ಬುಧವಾರ, ಮಾರ್ಚ್ 3, 2021
19 °C
ಶ್ರದ್ಧಾಂಜಲಿ ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಬಣ್ಣನೆ

ಸುಷ್ಮಾ ಸ್ವರಾಜ್ ಮಾದರಿ ವಿಶೇಶಾಂಗ ಸಚಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸುಷ್ಮಾ ಸ್ವರಾಜ್ ಇನ್ನಿಲ್ಲ ಎಂದರೆ ನಂಬುವುದೇ ಕಷ್ಟ. ಅವರದು ಅದ್ಭುತ ಪ್ರತಿಭೆ. ವಿದೇಶಾಂಗ ಸಚಿವೆಯಾಗಿ ಅವರು ಮಾಡಿದ ಕೆಲಸ ಇಂದಿಗೂ ಮಾದರಿ. ಮುಸ್ಲಿಂ ರಾಷ್ಟ್ರಗಳ ಸಭೆ ಉದ್ಘಾಟಿಸಿ ಮಾತನಾಡಿದ ಕೀರ್ತಿಗೂ ಅವರು ಪಾತ್ರರಾಗಿದ್ದರು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಬಣ್ಣಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸುಷ್ಮಾ ಸ್ವರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.

ಅವರು ರಾಜಕೀಯಕ್ಕೇ ಸೀಮಿತವಾಗಿರಲಿಲ್ಲ. ಅವರಿಗೆ ಅಡುಗೆ ಮಾಡುವುದೂ ಗೊತ್ತಿತ್ತು. ಒಳ್ಳೆಯ ವಾಗ್ಮಿ, ಅವರ ತಾಯ್ತನ ಬಿಜೆಪಿ ಪಕ್ಷವನ್ನೇ ಕಾಪಾಡಿದೆ ಎಂದು ಶ್ಲಾಘಿಸಿದರು.

ಸುಷ್ಮಾ ಸ್ವರಾಜ್ ಮಾತೃ ಹೃದಯಿ. ಪಕ್ಷದ ಎಲ್ಲ ಕಾರ್ಯಕರ್ತರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದರು. ಅವರ ಹಣೆಯಲ್ಲಿ ಅಗಲ ಕುಂಕುಮ, ಕೈಯಲ್ಲಿ ಬಳೆ, ಮುಖದಲ್ಲಿ ಮುಗ್ಧತೆ ಇತ್ತು. ನೋಡಿದ ತಕ್ಷಣ ಗೌರವ ಭಾವನೆ ಸಹಜವಾಗಿ ಮೂಡುತ್ತಿತ್ತು. ಅವರ ಅಗಲಿಕೆ ಒಬ್ಬ ತಾಯಿ, ಅಕ್ಕನನ್ನು ಕಳೆದುಕೊಂಡ ನೋವು ತರುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಬಣ್ಣಿಸಿದರು.ಕಂಬನಿ ಮಿಡಿದರು.

ಅಂದಿನ ಬಿಜೆಪಿ ನಾಯಕರ ಮಧ್ಯೆ ಮಹಿಳಾ ನಾಯಕಿಯಾಗಿ ಬೆಳೆದವರು. ದೇಶಪ್ರೇಮಿ, ಸಂಘಟನೆ ಚತುರೆಯಾಗಿದ್ದರು. ಬಹುಭಾಷಾ ಪಾಂಡಿತ್ಯ ಹೊಂದಿದ್ದರು. ಬಳ್ಳಾರಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ನಂತರ ಕನ್ನಡ ಕಲಿತಿದ್ದರು. ಅವರದು ಬಹುಮುಖ ಪ್ರತಿಭೆ ಎಂದು ಬಣ್ಣಿಸಿದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರದ ಐತಿಹಾಸಿಕ ನಿರ್ಧಾರದ ಸುದ ವಾಜಪೇಯಿ ಅವರಿಗೆ ತಲುಪಿಸಲು ಸುಷ್ಮಾ ಸ್ವರಾಜ್ ಸ್ವರ್ಗಕ್ಕೆ ಹೋಗಿದ್ದಾರೆ ಎಂದು ಭಾವಿಸುವೆ. ಅವರು ಅಪ್ಪಟ ದೇಶಪ್ರೇಮಿ. ಅವರು ತಮ್ಮ ಕೊನೆಯ ಟ್ವೀಟ್‌ನಲ್ಲಿ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಿರ್ಧಾರ ಸ್ವಾಗತಿಸಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ ಮಾತನಾಡಿ, ಸುಷ್ಮಾ ಮೇರು ವ್ಯಕ್ತಿತ್ವದವರು. ಬಳ್ಳಾರಿಯ ಉಪ ಚುನಾವಣೆಗೆ ಅವರು ರಾಜ್ಯಕ್ಕೆ ಬಂದು ಕನ್ನಡ ಕಲಿತಿದ್ದರು. ಅವರ ಸರಳತೆ, ಸಾಮಾಜಿಕ ಬದ್ಧತೆ, ಕಳಕಳಿ ಎಲ್ಲರಿಗೂ ಮಾದರಿ. ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ವಿಧಾನ ಪರಿಷತ್ ಮಾಜಿ ಶಾಸಕ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ಬಿಜೆಪಿ ಸಿದ್ಧಾಂತಗಳ ಪ್ರತಿರೂಪವಾಗಿದ್ದರು. ರಾಮ ಮಂದಿರ ನಿರ್ಮಾಣ ಹಾಗೂ ಏಕ ರೀತಿಯ ನಾಗರಿಕ ಸಂಹಿತೆ ಜಾರಿಯಾಗುವವರೆಗೆ ಅವರು ನಮ್ಮ ಜತೆ ಇರಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.