ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ಎಲೆಚುಕ್ಕೆ ರೋಗ ಬಾಧೆ

ನಿರ್ವಹಣಾ ಕ್ರಮ ಅನುಸರಿಸಲು ರೈತರಿಗೆ ಕೃಷಿ ವಿಜ್ಞಾನಿಗಳ ಸಲಹೆ
Last Updated 26 ಅಕ್ಟೋಬರ್ 2017, 6:11 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ತೊಗರಿ ಹಾಗೂ ಕಡಲೆ ಬೆಳೆಯಲ್ಲಿ ಹಸಿರು ಕಾಯಿಕೊರಕ ಬಾಧೆ ಕಂಡು ಬಂದಿದೆ. ಕೆಲ ಕಡೆ ತೊಗರಿಗೆ ಎಲೆ ಚುಕ್ಕೆ ರೋಗ ಬಾಧಿಸಿದೆ.

ತೊಗರಿ, ಕಡಲೆ ಹಾಗೂ ಇತರ ಹಿಂಗಾರು ಬೆಳೆಗಳಿಗೆ ಬಾಧಿಸುವ ಕೀಟ ಹಾಗೂ ರೋಗಗಳ ನಿರ್ವಹಣೆಗೆ ಜಿಲ್ಲೆಯಲ್ಲಿ ಕ್ಷಿಪ್ರ ಸಂಚಾರ ಸಮೀಕ್ಷೆ ನಡೆಸಿರುವ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವು ಬೆಳಗಳ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ.

ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಅನೇಕ ಗ್ರಾಮಗಳ ಹೊಲಗಳಲ್ಲಿ ತೊಗರಿ ಮತ್ತು ಕಡಲೆ ಬೆಳೆಗಳು ಚೆನ್ನಾಗಿವೆ. ಅನೇಕ ಕಡೆ ಬೇಗ ಮಾಗುವ ತೊಗರಿ ತಳಿ ಹೂವಾಡುವ ಹಂತದಲ್ಲಿದೆ. ಬೆಳೆಯಲ್ಲಿ ಹಸಿರು ಕಾಯಿ ಕೊರಕದ ಮೊಟ್ಟೆ ಹಾಗೂ ಮರಿ ಹುಳುಗಳು ಕಂಡು ಬಂದಿವೆ. ಇವುಗಳ ಪ್ರಮಾಣ ಆರ್ಥಿಕ ನಷ್ಟದ ರೇಖೆಯನ್ನು ತಲುಪಿಲ್ಲ ಎಂದು ತಿಳಿಸಿದೆ.

ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ, ಭಾಲ್ಕಿ ತಾಲ್ಲೂಕಿನ ದಾಡಗಿ ಹಾಗೂ ಔರಾದ್ ತಾಲ್ಲೂಕಿನ ಕಾಳಗಾಪುರ ಗ್ರಾಮಗಳ ತೊಗರಿ ಬೆಳೆಯಲ್ಲಿ ಹಸಿರು ಕಾಯಿ ಕೊರಕದ ಮರಿ ಹುಳುವಿನ ಬಾಧೆ ಪತ್ತೆಯಾಗಿದೆ. ಕೀಟವು ಆರ್ಥಿಕ ನಷ್ಟ ಉಂಟು ಮಾಡುವ ರೇಖೆಯನ್ನು ತಲುಪಿದೆ (ಕೀಟದ ಆರ್ಥಿಕ ನಷ್ಟದ ರೇಖೆ ಪ್ರತಿ ಗಿಡಕ್ಕೆ 2 ಮೊಟ್ಟೆ/ 1 ಕೀಡೆ). ಇದರ ನಿರ್ವಹಣೆಗಾಗಿ ಬೆಳೆಯು ಮೊಗ್ಗು ಮತ್ತು ಹೂ ಬೀಡುವ ಹಂತದಲ್ಲಿದ್ದಾಗ ಕೀಟಗಳ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಮೊದಲನೆಯ ಸಿಂಪರಣೆಯಾಗಿ ತತ್ತಿ ನಾಶಕ ಕೀಟನಾಶಕಗಳಾದ ಪ್ರೋಪೆನೊಫಾಸ್ 50 ಇ.ಸಿ 2 ಮಿ.ಲೀ ಅಥವಾ ಮಿಥೋಮಿಲ್ 40 ಎಸ್.ಪಿ. 0.6 ಗ್ರಾಂ ಅಥವಾ ಥೈಯೋಡಿಕಾರ್ಬ್ 75 ಡಬ್ಲೂ.ಪಿ. 0.6 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದೆ.

ಭಾಲ್ಕಿ ತಾಲ್ಲೂಕಿನ ಚಿಂಚೋಳಿ ಮತ್ತು ಅಳಂದಿ, ಔರಾದ್ ತಾಲ್ಲೂಕಿನ ಕಮಲನಗರ ಹಾಗೂ ಬೀದರ್ ತಾಲ್ಲೂಕಿನ ಸಾಂಗ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಡಲೆ ಬೆಳೆಯಲ್ಲಿ ಹಸಿರು ಕಾಯಿ ಕೊರಕದ ಮರಿ ಹುಳುವಿನ ಬಾಧೆ ಕಾಣಿಸಿದೆ. ಕೀಟವು ಆರ್ಥಿಕ ನಷ್ಟದ ರೇಖೆಯನ್ನು ಮುಟ್ಟಿದೆ(ಕೀಟದ ಆರ್ಥಿಕ ನಷ್ಟ ರೇಖೆ ಪ್ರತಿ 10 ಗಿಡಕ್ಕೆ 2 ಮೊಟ್ಟೆ/ 1 ಕೀಡೆ). ಕೀಟದ ನಿರ್ವಹಣೆಗಾಗಿ ಕೀಟಗಳ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಮೊದಲನೆಯ ಸಿಂಪರಣೆಯಾಗಿ ತತ್ತಿ ನಾಶಕ ಕೀಟನಾಶಕಗಳಾದ ಪ್ರೋಪೆನೊಫಾಸ್ 50 ಇ.ಸಿ 3 ಮಿ.ಲೀಟರ್ ಅಥವಾ ಮಿಥೋಮಿಲ್ 40 ಎಸ್.ಪಿ. 0.6 ಗ್ರಾಂ ಅಥವಾ ಥೈಯೋಡಿಕಾರ್ಬ್ 75 ಡಬ್ಲೂ. ಪಿ. 0.6 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದೆ.

ಅನೇಕ ಕಡೆಗಳಲ್ಲಿ ತೊಗರಿಯಲ್ಲಿ ಎಲೆಚುಕ್ಕೆ ರೋಗದ ಬಾಧೆ ಕಂಡು ಬಂದಿದೆ. ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂಡು ಬರುತ್ತವೆ. ರೋಗದ ತೀವ್ರತೆ ಹೆಚ್ಚಾದರೆ ಎಲೆಗಳು ಸಸ್ಯದಿಂದ ಉದುರುತ್ತವೆ. ಇದರ ನಿರ್ವಹಣೆಗಾಗಿ 1 ಗ್ರಾಂ. ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು ಎಂದು ಸಲಹೆ ಮಾಡಿದೆ.

ತೊಗರಿಯ ಗೊಡ್ಡು ರೋಗ ಬಾಧಿತ ಗಿಡಗಳು ಸಾಮಾನ್ಯ ಗಿಡಗಳಂತೆ ಹೂ ಮತ್ತು ಕಾಯಿಗಳನ್ನು ಹೊಂದದೆ, ಹೆಚ್ಚು ಎಲೆಗಳನ್ನು ಹೊಂದಿ ಗೊಡ್ಡಾಗಿ ಉಳಿಯುತ್ತವೆ. ಬೆಳೆ ಚಿಕ್ಕದಿದ್ದಾಗ ಈ ರೋಗವಿದ್ದರೆ ಗಿಡ ಬೆಳೆಯದೇ ಮುದುಡಿಕೊಂಡಿರುವ ಎಲೆಗಳ ಗುಂಪಿ ನಿಂದ ಕೂಡಿ ಪೊದೆಯಂತೆ ಗೊಡ್ಡಾಗಿ ಉಳಿಯುತ್ತದೆ.

ನಂಜಾಣುಗಳಿಂದ ಉಂಟಾಗುವ ಈ ರೋಗವನ್ನು ನಿರ್ವಹಿಸಲು ನುಶಿ ನಾಶಕಗಳಾದ ಡೈಕೋಫಾಲ್ 20 ಇ.ಸಿ. 2.5 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ, ಬೆಳೆಯ ಮೇಲೆ ಸಿಂಪರಿಸಬೇಕು. ಮಾಹಿತಿಗೆ ಕೃಷಿ ಅಧಿಕಾರಿಗಳನ್ನು, ವಿಜ್ಞಾನಿಗಳನ್ನು ಸಂಪರ್ಕಿಸಬಹುದು.
ಸಮೀಕ್ಷೆ ತಂಡದಲ್ಲಿ

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಎನ್.ಎಂ. ಸುನೀಲಕುಮಾರ ಯರಬಾಗ್, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಕೃಷಿ ಇಲಾಖೆಯ ಸಂಜೀವಕುಮಾರ ಮಾನಕರೆ, ಭೀಮರಾವ್ ಹುಲಸೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT