದೇನೆ’ ಎಂದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್ ಮಾತನಾಡಿ, ‘ನಾನು ಯಾವತ್ತೂ ರೈತರ ಪರವಾಗಿದ್ದೇನೆ. ಸದಾಕಾಲ ನಿಮ್ಮ ಜೊತೆಗೆ ಇರುತ್ತೇನೆ’ ಎಂದು ತಿಳಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಜಲಾಶಯದಲ್ಲಿರುವ ನೀರು ಕುಡಿಯಲು ಸಾಲುತ್ತಿಲ್ಲ. ಅನಗತ್ಯವಾಗಿ ಹಣ ಖರ್ಚು ಮಾಡಿ ಕಾಲುವೆಗಳನ್ನು ನಿರ್ಮಿಸಲಾಗುತ್ತಿದೆ. ಅದೇ ಹಣವನ್ನು ಸಂತ್ರಸ್ತರಿಗೆ ಕೊಡಲು ಸಾಧ್ಯವಿತ್ತು’ ಎಂದು ಹೇಳಿದರು.

‘ಕಾರಂಜಾ ಸಂತ್ರಸ್ತರಿಗೆ ಸರ್ಕಾರದಿಂದ ಸಮರ್ಪಕ ಪರಿಹಾರ ಸಿಗಬೇಕು. ಈ ವಿಷಯದಲ್ಲಿ ನಾವು ರಾಜಕೀಯ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಮಾತನಾಡಿ, ‘ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡಬೇಕು. ವಿಶೇಷ ಉಪ ಸಮಿತಿ ರಚಿಸಿ ಬೇಡಿಕೆಗಳ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಬೇಕು’ ಎಂದರು.

‘ಕಾರಂಜಾ ಯೋಜನೆಯಲ್ಲಿ ಕೃಷಿ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗಿದೆ. ಜಿಲ್ಲೆಯ 28 ಹಳ್ಳಿಗಳ ಸಂತ್ರಸ್ತ ರೈತರಿಗೆ ಪರಿಹಾರ ಕೊಡಿ, ಇಲ್ಲವೆ ವಿಷ ಕೊಡಿ. ಈ ಮೊದಲು ನಿರ್ಮಿಸಿದ ಕಾಲುವೆಯಲ್ಲಿ ಒಂದು ಹನಿಯೂ ನೀರು ಹರಿದಿಲ್ಲ. ಜಿಲ್ಲೆಯಲ್ಲಿ ಕುಡಿಯಲು ನೀರಿಲ್ಲ. ಕಾರಂಜಾ ಜಲಾಶಯದಿಂದ ನೀರು ಹರಿಸಲು ₹ 540 ಕೋಟಿ ಖರ್ಚು ಮಾಡಿ ಕಾಲುವೆಗಳನ್ನು ನಿರ್ಮಿಸುತ್ತಿದ್ದೀರಿ’ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.

ಸಂತ್ರಸ್ತರಾದ ರಾಜಕುಮಾರ ಹಳಕೇರಿ, ಸೂರ್ಯಕಾಂತ ಪಾಟೀಲ ಮಾತನಾಡಿದರು. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !