ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮ ಸಂಸ್ಕೃತಿಯಿಂದ ರಚಿತವಾದದ್ದು ನೈಜ ಸಾಹಿತ್ಯ

ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಅರ್ಜುನ್ ಗೋಳಸಂಗಿ ಹೇಳಿಕೆ
Last Updated 18 ಫೆಬ್ರುವರಿ 2017, 6:05 IST
ಅಕ್ಷರ ಗಾತ್ರ
ಹುಮನಾಬಾದ್: ‘ಕಲ್ಪನೆಯಿಂದ ರಚಿತ ಸಾಹಿತ್ಯಕ್ಕಿಂತ ನೊಂದ ಮತ್ತು ಶ್ರಮ ಸಂಸ್ಕೃತಿಯಿಂದ ರಚಿತವಾದದ್ದೇ ನೈಜ ಸಾಹಿತ್ಯ’ ಎಂದು ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕ ಅಧ್ಯಕ್ಷ ಡಾ.ಅರ್ಜುನ್ ಗೋಳಸಂಗಿ ಹೇಳಿದರು.
 
ಇಲ್ಲಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ದಲಿತ ಸಾಹಿತ್ಯ ಪರಿಷತ್‌ ಶುಕ್ರವಾರ ಏರ್ಪಡಿಸಿದ್ದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಉಪನ್ಯಾಸ ನೀಡಿದರು.
 
‘ದಲಿತರು ದಲಿತರೆಂದು ಎದೆತಟ್ಟಿ ಹೇಳಿಕೊಳ್ಳಲು ಹಿಂದೇಟು ಹಾಕಬಾರದು. ದಲಿತರಲ್ಲಿ ಮನುಷ್ಯತ್ವವಿದೆ. ಅವರನ್ನೂ ಮನುಷ್ಯರನ್ನಾಗಿ ಕಾಣಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮೊದಲಾದ ಹಕ್ಕು ಎಲ್ಲರಂತೆ ನಮಗೂ ಇದೆ. ಆದರೆ, ಹಕ್ಕು ಕೇಳಲು ಬಂದವರೆಲ್ಲರನ್ನು ಅಸ್ಪೃಶ್ಯರನ್ನಾಗಿ ಕಾಣುವುದರ ಜೊತೆಗೆ ಸಮಾಜದಿಂದ ಬಹಿಷ್ಕರಿಸುವಂಥ ಕ್ರೂರ ಕೃತ್ಯ ನಡೆಯುತ್ತಿರುವುದು ನಿಜಕ್ಕೂ ನೋವಿನ ಸಂಗತಿ’ ಎಂದರು.
 
‘ಊರು ಸ್ವಚ್ಛಗೊಳಿಸುವವರು ಊರ ಹೊರಗೆ, ಊರ ಗಬ್ಬೇರಿಸುವವರು ಊರ ಮಧ್ಯದಲ್ಲಿ ರಾಜಾರೋಷವಾಗಿ ವಾಸಿಸುವ ಸ್ಥಿತಿ ಬಂದಿರುವುದು ತರವಲ್ಲ. ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಸರ್ಕಾರ ಈಗಲೂ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸುತ್ತಿಲ್ಲ’ ಎಂದು ವಿಷಾದಿಸಿದರು. ‘ವ್ಯವಸ್ಥೆ ಬದಲಾಗಬೇಕಾದರೆ ಹೋರಾಟದ ಮಾರ್ಗ ಅನಿವಾರ್ಯ. ರಾಜ್ಯದ ಗಜಲ್‌ ಖ್ಯಾತಿಯ ಬರಹಗಾರ್ತಿ ಡಾ.ಜಯದೇವಿ ಗಾಯಕವಾಡ ಅವರಿಗೆ ಸಮ್ಮೇಳನ ಸರ್ವಾಧ್ಯಕ್ಷ ಪಟ್ಟ ಕೊಟ್ಟಿದ್ದು ಅರ್ಥಪೂರ್ಣ’ ಎಂದು ಹೇಳಿದರು.
 
ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಘಟಕದ ಸಂಚಾಲಕ ಆರ್‌.ಮೋಹನರಾಜ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಘಟಕದ ಸಂಚಾಲಕ ಮಾವಳ್ಳಿ ಶಂಕರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಎಂ.ಡಾಕುಳಗಿ ಮಾತನಾಡಿದರು. ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
 
ಗಣ್ಯರಾದ ಬಸವರಾಜ ಆರ್ಯ, ಗಜೇಂದ್ರ ಕನಕಟಕರ್‌, ಶಂಭುಲಿಂಗ ವಾಲ್ದೊಡ್ಡಿ, ಎಸ್‌.ಎಂ.ಜನವಾಡಕರ್‌, ಪಾರ್ವತಿಬಾಯಿ ಮಾಳಗೆ, ರವೀಂದ್ರ ಭಂಡಾರಿ, ಶಿಕ್ಷಣ ಪ್ರೇಮಿ ನವೀನ್‌ ಪಿ.ಬತಲಿ, ಲಕ್ಷ್ಮಿಪುತ್ರ ಮಾಳಗೆ, ಸುರೇಶ ವಿ.ಘಾಂಗ್ರೆ, ದಲಿತ ಸಮನ್ವಯ ಸಮಿತಿ ಅಧ್ಯಕ್ಷ ಗೌತಮ ಸೇಡೋಳ್, ತಾಲ್ಲೂಕು ಪಂಚಾಯಿತಿ ಇಒ ಡಾ.ಎಂ.ಪಿ.ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ಸುರೇಶ ಬಬಲಾದ, ರಘುನಾಥ ಘಂಟೆ, ವೀರಣ್ಣ ಕುಂಬಾರ, ಮಡೆಪ್ಪ ಕುಂಬಾರ, ಶಶಿಕಾಂತ ಘಾವಲ್ಕರ್, ಶರದ್‌ಕುಮಾರ ಇದ್ದರು.  
 
ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಹೀಂದ್ರಕರ್‌ ಸ್ವಾಗತಿಸಿದರು. ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಿವರಾಜ ಮೇತ್ರೆ ಪ್ರಾಸ್ತಾವಿಕ ಮಾತನಾಡಿದರು. ಐ.ಎಸ್‌.ಶಖಿಲ್‌ ನಿರೂಪಿಸಿದರು. ಭೀಮಶಾ ಜಲಸಂಗಿ ವಂದಿಸಿದರು.
 
ಅದ್ದೂರಿ ಮೆರವಣಿಗೆ: ತಾಲ್ಲೂಕು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಜಯದೇವಿ ಗಾಯಕವಾಡ ಅವರನ್ನು ಶುಕ್ರವಾರ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸಮಾರಂಭದ ವೇದಿಕೆಗೆ ಕರೆತರಲಾಯಿತು.
 
ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಡಾ.ಅಂಬೇಡ್ಕರ್‌ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಭೂಸೇನಾ ನಿಗಮ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು. ಬ್ರಾಸ್‌ಬ್ಯಾಂಡ್‌, ಡೊಳ್ಳು ಕುಣಿತ, ಸೇಡೋಳ ಮುಸುಕು ಧಾರಿ ಬೊಂಬೆ ಕುಣಿತ, ಕಿಟ್ಟಾದ ಹಲಗೆ ವಾದ್ಯ, ಬೆಮಳಖೇಡಾ ಉರಿಲಿಂಗಪೆದ್ದಿ ಮಹಿಳಾ ಕಲಾ ತಂಡದ ಗೋಪು ಕೋಲಾಟ, ಹುಮನಾಬಾದ್‌ ಇಂದಿರಾನಗರದ ಮೀರಾತಾಯಿ ಮಹಿಳಾ ತಂಡದ ಭಜನೆ, ಪ್ರೀಯದರ್ಶಿನಿ ಮಹಿಳಾ ಮಂಡಳ ಭಜನೆ, ಯುವಕರ ಚಿಟಿಕೆ ನೃತ್ಯ ಮೆರವಣಿಗೆಗೆ ಮೆರುಗು ತಂದವು.

ಪ್ರಮುಖ ವೃತ್ತಗಳಲ್ಲಿ ಶಾಸಕ ರಾಜಶೇಖರ ಬಿ.ಪಾಟೀಲ ಒಳಗೊಂಡು ಸಮ್ಮೇಳನ ಸ್ವಾಗತ ಸಮಿತಿ ಪ್ರಮುಖರು, ಮುಖಂಡರು ಧ್ವನಿ ಸುರುಳಿಗೆ ತಕ್ಕಂತೆ ಹೆಜ್ಜೆ ಹಾಕಿದರು. ಪಟ್ಟಣದ ಪ್ರಮುಖ ವೃತ್ತಗಳ ಮಾರ್ಗವಾಗಿ ನಡೆದ ಮೆರವಣಿಗೆ ವೀರಭದ್ರೇಶ್ವರ ದೇವಸ್ಥಾನ ಪಕ್ಕದ ಸಮ್ಮೇಳನಾಂಗಳ ತಲುಪಿತು.
ಹೈದರಾಬಾದ್‌ ಐಎಸ್‌ಎಫ್‌ ಅಧಿಕಾರಿ ಕಾಶಿನಾಥ ಉತ್ತಮ, ಜಾರ್ಖಂಡ್‌ ಜಿಲ್ಲಾ ಅರಣ್ಯ ಅಧಿಕಾರಿ ಮಹಾಲಿಂಗ ಮಹೀಂದ್ರಕರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ ದತ್ತಾತ್ರಯ್‌ ಕರ್ನಾಡ್‌, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಹೀಂದ್ರಕರ್‌, ಕಾರ್ಯಾಧ್ಯಕ್ಷ ರಮೇಶ ಎಂ.ಡಾಕುಳಗಿ, ಪಶು ವಿಶ್ವವಿದ್ಯಾಲಯ ನಿರ್ದೇಶಕ ಲುಂಬಿನಿ ಗೌತಮ್, ದಲಿತ ಸಮನ್ವಯ ಸಮಿತಿ ಅಧ್ಯಕ್ಷ ಗೌತಮ ಸೇಡೋಳ್‌, ಹಿರಿಯ ಸಾಹಿತಿ ಎಚ್‌.ಕಾಶಿನಾಥರೆಡ್ಡಿ, ಬಿ.ಎಸ್‌.ಖೂಬಾ, ಡಾ.ಸೋಮನಾಥ ಯಾಳವಾರ, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ ಬತಲಿ ಹಾಗೂ ವಿವಿಧ ಶಾಲೆಗಳ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ಎಚ್‌.ಪಾಟೀಲ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ದಲಿತ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಅಧ್ಯಕ್ಷ ಶಿವರಾಜ ಮೇತ್ರೆ ಪರಿಷತ್‌ ಧ್ವಜಾರೋಹಣ ನೆರವೇರಿಸಿದರು.
 
ದಲಿತರ ಅಭಿವೃದ್ಧಿಗೆ ಶಕ್ತಿಮೀರಿ ನೆರವು: ಶಾಸಕ
 
‘ದಲಿತರನ್ನು ಹಿಂದಿನ ಸ್ಥಿತಿಗೆ ಹೋಲಿಸಿದಲ್ಲಿ ಈಗ ಅಜಗಜಾಂತರ ವ್ಯತ್ಯಾಸ ಆಗಿದೆ. ಇದರ ಅರ್ಥ ಅಭಿವೃದ್ಧಿ ಅಗತ್ಯವೇ ಇಲ್ಲ ಎಂದಲ್ಲ. ಡಾ.ಅಂಬೇಡ್ಕರ್‌ ಅವರ ತತ್ವ ಆಧರಿಸಿ ಶಿಕ್ಷಣ– ಸಂಘಟನೆ– ಹೋರಾಟ ಮಾರ್ಗದ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಬೇಕು’ ಎಂದು ಭೂಸೇನಾ ನಿಗಮದ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಹೇಳಿದರು.

ತಾಲ್ಲೂಕು ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಶಿಕ್ಷಣ ಅವಧಿಯಲ್ಲಿ ಇನ್ನಿಲ್ಲದ ನೋವು ಅನುಭವಿಸಿ, ಉನ್ನತ ಹುದ್ದೆ ಜೊತೆಗೆ ಸ್ಥಾನಮಾನ ಗಿಟ್ಟಿಸಿಕೊಂಡ ಡಾ.ಜಯದೇವಿ ಗಾಯಕವಾಡ ಸಾಧನೆ ಇತರರಿಗೆ ಮಾದರಿ’ ಎಂದರು.

‘ಜಾತಿ ಪದ್ಧತಿ ವಿರುದ್ಧ 12ನೇ ಶತಮಾನದಲ್ಲೇ ಕ್ರಾಂತಿಯಾಗಿತ್ತು. ಅದನ್ನು ಡಾ.ಜಯದೇವಿ ಹಾಗೂ ಡಾ.ಗವಿಸಿದ್ದಪ್ಪ ಪಾಟೀಲ ದಂಪತಿ ಅಂತರ್ಜಾತಿ ವಿವಾಹ ಆಗುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ. ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ಮೂಲಕ ಈ ಭಾಗದ ಸಾಹಿತ್ಯ ಪರಿಸರ ನಿರ್ಮಿಸಲು ಶ್ರಮಿಸುತ್ತಿರುವುದು ಪ್ರಶಂಸನೀಯ’ ಎಂದ ಅವರು ‘ದಲಿತ ಸಮುದಾಯದ ಪ್ರಗತಿಗಾಗಿ ಶಕ್ತಿಮೀರಿ ನೆರವು ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಮಿಲಿಂದ ಗುರೂಜಿ, ಸಂಗಾನಂದ ಭಂತೇಜಿ, ಅಣದೂರಿನ ಧಮ್ಮನಂದ ಭಂತೇಜಿ, ಸಿದ್ದರಾಮ ಶರಣರು ಬೆಲ್ದಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ ಪಾಟೀಲ, ದುರ್ಯೋಧನ ಹೂಗಾರ, ಪ್ರತಿಭಾ ಪರಿಷತ್‌ ಅಧ್ಯಕ್ಷ ವೀರಂತರೆಡ್ಡಿ ಜಂಪಾ, ರವೀಂದ್ರರೆಡ್ಡಿ ಮಾಲಿಪಾಟೀಲ, ಶ್ರೀದೇವಿ ಮೋತಕಪಳ್ಳಿ, ಸಾರಿಕಾ ಗಂಗಾ, ನಾಗಶೆಟ್ಟಿ ಡುಮಣಿ, ಪ್ರವೀಣ ಇದ್ದರು.
 
* ಹುಮನಾಬಾದ್‌ನಲ್ಲಿ ನಡೆದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಐತಿಹಾಸಿಕ ಕಾರ್ಯಕ್ರಮ. ಮೆರವಣಿಗೆ ಮತ್ತು ಸಮಾರಂಭದಲ್ಲಿ ಜಾತಿ, ಪಕ್ಷ, ಗುಂಪುಗಾರಿಕೆ ತೊರೆದು ಎಲ್ಲರೂ ಒಮ್ಮನಸ್ಸಿನಿಂದ ಭಾಗವಹಿಸಿದ್ದು, ಅವಿಸ್ಮರಣೀಯ
- ರಾಜಶೇಖರ ಬಿ.ಪಾಟೀಲ, ಅಧ್ಯಕ್ಷ, ಕರ್ನಾಟಕ ಭೂಸೇನಾ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT