ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಲ್ವೊ ರಸ್ತೆಗಿಳಿಸಿ–‍ ಪ್ರಯಾಣ ದರವನ್ನೂ ಇಳಿಸಿ: ಬಿಎಂಟಿಸಿ ಪ್ರಯಾಣಿಕರ ಒತ್ತಾಯ

ಬಸ್‌ ಸಂಚಾರ ನಿಲ್ಲಿಸಿ ನಷ್ಟ ಮಾಡುವ ಬದಲು ಕಾರ್ಯಾಚರಣೆ ನಡೆಸಲು ಹೆಚ್ಚಿದ ಬೇಡಿಕೆ
Last Updated 6 ಡಿಸೆಂಬರ್ 2021, 21:39 IST
ಅಕ್ಷರ ಗಾತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಾಗಿ ಮಗ್ಗಲು ಬದಲಿಸಿದ ಬೆಂಗಳೂರಿನಲ್ಲಿ ಜನರಿಗೆ ಹವಾನಿಯಂತ್ರಿತ ಸಾರಿಗೆ ಸೇವೆ ಒದಗಿಸಲು ಖರೀದಿಸಿದ ವೋಲ್ವೊ ಬಸ್‌ಗಳು ಬಿಎಂಟಿಸಿಗೆ ಅಕ್ಷರಶಃ ಬಿಳಿಯಾನೆಗಳಂತಾಗಿವೆ. ನಗರದ ರಸ್ತೆಗಳಲ್ಲಿ ಒಂದೆಡೆ ಬಿಎಂಟಿಸಿಯ ಹಳೇ ಬಸ್‌ಗಳು ಸಂಚರಿಸುತ್ತಿದ್ದರೆ, ಇನ್ನೊಂದೆಡೆ ವೋಲ್ವೊ ಬಸ್‌ಗಳು ಕೋವಿಡ್‌ ಬಳಿಕ ಉಪಯೋಗಕ್ಕೆ ಬಾರದೆ ಮೂಲೆ ಸೇರಿವೆ.

ಕೋವಿಡ್ ಅಲೆಗಳ ಅಬ್ಬರದಲ್ಲಿ ಪ್ರಯಾಣಿಕರ ಕೊರತೆಯಿಂದ ಮೂಲೆ ಸೇರಿದ್ದ 700ಕ್ಕೂ ಹೆಚ್ಚು ವೋಲ್ವೊ ಬಸ್‌ಗಳು ಮರಳಿ ರಸ್ತೆಗಿಳಿದಿಲ್ಲ. ಈ ಬಸ್‌ಗಳನ್ನು ಬಳಸದೇ ನಿಲ್ಲಿಸಿ, ಅವುಗಳ ನಿರ್ವಹಣೆಗೆ ಕೋಟ್ಯಂತರ ರೂಪಾಯಿಗಳನ್ನು ವೃಥಾ ವ್ಯಯಿಸುವ ಬದಲು ಪ್ರಯಾಣ ದರ ಕಡಿಮೆ ಮಾಡಿ ಈ ಬಸ್‌ಗಳನ್ನು ರಸ್ತೆಗೆ ಇಳಿಸಬೇಕು. ಇದರಿಂದ ನಿಗಮಕ್ಕೆ ನಷ್ಟ ತಪ್ಪಲಿದೆ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಪ್ರತಿಪಾದಿಸಿದ್ದಾರೆ.

ಐ.ಟಿ ಕಂಪನಿಗಳ ತವರಾಗಿ ಬದಲಾದ ಬೆಂಗಳೂರಿಗೆ ಐಷಾರಾಮಿ ಸಾರಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ವೋಲ್ವೊ ಬಸ್‌ಗಳನ್ನು ಬಿಎಂಟಿಸಿ ಪರಿಚಯಿಸಿತು. 2014–15ರಲ್ಲಿ ವೋಲ್ವೊ ಬಸ್‌ಗಳನ್ನು ಬಿಎಂಟಿಸಿ ರಸ್ತೆಗೆ ಇಳಿಸಿತ್ತು. ಸದ್ಯ ಒಟ್ಟು 860 ವೋಲ್ವೊ ಬಸ್‌ಗಳು ನಿಗಮದಲ್ಲಿವೆ. ಇವುಗಳಲ್ಲಿ 300 ಬಸ್‌ಗಳನ್ನು ಒಪ್ಪಂದದ ಸೇವೆಗಾಗಿ ಸಾಫ್ಟ್‌ವೇರ್ ಕಂಪನಿಗಳಿಗೆ ಬಿಎಂಟಿಸಿ ಒದಗಿಸಿತ್ತು. ಉದ್ಯೋಗಿಗಳನ್ನು ಬೆಳಿಗ್ಗೆ ಕರೆದೊಯ್ದು ಅಲ್ಲೇ ನಿಲ್ಲಿಸಿಕೊಂಡು ಸಂಜೆ ಅವರನ್ನು ಮನೆಗಳಿಗೆ ತಲುಪಿಸುವ ಜವಾಬ್ದಾರಿ ಇತ್ತು. ದಿನಕ್ಕೆ ₹10 ಸಾವಿರದಿಂದ ₹15 ಸಾವಿರ ತನಕ ಬಾಡಿಗೆ ಆಧಾರದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದವು. ಬೇರೆ ಬಸ್‌ಗಳಲ್ಲಿ ಪ್ರತಿ ಕಿ.ಮೀಗೆ ₹11ರಷ್ಟನ್ನುನಿರ್ವಾಹಕರ ಸಲುವಾಗಿ ಬಿಬಿಎಂಪಿ ವೆಚ್ಚ ಮಾಡುತ್ತದೆ. ಆದರೆ, ಒಪ್ಪಂದ ಸಾರಿಗೆಗಳಲ್ಲಿ ನಿರ್ವಾಹಕರ ವೆಚ್ಚವೂ ಸಂಸ್ಥೆಗೆ ಇರಲಿಲ್ಲ.

ಉಳಿದ ಬಸ್‌ಗಳನ್ನು ಸಾಫ್ಟ್‌ವೇರ್ ಕಂಪನಿಗಳಿರುವ ಮಾರ್ಗದಲ್ಲೇ ಹೆಚ್ಚಿನದಾಗಿ ಕಾರ್ಯಾಚರಣೆಗೆ ಇಳಿಸಲಾಗಿತ್ತು. ಆರಂಭದಲ್ಲಿ ಐ.ಟಿ ಉದ್ಯೋಗಿಗಳು ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು. ಆ್ಯಪ್‌ ಆಧರಿತ ಟ್ಯಾಕ್ಸಿ ಸೇವೆ ಒದಗಿಸುವ ಓಲಾ, ಉಬರ್‌ನಂತಹ ಕಂಪನಿಗಳು ಕಡಿಮೆ ದರದಲ್ಲಿ ಟ್ಯಾಕ್ಸಿ ಸೇವೆ ಒದಗಿಸಿದ ಬಳಿಕ ವೋಲ್ವೊ ಬಸ್ ಹತ್ತುವ ಪ್ರಯಾಣಿಕರ ಸಂಖ್ಯೆ ಇಳಿಕೆ ಆಯಿತು.

ಕೋವಿಡ್‌ ಬಳಿಕ ಐ.ಟಿ ಕಂಪನಿಯ ಬಹುತೇಕ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಬಸ್‌ಗಳೂ ಈಗ ಡಿಪೊಗಳಲ್ಲೇ ನಿಂತಿವೆ. ಈ ಬಸ್‌ಗಳ ಪ್ರತಿ ಕಿಲೋ ಮೀಟರ್‌ ಸಂಚಾರಕ್ಕೆ ₹80ರಿಂದ ₹85 ವೆಚ್ಚವಾಗುತ್ತಿತ್ತು. ಆದರೆ, ಕೋವಿಡ್ ಸಂದರ್ಭದಲ್ಲಿ ಪ್ರತಿ ಕಿಲೋ ಮೀಟರ್‌ಗೆ ‌ವರಮಾನದ ಪ್ರಮಾಣ ₹50ಕ್ಕೆ ಇಳಿಕೆಯಾಗಿತ್ತು. ಆದ್ದರಿಂದ ಬಹುತೇಕ ಬಸ್‌ಗಳ ಸಂಚಾರವನ್ನೇ ನಿಲ್ಲಿಸಲಾಗಿದೆ.

ವೋಲ್ವೊ ಬಸ್‌ಗಳ ಪ್ರಯಾಣ ದರ ಗರಿಷ್ಠ ₹90 ಮತ್ತು ದಿನದ ಪಾಸ್ ದರ ₹100 ಇದೆ. ಕೋವಿಡ್ ಕಡಿಮೆಯಾದ ಸಂದರ್ಭದಲ್ಲೂ ಸಾಮಾನ್ಯ ಪ್ರಯಾಣಿಕರು ಈ ಬಸ್‌ಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರಯಾಣ ದರ ಮತ್ತು ಪಾಸ್ ದರ ಕಡಿಮೆ ಮಾಡಿದರೆ ಸಾಮಾನ್ಯ ಜನರೂ ಈ ಬಸ್‌ಗಳನ್ನು ಬಳಸಲು ಒಲವು ತೋರಬಹುದು ಎನ್ನುತ್ತಾರೆ ಪ್ರಯಾಣಿಕರು.‌

‘ಬಸ್‌ಗಳನ್ನು ರಸ್ತೆಗೆ ಇಳಿಸಬೇಕು’

‘ನಗರದಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಬಿಎಂಟಿಸಿ ದೊಡ್ಡ ಪಾತ್ರ ವಹಿಸಿದೆ. ಬಸ್‌ಗಳನ್ನು ಡಿಪೊಗಳಲ್ಲೇ ನಿಲ್ಲಿಸುವ ಬದಲು ರಸ್ತೆಗೆ ಇಳಿಸಬೇಕು’ ಎಂದು ಸಿಟಿಜನ್ ಫಾರ್ ಸಿಟಿಜನ್ಸ್‌ನ ಸಂಸ್ಥಾಪಕ ರಾಜಕುಮಾರ್ ದುಗಾರ್ ಸಲಹೆ ನೀಡಿದರು.

‘ಬಸ್‌ಗಳನ್ನು ಯಾವುದೇ ಕಾರಣಕ್ಕೂ ನಿಂತಲ್ಲೇ ನಿಲ್ಲಿಸಬಾರದು. ನಿಲ್ಲಿಸುವುದರಿಂದ ವಾಹನಗಳ ಎಂಜಿನ್ ಹಾಳಾಗುತ್ತದೆ. ಅದರ ಬದಲು ರಸ್ತೆಗೆ ಇಳಿಸಿದರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ’ ಎಂದರು.

ಯಾವ ಮಾರ್ಗದಲ್ಲಿ ಬೇಡಿಕೆ ಇದೆ ಎಂಬುದನ್ನು ಪರಿಶೀಲಿಸಿ ವೋಲ್ವೊ ಬಸ್‌ಗಳನ್ನು ಆ ಮಾರ್ಗಗಳಲ್ಲಿ ಓಡಿಸಬೇಕು ಎಂದು ಒತ್ತಾಯಿಸಿದರು.

‘ಪ್ರಾಯೋಗಿಕ ಸಂಚಾರ ಆರಂಭಿಸಬಹುದು’

ಹವಾನಿಯಂತ್ರಿತ (ಎ.ಸಿ) ವ್ಯವಸ್ಥೆ ಹೊಂದಿರುವ ವೋಲ್ವೊ ಬಸ್‌ ಹತ್ತಲು ಕೋವಿಡ್‌ ಸಂದರ್ಭದಲ್ಲಿ ಜನ ಹಿಂದೇಟು ಹಾಕುತ್ತಿದ್ದಾರೆ. ವೋಲ್ವೊ ಕಂಪನಿಯನ್ನು ಸಂಪರ್ಕಿಸಿ ಎ.ಸಿ ವ್ಯವಸ್ಥೆ ತೆಗೆಯಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೋರಾಟಗಾರ ಕೃಷ್ಣ ಪ್ರಸಾದ್ ಸಲಹೆ ನೀಡಿದರು.

‘ಪ್ರಯಾಣ ದರ ಕಡಿಮೆ ಮಾಡಿ ಕೆಲವು ಮಾರ್ಗಗಳಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿ ಯಶಸ್ವಿಯಾದರೆ ಎಲ್ಲ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಬಹುದು’ ಎಂದರು.

‘ಲಾಭ–ನಷ್ಟದ ಲೆಕ್ಕಾಚಾರ ಇರಬಾರದು’

‘ಸರ್ಕಾರವೇ ನಡೆಸುವ ಸಾರಿಗೆ ಸಂಸ್ಥೆಯಲ್ಲಿ ಲಾಭ ಮತ್ತು ನಷ್ಟದ ಲೆಕ್ಕಾಚಾರ ಇರಬಾರದು. ಕಡಿಮೆ ದರದಲ್ಲಿ ಸೇವೆ ಒದಗಿಸುವುದಷ್ಟೇ ಸಂಸ್ಥೆಯ ಉದ್ದೇಶ ಆಗಿರಬೇಕು. ಸಾಧ್ಯವಾದಷ್ಟು ಕಡಿಮೆ ದರದಲ್ಲಿ ಉತ್ತಮ ಸೌಕರ್ಯವನ್ನು ಬಿಎಂಟಿಸಿ ಒದಗಿಸಬೇಕು’ ಎಂಬುದು ಪ್ರಯಾಣಿಕರ ಅಭಿಪ್ರಾಯ.

‘ಸದ್ಯ ವೋಲ್ವೊ ಬಸ್‌ಗಳ ಸೇವೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಮಾತ್ರ ಇದೆ. ಬಸ್ ಬರುವ ಸಮಯಕ್ಕೆ ನಿಗದಿತ ನಿಲ್ದಾಣಕ್ಕೆ ಹೋಗಿ ಕಾದು ಕುಳಿತುಕೊಳ್ಳಬೇಕು. ಅಷ್ಟು ಶ್ರಮ ವಹಿಸಿ ಬಸ್ ಹತ್ತಿದರೂ ದುಬಾರಿ ಪ್ರಯಾಣ ದರ ಇದೆ. ಅದರ ಬದಲು ಮನೆ ಬಾಗಿಲಿಗೆ ಬರುವ ಆ್ಯಪ್ ಆಧಾರಿತ ಟ್ಯಾಕ್ಸಿಯಲ್ಲಿ ಇಬ್ಬರು ಪ್ರಯಾಣಿಸಿರೆ ಬಸ್‌ ದರಕ್ಕಿಂತ ಕಡಿಮೆ ಆಗಲಿದೆ’ ಎನ್ನುತ್ತಾರೆ ಬಿಟಿಎಂ ಲೇಔಟ್‌ ನಿವಾಸಿ ಮಂಜುನಾಥ್.

‘ಪ್ರಯಾಣಿಕರ ಕೊರತೆಯಿಂದ ವೋಲ್ವೊ ಬಸ್ ಸಂಚಾರ ಕಡಿಮೆ ಮಾಡಲಾಗಿದೆ ಎಂಬುದರಲ್ಲಿ ಅರ್ಥವಿಲ್ಲ. ಲಾಭ–ನಷ್ಟದ ಲೆಕ್ಕಾಚಾರ ಮಾಡಿಕೊಂಡು ಕೂರಲು ಇದು ಖಾಸಗಿ ಸಂಸ್ಥೆಯೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT