₹ 54 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

ಬುಧವಾರ, ಮಾರ್ಚ್ 27, 2019
22 °C

₹ 54 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

Published:
Updated:
Prajavani

ಬೀದರ್: ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರ ಚೆಕ್ ಪೋಸ್ಟ್‌ನಲ್ಲಿ ರಾಜ್ಯದ ಟ್ರಾನ್ಸಿಟ್ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ₹ 54 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳು ಚೆಕ್‌ಪೋಸ್ಟ್‌ನಲ್ಲಿ ಬುಧವಾರ ರಸ್ತೆ ಕಾವಲು ನಡೆಸುತ್ತಿದ್ದಾಗ ಮಹೇಂದ್ರ ಪಿಕ್ ಅಪ್ ವಾಹನ ಮತ್ತು ಅಶೋಕ ಲೈಲ್ಯಾಂಡ್ ಪಿಕ್ ಅಪ್ ವಾಹನಗಳನ್ನು ಪರಿಶೀಲಿಸಿದಾಗ ಮದ್ಯದ ಬಾಟಲಿಗಳನ್ನು ಹೊಂದಿರುವ 200 ಪೆಟ್ಟಿಗೆಗಳು ದೊರೆತಿವೆ. ಈ ಎರಡೂ ವಾಹನ ಮತ್ತು ಮದ್ಯವನ್ನು ವಶಕ್ಕೆ ಪಡೆದಿದ್ದು, ಬಸವಕಲ್ಯಾಣ ವಲಯ ಅಧಿಕಾರಿ ಎರಡು ಮೊಕದ್ದಮೆಗಳನ್ನು ದಾಖಲಿಸಿಕೊಂಡಿದ್ದಾರೆ.

ವಿವಿಧೆಡೆ ದಾಳಿ: 
ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಪ್ರಯುಕ್ತ ಅಬಕಾರಿ ಇಲಾಖೆಯ ಅಧಿಕಾರಿಗಳು ಉಪ ಆಯುಕ್ತ ಬಿ.ಶಿವಪ್ರಸಾದ ನೇತೃತ್ವದಲ್ಲಿ ಮಾ.10ರಿಂದ 13ರ ವರೆಗೆ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ 21 ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಅವಧಿಯಲ್ಲಿ ಒಟ್ಟು 57 ದಾಳಿಗಳನ್ನು ನಡೆಸಿದ್ದು, 23 ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ. 21 ಆರೋಪಿಗಳನ್ನು ವಶಕ್ಕೆ ಪಡೆದು 1181.570 ಲೀಟರ್ ಮದ್ಯ(900 ಲೀಟರ್‌ ವಿದೇಶಿ ಮದ್ಯ) ಒಳಗೊಂಡಂತೆ 124.700 ಲೀಟರ್ ಬೀಯರ್, ಮೂರು ವಾಹನ ಹಾಗೂ ಎರಡು ದ್ವಿ ಚಕ್ರ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಜಪ್ತಿ ಮಾಡಲಾದ ಮದ್ಯದ ಮೌಲ್ಯ ₹68,98,561 ಆಗಿದೆ.

ಅಬಕಾರಿ ಅಕ್ರಮ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿಯನ್ನು ಸಜ್ಜುಗೊಳಿಸಿದ್ದು, ದಿನದ 24 ಗಂಟೆಯೂ ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಅಬಕಾರಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಕೈಗೊಳ್ಳಳಾಗುತ್ತಿದೆ. ಇದು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಮುಂದುವರಿಯಲಿದೆ ಎಂದು ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಚುನಾವಣೆಯು ಮುಕ್ತ, ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅನುವಾಗುವಂತೆ ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ, ಮದ್ಯಸಾರ, ಕಳ್ಳಬಟ್ಟಿ ಸಾರಾಯಿ, ಸೇಂದಿ ಇತ್ಯಾದಿ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತಿತರ ಅಬಕಾರಿ ಅಕ್ರಮ ಚಟುವಟಿಕೆಗಳು ಹಾಗೂ ಮದ್ಯದ ವಿತರಣೆ ಕಂಡುಬಂದರೆ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ತೆರೆಯಲಾದ ಅಬಕಾರಿ ಇಲಾಖೆಯ ನಿಯಂತ್ರಣ ಕೊಠಡಿಗಳ(ಕಂಟ್ರೋಲ್ ರೂಂ) ದೂರವಾಣಿ ಅಥವಾ ಮೊಬೈಲ್ ಸಂಖ್ಯೆಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !