ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಒಂದೇ ದಿನ 24 ಪ್ರಕರಣಗಳು

ಹೆಚ್ಚಿನವು ಹೊಸ ಪ್ರಕರಣಗಳು, ನಾಲ್ಕು ವರ್ಷದ ಹೆಣ್ಣು ಮಗು, ಆಟೊ ಚಾಲಕ, ಮೆಕ್ಯಾನಿಕ್‌ ಪಟ್ಟಿಯಲ್ಲಿ
Last Updated 3 ಜುಲೈ 2020, 16:56 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 24 ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ.

ಗುಂಡ್ಲುಪೇಟೆಯಲ್ಲಿ 11, ಚಾಮರಾಜನಗರದಲ್ಲಿ ಏಳು, ಕೊಳ್ಳೇಗಾಲ ಐವರು ಮತ್ತು ಯಳಂದೂರಿನಲ್ಲಿ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಜಿಲ್ಲೆಯಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 78ಕ್ಕೆ ಏರಿದೆ. ಸದ್ಯ, 77 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಶುಕ್ರವಾರ ಸೋಂಕು ದೃಢಪಟ್ಟವರಲ್ಲಿ ನಾಲ್ವರು, ಸೋಂಕಿತರ ಸಂಪರ್ಕಿತರಾಗಿದ್ದಾರೆ. ಉಳಿದವರೆಲ್ಲಾ ಹೊಸಬರು. ಕೋವಿಡ್‌–19ಕ್ಕೆ ತುತ್ತಾದವರ ಪಟ್ಟಿಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗು ಇದೆ. ರೋಗಿ ಸಂಖ್ಯೆ 15,263ರ ಸಂಪರ್ಕದಿಂದಾಗಿ ಮಗುವಿಗೆ ಸೋಂಕು ತಗುಲಿದೆ.

ಚಾಮರಾಜನಗರದ 49 ವರ್ಷದ ಆಟೊ ಚಾಲಕ, ಕೂಲಿ ಕೆಲಸ ಮಾಡುವ, ಚಾಮರಾಜನಗರ 45 ವರ್ಷದ ಮಹಿಳೆ, ಗುಂಡ್ಲುಪೇಟೆಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ 23 ವರ್ಷದ ಯುವಕ, ಗುಂಡ್ಲುಪೇಟೆಯ 32 ವರ್ಷದ ಮೆಕಾನಿಕ್‌, 32 ವರ್ಷದ ಬಟ್ಟೆಯಂಗಡಿಯ ಸಹಾಯಕಿ ಸೇರಿದಂತೆ 20 ಮಂದಿಗೆ ಸೋಂಕು ತಗುಲಿದೆ. ಸೋಂಕು ತಗುಲಿದವರಲ್ಲಿ ಏಳು ಮಂದಿ ಬೆಂಗಳೂರಿಗೆ ಹೋಗಿ ಬಂದಿದ್ದಾರೆ, ಇಬ್ಬರು ಮೈಸೂರಿಗೆ ಪ್ರಯಾಣ ಮಾಡಿದ್ದಾರೆ.

ಗುಂಡ್ಲುಪೇಟೆಯಲ್ಲಿ ವರದಿಯಾದ ಪ್ರಕರಣಗಳಲ್ಲಿ ಹೆಚ್ಚಿನವು ಕಂಟೈನ್‌ಮೆಂಟ್‌ ವಲಯಗಳಿಗೆ ಸೇರಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌–19 ತುತ್ತಾಗಿರುವವರ ಮನೆಗಳು ಇರುವ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.

1,079 ಮಂದಿಯ ವರದಿ ಬಾಕಿ: ಚಾಮರಾಜನಗರ ವೈದ್ಯಕೀಯ ಕಾಲೇಜಿನ ಕೋವಿಡ್‌–19 ಪರೀಕ್ಷಾ ಪ್ರಯೋಗಾಲಯ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ. ಇದುವರೆಗೆ ಜಿಲ್ಲೆಯಲ್ಲಿ 7,149 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 7,069 ಮಂದಿಯ ವರದಿಗಳು ನೆಗೆಟಿವ್‌ ಬಂದಿದೆ.

ಶುಕ್ರವಾರ 498 ಮಂದಿಯ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 1,079 ಮಂದಿಯ ವರದಿ ಬರಬೇಕಿದೆ.

773 ಮಂದಿಯ ಮೇಲೆ ನಿಗಾ: ಸೋಂಕಿತರ 410 ಪ್ರಾಥಮಿಕ ಸಂಪರ್ಕಿತರು ಹಾಗೂ 363 ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಮನೆ ಕ್ವಾರಂಟೈನ್‌ನಲ್ಲಿ ಇರಿಸಿ, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

ಕೆಮ್ಮು, ಶೀತ, ಜ್ವರ ಇದ್ದರೆ ಪರೀಕ್ಷೆ ಮಾಡಿಸಿ

ಮಳೆಗಾಲ ಆರಂಭವಾಗಿರುವುದರಿಂದ ಕೆಮ್ಮು, ನೆಗಡಿ, ಶೀತ ಮತ್ತು ಜ್ವರ ಲಕ್ಷಣಗಳಿರುವವರು ಜಿಲ್ಲೆಯ ವಿವಿಧ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತೆರೆಯಲಾಗಿರುವ ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳಲ್ಲಿ ಗಂಟಲು ದ್ರವ ಮಾದರಿ ನೀಡಿ ಕೋವಿಡ್ ಪರೀಕ್ಷೆಗೆ ಮಾಡಿಸಿಕೊಳ್ಳಿ ಎಂದುಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮನವಿ ಮಾಡಿದ್ದಾರೆ.

ಕೋವಿಡ್ - 19 ಹರಡುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆರೋಗ್ಯವನ್ನು ಹಗುರವಾಗಿ ಪರಿಗಣಿಸಬಾರದು. ಪರೀಕ್ಷೆ ನಡೆಸುವುದರಿಂದ ರೋಗದ ಬಗ್ಗೆ ಇರುವ ಸಂದೇಹ ಪರಿಹಾರವಾಗಲಿದೆ. ಅಗತ್ಯ ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ವಿಶೇಷ ವರ್ಗದವರೆಂದು ಗುರುತಿಸಲಾಗಿರುವ 70 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು, ಎಚ್‌ಐವಿ ಸೋಂಕಿತರು, ಡಯಾಲಿಸಿಸ್‌ಗೆ ಒಳಗಾಗುತ್ತಿರುವವರು, ಕ್ಷಯ, ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿರುವವರು, ಗರ್ಭಿಣಿಯರು, ಬಾಣಂತಿಯರು ಕಡ್ಡಾಯವಾಗಿ ಗಂಟಲು ದ್ರವ ಮಾದರಿ ಪರೀಕ್ಷಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

12 ಕಡೆ ಮಾದರಿ ಸಂಗ್ರಹ ಕೇಂದ್ರ

ಚಾಮರಾಜನಗರದ ಜಿಲ್ಲಾಸ್ಪತ್ರೆ , ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರಿನ ಸಾರ್ವಜನಿಕ ಆಸ್ಪತ್ರೆ, ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿ, ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿ, ಬೇಗೂರಿನ ಸಮುದಾಯ ಆರೋಗ್ಯ ಕೇಂದ್ರ, ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಚಾಮರಾಜನಗರದ ಬಸವ ರಾಜೇಂದ್ರ ಆಸ್ಪತ್ರೆ, ಜೆಎಸ್ಎಸ್ ಆಸ್ಪತ್ರೆ ಹಾಗೂ ಹನೂರು ತಾಲ್ಲೂಕಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲೂ ಗಂಟಲು ದ್ರವ ಸಂಗ್ರಹಣಾ ಕೇಂದ್ರಗಳು ಇರಲಿವೆ ಎಂದು ಡಾ.ಎಂ.ಆರ್. ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT