ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಸಿದ್ಧರಾಗಲು ಸಲಹೆ

Last Updated 10 ಜುಲೈ 2012, 6:45 IST
ಅಕ್ಷರ ಗಾತ್ರ

ಔರಾದ್: ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಪತನದ ಅಂಚಿನಲ್ಲಿದ್ದು, ಯಾವಾಗ ಚುನಾವಣೆ ನಡೆದರೂ ಅದನ್ನು ಎದುರಿಸಲು ಸಿದ್ಧರಾಗುವಂತೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ವೀಕ್ಷಕ ಹಾಗೂ ಆಂಧ್ರದ ಗುಂಟೂರ ಶಾಸಕ ಮಸ್ತಾನ್ ಅಲಿ ಕರೆ ನೀಡಿದರು.

ಇಲ್ಲಿಯ ನಾಲಂದಾ ಕಾಲೇಜಿನಲ್ಲಿ ಸೋಮವಾರ ಪಕ್ಷದ ಪದಾಧಿಕಾರಿಗಳು ಮತ್ತು ಪ್ರಮುಖರ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಬಿಜೆಪಿ ಹೈಕಮಾಂಡ್ ಸದಾನಂದಗೌಡ ಅವರನ್ನು ಬದಲಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದರೂ ಈ ಸರ್ಕಾರ ಪೂರ್ಣಾವಧಿ ಬಾಳುವುದಿಲ್ಲ. ಬದಲಿಗೆ ಮತ್ತಷ್ಟು ಭಿನ್ನಮತ ಜಾಸ್ತಿಯಾಗಿ ಸರ್ಕಾರ ತನ್ನಿಂದ ತಾನೇ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಸರ್ಕಾರದ ನಾಲ್ಕು ವರ್ಷದ ಆಡಳಿತ ನೋಡಿ ಜನರಿಗೆ ಬಹಳ ಬೇಜಾರು ಆಗಿದೆ. ವ್ಯಾಪಕ ಭ್ರಷ್ಟಾಚಾರ ಈ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಅಲ್ಪಸಂಖ್ಯಾತ ಮುಸ್ಲಿಂರು, ಕ್ರೈಸ್ತರು, ದಲಿತರು ಮತ್ತು ಇತರೆ ಹಿಂದುಳಿದ ಜನರ ವಿರೋಧ ನೀತಿ ಅನುಸರಿಸುತ್ತಿದೆ. ಜಾತಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಪಕ್ಷ ಸಂಘಟನೆ:
ಬರಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಚುರುಕುಗೊಳಿಸುವ ಕೆಲಸ ನಡೆಯುತ್ತಿದೆ. ಬೂತ್ ಮಟ್ಟದಿಂದ ಪಕ್ಷದ ಸಂಘಟನೆ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಪ್ರತಿ ತಾಲ್ಲೂಕಿನಲ್ಲಿ ಪಕ್ಷದ ಆಯ್ದ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಬರುವ ಚುನಾವಣೆಯಲ್ಲಿ ಸಾಕಷ್ಟು ಮೊದಲೇ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಚಿಂತನೆ ನಡೆಯುತ್ತಿದೆ ಎಂಬ ಸುಳಿವು ನೀಡಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಜಿಲ್ಲಾ ಉಸ್ತುವಾರಿ ಅನ್ವರ್ ಮುಧೋಳ, ಶಾಸಕ ರಹೀಮ್‌ಖಾನ್, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಧುರೀಣ ಕೆ. ಪುಂಡಲಿಕರಾವ, ಪಂಡಿತ ಚಿದ್ರಿ, ಚಂದ್ರಕಾಂತ ಹಿಪ್ಪಳಗಾಂವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ದೇಶಮುಖ, ಪ್ರಕಾಶ ಪಾಟೀಲ, ಮುರಳೀಧರ ಎಕಲಾರಕರ್, ಸಂಜಯ ಜಾಗಿರದಾರ್, ಚರಣ ರಾಠೋಡ, ಬಕ್ಕಪ್ಪ ಕೋಟೆ ಉಪಸ್ಥಿತರಿದ್ದರು. ಚಂದ್ರಕಾಂತ ಪಾಟೀಲ ಸ್ವಾಗತಿಸಿದರು. ಎಐಸಿಸಿ ವೀಕ್ಷಕರು ಸಭೆಯ ನಂತರ ತಾಲ್ಲೂಕಿನ ಪಕ್ಷದ ಸ್ಥಿತಿಗತಿ ಕುರಿತು ಒಬ್ಬೊಬ್ಬರನ್ನು ಕರೆದು ಮಾಹಿತಿ ಸಂಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT