ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾರೂಢರು ಕೆಳವರ್ಗದವರನ್ನು ಪೀಠದ ಮೇಲೆ ಕೂರಿಸಿದ್ದರು

Last Updated 28 ಜನವರಿ 2012, 10:25 IST
ಅಕ್ಷರ ಗಾತ್ರ

ಬೀದರ್: ಕೆಳ ಜಾತಿಯವರನ್ನು ಮಠಾಧೀಶರನ್ನಾಗಿ ಮಾಡಿದ ಶ್ರೇಯಸ್ಸು ಸಿದ್ಧಾರೂಢರಿಗೆ ಸಲ್ಲುತ್ತದೆ ಎಂದು ಖ್ಯಾತ ಪ್ರವಚನಕಾರ ಇಬ್ರಾಹಿಂ ಸುತಾರ್ ನುಡಿದರು.

ಸಿದ್ಧಾರೂಢರ 175ನೇ ಜಯಂತಿ ಉತ್ಸವ ಹಾಗೂ ಗುರುನಾಥಾರೂಢರ ಜನ್ಮ ಶತಮಾನೋತ್ಸವ ನಿಮಿತ್ತ ನಗರದ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸರ್ವಧರ್ಮ ಶಾಂತಿ ಸಮ್ಮೇಳನ ಹಾಗೂ ಜ್ಯೋತಿಯಾತ್ರೆಯ ಸ್ವಾಗತ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಿದ್ಧಾರೂಢರು, ಜಾತಿ, ಭೇದವಿಲ್ಲದೇ ಸೂಕ್ತರನ್ನು ಮಠಮಾನ್ಯಗಳಿಗೆ ನೇಮಕ ಮಾಡಿದ್ದರು ಎಂದು ಬಣ್ಣಿಸಿದರು.
ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದ್ದರು. ವಿದ್ಯೆಯೇ ಉಪನಿಷತ್ ಎಂದು ಸಾರಿದ್ದರು. 15ನೇ ಶತಮಾನದ ನಿಜಗುಣ ಶಿವಯೋಗಿಗಳ ಷಟ್‌ಶಾಸ್ತ್ರ ಗ್ರಂಥವನ್ನು ಪ್ರಚಾರಕ್ಕೆ ತಂದದ್ದೇ ಅವರು ಎಂದು ಹೇಳಿದರು.

ಸಿದ್ಧಾರೂಢರು ದೇವತಾ ಪುರುಷರಾಗಿದ್ದರು ಎಂದು ಸಾನ್ನಿಧ್ಯ ವಹಿಸಿದ್ದ ಶಿವಕುಮಾರ ಸ್ವಾಮೀಜಿ ಹೇಳಿದರು.
`ಶರಣರ ಮಹಿಮೆ ಮರಣದ ನಂತರ ಕಾಣು~ ಎನ್ನುವಂತೆ ಮಹಾತ್ಮರ ಜೀವಿತಾವಧಿಯಲ್ಲಿ ಅವರನ್ನು ಬೈದವರೇ ಹೆಚ್ಚು. ರಾಷ್ಟ್ರಪಿತ ಎಂದು ಕರೆಯಲಾಗುವ ಮಹಾತ್ಮಗಾಂಧೀಜಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಿದ್ಧಾರೂಢರು ಜೀವಂತರಾಗಿದ್ದಾಗಲೂ ಕಲ್ಲಿನಿಂದ ಹೊಡೆದು ಅವರಿಗೆ ಹಿಂಸೆ ನೀಡಲಾಯಿತು ಎಂದು ತಿಳಿಸಿದರು.

ಗುರುವನ್ನು ನರ ಎಂದವನಿಗೆ ನರಕ ತಪ್ಪದು. ದೇವರ ನಾಮ ಸ್ಮರಣೆ ಮಾಡುವವನೇ ದೊಡ್ಡವ ಎಂದು ಬಣ್ಣಿಸಿದರು.

ಸಿದ್ಧಾರೂಢರ ಜಯಂತಿ ಮಹೋತ್ಸವ ಕರ್ನಾಟಕಕ್ಕೆ ಮಾತ್ರ ಸಿಮೀತವಾಗದೇ ಇಡೀ ದೇಶದಲ್ಲಿ ಆಚರಿಸುವಂತಾಗಬೇಕು ಎಂದು ಪ್ರಮುಖರಾದ ಮಹೇಂದ್ರ ಸಿಂಘಿ  ಹೇಳಿದರು.
ಸಿದ್ಧಾರೂಢರು ಚಳಕಾಪುರದಲ್ಲಿ ಜನಿಸಿದ್ದು ಜಿಲ್ಲೆಯ ಜನರ ಭಾಗ್ಯ ಎಂದು ಶಾಸಕ ಈಶ್ವರ ಖಂಡ್ರೆ ವರ್ಣಿಸಿದರು.

ಸಿದ್ಧಾರೂಢರ 175ನೇ ಜಯಂತ್ಯುತ್ಸವ ಪ್ರಯುಕ್ತ ಅವರ ಜನ್ಮಸ್ಥಳ ಚಳಕಾಪುರದಿಂದ ಹುಬ್ಬಳ್ಳಿಯವರೆಗೆ ಶಾಂತಿ ಜ್ಯೋತಿಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಮಾನಂದ ಪೂಜಾರಿ ತಿಳಿಸಿದರು. ಸಿದ್ಧಾರೂಢರು ಜಾತ್ಯತೀತ ಗುರುಗಳಾಗಿದ್ದರು ಎಂದರು.

ಚನ್ನಬಸಪ್ಪ ಹಾಲಹಳ್ಳಿ ಸ್ವಾಗತಿಸಿದರು. ಗಣೇಶಾನಂದ ಮಹಾರಾಜ ನಿರೂಪಿಸಿದರು. ಇದಕ್ಕೂ ಮುನ್ನ ಸಿದ್ಧಾರೂಢ ಜ್ಯೋತಿಯಾತ್ರೆಗೆ ಭವ್ಯ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT