ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು

ಮಂಗಳವಾರ, ಮಾರ್ಚ್ 26, 2019
31 °C
ಬ್ರಿಮ್ಸ್ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಗಟೆ ಹೇಳಿಕೆ

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು

Published:
Updated:
Prajavani

ಬೀದರ್: ‘ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗಾಗಿ ಎಲ್ಲರನ್ನೂ ಕಾಡುತ್ತಿದೆ. ಭ್ರೂಣಹತ್ಯೆ ತಡೆಯುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಬೇಕಿದೆ’ ಎಂದು ಬ್ರಿಮ್ಸ್ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಿ.ಎಸ್. ರಗಟೆ ಹೇಳಿದರು.

ನಗರದ ಬ್ರಿಮ್ಸ್‌ ಸಭಾಂಗಣದಲ್ಲಿ ಶುಕ್ರವಾರ ಮಕ್ಕಳ ಸಾಹಿತ್ಯ ಪರಿಷತ್, ಮಹರ್ಷಿ ವಾಲ್ಮೀಕಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕರ್ನಾಟಕ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಸಾವಿರ ಪುರುಷರಿಗೆ 700 ರಿಂದ 800 ಮಹಿಳೆಯರು ಇದ್ದಾರೆ. ಭ್ರೂಣ ಹತ್ಯೆಯಿಂದ ಈ ಅಂತರ ಹೆಚ್ಚುತ್ತಿದೆ. ಗರ್ಭಿಣಿಯರು ಯಾವ ಕಾರಣಕ್ಕೂ ಭ್ರೂಣಹತ್ಯೆ ಮಾಡಲು ಒಪ್ಪಬಾರದು’ ಎಂದು ತಿಳಿಸಿದರು.

‘ಹೆಣ್ಣು ಅಜ್ಜಿ, ತಾಯಿ, ಸಹೋದರಿ, ಅತ್ತಿಗೆ, ನಾದನಿ ಹಾಗೂ ಮಡದಿಯಾಗಿ ಎಲ್ಲರಿಗೂ ಬೇಕು. ಆದರೆ ಮಗಳಾಗಿ ಸ್ವೀಕರಿಸಲು ಯಾರಿಗೂ ಇಷ್ಟವಿಲ್ಲ. ಇದರ ಕಾರಣ ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಗಳು ಕಷ್ಟದ ಕಾಲದಲ್ಲಿ ತಂದೆ-ತಾಯಿಗೆ ಆಶ್ರಯವಾಗಿ ನಿಲ್ಲುತ್ತಾಳೆ. ಆದರೂ ಮಗಳು ಬೇಡ ಎನ್ನುವ ಮನಸ್ಥಿತಿ ಬದಲಾದರೆ ಮಾತ್ರ ಸಮಾಜದಲ್ಲಿ ಪುರುಷರ ಹಾಗೂ ಮಹಿಳೆಯರ ಅನುಪಾತದಲ್ಲಿ ಸಮಾನತೆ ಕಾಣಲು ಸಾಧ್ಯ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಮಾತನಾಡಿ, ‘ಬೇರೆ ದೇಶದ ಮಹಿಳೆಯರಿಗಿಂತ ನಮ್ಮ ದೇಶದ ಮಹಿಳೆಯರಿಗೆ ಅಧಿಕ ಸ್ವಾತಂತ್ರ್ಯವಿದೆ. ಹೆಣ್ಣಿಗೂ ಗಂಡಿನಷ್ಟೇ ಸಮಾನತೆ ಇದೆ’ ಎಂದು ತಿಳಿಸಿದರು.

‘ಮೈಸೂರು ಮಾದರಿಯಲ್ಲಿ ಬೀದರ್ ನಗರವನ್ನು ಕಸಮುಕ್ತ ನಗರವನ್ನಾಗಿ ಮಾಡಲು ಪಣ ತೊಡಲಾಗಿದೆ. ಇದಕ್ಕೆ ಮಹಿಳೆಯರ ಸಹಕಾರದ ಅಗತ್ಯವಿದೆ’ ಎಂದು ಹೇಳಿದರು.

ಆಣದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೈಶಾಲಿ ಮಾತನಾಡಿ,‘ ಭಾರತ ದೇಶದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿದೆ. ಆದರೆ, ಇವತ್ತಿಗೂ ಮಹಿಳೆಯರು ಶೋಷಣೆ, ಅನ್ಯಾಯ, ಅತ್ಯಾಚಾರಗಳಿಗೆ ಬಲಿಯಾಗುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಹಿಳೆಯರನ್ನು ಪುರುಷರು ನೋಡುವ ದೃಷ್ಟಿಕೋನ ಬದಲಾಗಬೇಕು. ಪುರಷರ ಜತೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಸಹೋದರಿ, ತಾಯಿ, ತಂಗಿಯ ರೂಪದಲ್ಲಿ ಕಂಡರೆ ಅತ್ಯಾಚಾರಗಳು ನಡೆಯವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟದ ಅಧ್ಯಕ್ಷೆ ಪಾರ್ವತಿ ವಿಜಯಕುಮಾರ ಸೋನಾರೆ ಮಾತನಾಡಿ, ‘ಡಾ. ಬಿ.ಆರ್. ಅಂಬೇಡ್ಕರ್‌ ಅವರು ಮಹಿಳೆಯರಿಗೆ ಮತದಾನದ ಹಕ್ಕಿನ ಜತೆಗೆ ಎಲ್ಲ ಬಗೆಯ ಹಕ್ಕುಗಳನ್ನು ನೀಡಿದ್ದಾರೆ’ ಎಂದು ತಿಳಿಸಿದರು.

‘ಜಾಗತೀಕರಣ ಪರಿಣಾಮ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಮಹಿಳೆಯರಿಗೆ ನಿರೀಕ್ಷೆಯಷ್ಟು ಉದ್ಯೋಗ ದೊರೆಯುತ್ತಿಲ್ಲ. ಉದ್ಯೋಗದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನ ಕಲ್ಪಿಸಕೊಡುವ ಅಗತ್ಯ ಇದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಔರಾದ ತಾಲ್ಲೂಕು ಘಟಕದ ಜಗನ್ನಾಥ ಮೂಲಗೆ ಮಾತನಾಡಿದರು.

ಗಾಯಕಿ ಶ್ರೀಮತಿ ರೇಖಾ ಸೌದಿ ಅವರು ‘ಹಿಂದುಸ್ಥಾನವೂ ಎಂದೂ ಮರೆಯದ ಭಾರತ ರತ್ನವೂ ನೀನಾಗು’  ಹಾಡು ಹಾಡಿದರು.

ಸರ್ಕಾರಿ ಸುಶ್ರೂಷಕಿಯರ ಶಾಲೆಯ ಮೇಲ್ವಿಚಾರಕಿ ಆರ್.ಪಿ. ವೆರೋನಿಕಾ, ಕರ್ನಾಟಕ ಜನಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಂ.ಪಿ. ಮುದಾಳೆ, ಜಿಲ್ಲಾ ಜಾನಪದ ಹಾಗೂ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಇದ್ದರು.

ಅರವಿಂದ ಕುಲಕರ್ಣಿ ಸ್ವಾಗತಿಸಿದರು. ಓಂ ಪ್ರಕಾಶ ಪಾಟೀಲ ನಿರೂಪಿಸಿದರು. ಮಹರ್ಷಿ ವಾಲ್ಮೀಕಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !